ಎತ್ತಿನಹೊಳೆ ಕಾಮಗಾರಿ 2027ರ ಅಕ್ಟೋಬರ್‌ಗೆ ಪೂರ್ಣ

 ಎತ್ತಿನಹೊಳೆ ಯೋಜನೆ ಕಾಮಗಾರಿಗೆ  ಸಂಬಂಧಿಸಿದಂತೆ ಬೆಂಗಳೂರಿನ ವಿಕಾಸಸೌಧ  ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಚಿವರು ಪಾಲ್ಗೊಂಡಿದ್ದರು. ಕೃಷ್ಣಬೈರೇಗೌಡ, ಬೈರತಿ ಸುರೇಶ್, ಕೆ.ಎಚ್.ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್ ಇದ್ದರು.
ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಕಾಸಸೌಧ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಚಿವರು ಪಾಲ್ಗೊಂಡಿದ್ದರು. ಕೃಷ್ಣಬೈರೇಗೌಡ, ಬೈರತಿ ಸುರೇಶ್, ಕೆ.ಎಚ್.ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎತ್ತಿನಹೊಳೆ ಕಾಮಗಾರಿ 2027ರ ಅಕ್ಟೋಬರ್‌ಗೆ ಪೂರ್ಣ
  • ಸಾಧಕ-ಬಾಧಕ ಕುರಿತು ಅಧಿಕಾರಿಗಳೊಂದಿಗೆ ಸಚಿವರ ಚರ್ಚೆ
  • ವಿಕಾಸಸೌಧ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸಂಬಂಧಪಟ್ಟಂತೆ ಸಭೆ
ಹಾಸನ: ಪಶ್ಚಿಮಘಟ್ಟ ಪ್ರದೇಶದಿಂದ ಬಯಲುಸೀಮೆಗೆ ನೀರು ಹರಿಸುವ ಎತ್ತಿನಹೊಳೆ ಕಾಮಗಾರಿಗೆ ಎದುರಾಗಿರುವ ವಿಘ್ನಗಳ ನಡುವೆಯೂ ಕಾಮಗಾರಿಯನ್ನು 2027 ಅಕ್ಟೋಬರ್ ಒಳಗೆ ಪೂರ್ಣಗೊಳಿಸುವ ಸಂಕಲ್ಪ ಹೊಂದಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ವಿಕಾಸಸೌಧ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಸಂಬಂಧಪಟ್ಟಂತೆ ಮಹತ್ವದ ಸಭೆ ನಡೆಸಿ ಯೋಜನೆಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು.
ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಎದುರಾಗಿರುವ ಅಡೆತಡೆಗಳ ಬಗ್ಗೆ ನಾಲ್ವರು ಸಚಿವರು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಗಿರುವ ಮತ್ತು ಆಗಬೇಕಿರುವ ಕೆಲಸದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಕಾಮಗಾರಿಗೆ ಕೇಂದ್ರ ಅರಣ್ಯ ಸಚಿವಾಲಯ ತಡೆಯೊಡ್ಡಿರುವ ಬಗ್ಗೆ ಚರ್ಚಿಸಲಾಯಿತು.
