ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಮರು ಕೆವೈಸಿ ಮಾಡಿಸಿ

 ಹಾಸನ ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಹಾಸನ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕುಗಳ ಸಹಯೋಗದಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಹಾಸನ ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಹಾಸನ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕುಗಳ ಸಹಯೋಗದಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಮರು ಕೆವೈಸಿ ಮಾಡಿಸಿ
  • ಎನ್‌ಡಿಎಂ ಮುಖ್ಯಸ್ಥೆ ಲತಾ ಹೇಳಿಕೆ
  • ಜಾಗೃತಿ ಜಾಥಾ
ಹಾಸನ: ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ ತಮ್ಮ ಖಾತೆಯ ರೀ-ಕೆವೈಸಿ (ಮರು ಕೆವೈಸಿ) ಪ್ರಕ್ರಿಯೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಖಾತೆ ಬ್ಲಾಕ್ ಆಗುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಅಧಿಕಾರಿಗಳು ಎಚ್ಚರಿಕೆ ನೀಡಿದಲ್ಲದೇ ಕೇಂದ್ರದ ಯೋಜನೆಗಳ ಬಗ್ಗೆ ಜಾಥಾದ ಮೂಲಕ ಜಾಗೃತಿ ಮೂಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಹಾಸನ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕ್‌ಗಳ ಸಹಯೋಗದಲ್ಲಿ ಫೆ.9ರಿಂದ 13ರವರೆಗೆ ಬ್ಯಾಂಕಿಂಗ್ ಜಾಗೃತಿ ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಹಣಕಾಸು ಸಾಕ್ಷರತೆ, ಡಿಜಿಟಲ್ ಬ್ಯಾಂಕಿಂಗ್ ಸುರಕ್ಷತೆ ಮತ್ತು ಸೈಬರ್ ಫ್ರಾಡ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಂಗಳವಾರ ನಗರದಲ್ಲಿ ಜಾಥಾ ನಡೆಸಿದರು.
ಜಾಥಾದಲ್ಲಿ ಎನ್‌ಡಿಎಂ ಮುಖ್ಯಸ್ಥರಾದ ಲತಾ ಮಾತನಾಡಿ, ವಿಳಾಸ ಬದಲಾವಣೆ ಇಲ್ಲದಿದ್ದರೂ ಖಾತೆದಾರರು ಯಾವುದೇ ಬ್ಯಾಂಕ್ ಶಾಖೆಗೆ ತೆರಳಿ ರೀ-ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂ ಜೇಜೆವೈ, ಪಿಎಂಎಸ್‌ವೈ ಹಾಗೂ ಅಟಲ್ ಪಿಂಚಣಿ ಯೋಜನೆಗಳಿಗೆ ರೀ-ಕೆವೈಸಿ ಕಡ್ಡಾಯವಾಗಿದ್ದು, ಜಾಗೃತಿ ಇಲ್ಲದಿದ್ದರೆ ಸೌಲಭ್ಯ ಕಳೆದುಕೊಳ್ಳುವ ಅಪಾಯವಿದೆ ಎಂದರು. ಜಿಲ್ಲೆಯಲ್ಲಿ 38 ಬ್ಯಾಂಕ್‌ಗಳು ಈ ಜಾಥಾದಲ್ಲಿ ಭಾಗವಹಿಸಿವೆ ಎಂದು ಮಾಹಿತಿ ನೀಡಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಿಸರ್ವ್ ಮ್ಯಾನೇಜರ್ ಕನಯಲಾಲ್ ಗೋಪಾಲ್ ಮಾತನಾಡಿ, ರೀ-ಕೆವೈಸಿ ಮಾಡಿಸದ ಖಾತೆಗಳು ಬ್ಲಾಕ್ ಆಗುತ್ತಿವೆ. ಜತೆಗೆ ಇತ್ತೀಚೆಗೆ ಸೈಬರ್ ಫ್ರಾಡ್ ಪ್ರಕರಣಗಳು ಹೆಚ್ಚುತ್ತಿದ್ದು, ಒಟಿಪಿ ಮತ್ತು ಪಾಸ್ವರ್ಡ್ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಕಠಿಣ ಎಚ್ಚರಿಕೆ ನೀಡಿದರು. ಯಾವುದೇ ಅನುಮಾನ ಅಥವಾ ಸಮಸ್ಯೆ ಇದ್ದರೆ ನೇರವಾಗಿ ಬ್ಯಾಂಕ್ ಸಂಪರ್ಕಿಸಬೇಕೆಂದು ಸಲಹೆ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಲಕರ್ಣಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ವ್ಯವಹಾರ ನಡೆಯುತ್ತಿರುವುದರಿಂದ ಗ್ರಾಹಕರಿಗೂ ಜಾಗೃತಿ ಅಗತ್ಯವಾಗಿದೆ ಎಂದರು. ಫ್ರಾಡ್ ತಡೆಗಟ್ಟಲು ಬ್ಯಾಂಕ್, ಸೈಬರ್ ಪೊಲೀಸ್ ಹಾಗೂ ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕಿದೆ. ಮೊದಲು ಬ್ಯಾಂಕಿಗೆ ಎಲ್ಲರೂ ಬರಬೇಕಾಗಿತ್ತು. ಈಗ ಆ ರೀತಿ ಆಗುತ್ತಿಲ್ಲ. ಮನೆಯಲ್ಲೇ ಕುಳಿತುಕೊಂಡು ಮತ್ತು ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ಬ್ಯಾಂಕಿನ ವ್ಯವಹಾರವನ್ನು ಮಾಡಲಾಗುತ್ತಿದೆ. ಇದರಿಂದ ಬ್ಯಾಂಕಿನವರಿಗೆ ಜವಾಬ್ದಾರಿ ಹೆಚ್ಚಾಗಿದೆ. ಈ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಫ್ರಾಡ್ ಬಗ್ಗೆ ತಿಳಿಸಬೇಕಾಗಿದೆ. ಸೈಬರ್ ಪೊಲೀಸರು ಕೂಡ ಈ ಬಗ್ಗೆ ಗಮನವಹಿಸಿದ್ದು, ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಈ ತಿಳುವಳಿಕೆಗಾಗಿ ಜಾಗೃತಿ ಜಾಥಾವಾಗಿದೆ ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಡಿವಿಜನ್ ಮ್ಯಾನೇಜರ್ ನೀರಿಜಾ ಮಾತನಾಡಿ, ಸರ್ಕಾರದ ಸಮಾಜಮುಖಿ ಯೋಜನೆಗಳು ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕು ಎಂಬ ಉದ್ದೇಶದಿಂದ ಈ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿನ ಹಣ ಹಾಕಿ ತೆಗೆದುಕೊಳ್ಳುವುದರ ವಿಚಾರದ ಬಗ್ಗೆ ಜಾಗರುಕತೆಯನ್ನು ಮೂಡಿಸಲು ಜನರಿಗೆ ತಿಳಿಯಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ರಾಚಪ್ಪ ಮಾತನಾಡಿ, ಹಾಸನ ಜಿಲ್ಲೆಯಲ್ಲಿ 60 ಶಾಖೆಗಳಿದ್ದು, ಹಣಕಾಸು ಸಪ್ತಾಹದ ಅಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು. ಆನ್‌ಲೈನ್‌ನಲ್ಲಿ ಹೆಚ್ಚು ಫ್ರಾಡ್ ಆಗುತ್ತಿದ್ದು, ಈ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಮೂಡಿಸುವುದು ನಮ್ಮ ಗುರಿಯಾಗಿದೆ ಎಂದರು.
ಈ ಜಾಗೃತಿ ಜಾಥದಲ್ಲಿ ವಿವಿಧ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net