ಅರಣ್ಯ ಇಲಾಖೆಯಿಂದ ಅಡ್ಡಿ: ಎತ್ತಿನಹೊಳೆ ಯೋಜನೆಯ ಪ್ಯಾಕೇಜ್-6ರ 55ನೇ ಕಿಲೋಮೀಟರ್‌ನಲ್ಲಿ 33 ಎಕರೆ 31 ಗುಂಟೆ ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಅರಣ್ಯ ತೀರುವಳಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡದೆ ಇರುವುದರಿಂದ ನೀರು 43ನೇ ಕಿ.ಮೀ.ನಿಂದ ಮುಂದೆ ಹರಿಯಲು ಸಾಧ್ಯವಾಗಿಲ್ಲ. ಈ 33 ಎಕರೆ ಪ್ರದೇಶದಲ್ಲಿ ಈಗಾಗಲೇ 25 ಎಕರೆ ಪ್ರದೇಶದಲ್ಲಿ ಕಾಮಗಾರಿಯನ್ನು ಮುಗಿಸಿದ್ದು, ಇನ್ನು 8 ಎಕರೆ ಪ್ರದೇಶದಲ್ಲಿ ಕೆಲಸ ಮಾಡಲು ಆಗಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡದ ಹೊರತು ನೀರು ಮುಂದೆ ಹರಿಯುವುದಿಲ್ಲ. ಅಲ್ಲದೆ ಅರಸೀಕೆರೆ ತಾಲೂಕಿನ ನಾಯಕನ ಕೆರೆ ಕಾವಲ್, ಕಾಲ್ಯಾಡಿ ಗ್ರಾಮದ ಬಳಿ 56 ರಿಂದ 64 ಕಿ.ಮೀ. ವರೆಗಿನ ಪ್ರದೇಶದಲ್ಲೂ ಅಡ್ಡಿಯುಂಟಾಗಿದೆ. ಪ್ಯಾಕೇಜ್-7ರಲ್ಲಿ 78ನೇ ಕಿ.ಮೀ. ವ್ಯಾಪ್ತಿಯಲ್ಲಿ (ಅರಸೀಕೆರೆ-ಮೈಸೂರು) ರೈಲ್ವೆ ಕ್ರಾಸಿಂಗ್ ಬರುತ್ತಿರುವುದಿಂದ ರೈಲ್ವೆ ಇಲಾಖೆ ಟ್ರ್ಯಾಕ್‌ಭದ್ರತಾ ಕಾಮಗಾರಿಯನ್ನು ಪೂರ್ಣಗೊಳಿಸ ಬೇಕಾಗಿದೆ. ಅದಕ್ಕಾಗಿ 9.2 ಕೋಟಿ.ರೂ. ಹಣವನ್ನು ಇಲಾಖೆಗೆ ಸಂದಾಯ ಮಾಡಲಾಗಿದೆ. ಈ ಕಾಮಗಾರಿ ತುರ್ತುಗಿ ಮುಗಿಯುವಂತೆ ಕಾಣುತ್ತಿಲ್ಲ.
ವರ್ಷದಿಂದ ವರ್ಷಕ್ಕೆ ಮುಂದೂಡಿಕೆ
ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ ನೀರನ್ನು ಸಂಗ್ರಹಿಸಿ 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗು 6657 ಗ್ರಾಮಗಳ ಜನರಿಗೆ ಮತ್ತು ಜಾನುವಾರುಗಳಿಗೆ ನೀರನ್ನು ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
2014ರಲ್ಲಿ ಆರಂಭಗೊಂಡ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತದ ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಪ್ರಾರಂಭದಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಹಂತ-1 ಕಾಮಗಾರಿಗಳನ್ನು ಪೂರ್ಣಗೊಳಿಸಿ 2024 ಸೆ.9ರಮದು ಚಾಲನೆ ನೀಡಲಾಗಿತ್ತು. ಹಂತ-2ಅನ್ನು 2025 ವೇಳೆಗೆ ಕೋಲಾರಕ್ಕೆ ನೀರು ಹರಿಸುವುದಾಗಿ ಘೋಷಿಸಲಾಗಿತ್ತು. ಈಗ 2027ಕ್ಕೆ ಮುಂದೂಡಲಾಗಿದೆ. ಜುಲೈ-2024ರ ಅಂತ್ಯದವರೆಗೆ ಒಟ್ಟು 16,152 ಕೋಟಿ ರೂ. ವೆಚ್ಚ ಮಾಡಲಾಗಿತ್ತು.
2023ರಲ್ಲೇ ಪರಿಕ್ಷಾರ್ಥ ಚಟುವಟಿಕೆ
2023ರ ನವೆಂಬರ್‌ರಿಂದಲೇ ಪೂರ್ವ ಪರೀಕ್ಷಾರ್ಥ ಚಾಲನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿತ್ತು. ವಿಯರ್-45 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-3 ರವರೆಗೆ ನೀರನ್ನು ಪೂರೈಸಲಾಗಿತ್ತು. ಇವುಗಳ ಜತೆ ವಿಯರ್-1 ರಿಂದಲೂ ನೀರನ್ನೆತ್ತಿ ವಿತರಣಾ ತೊಟ್ಟಿ-4 ರವರೆಗೆ ಪೂರೈಸಿ, ಅಲ್ಲಿಂದ ಗುರುತ್ವ ಕಾಲುವೆಗೆ 2024 ಆಗಸ್ಟ್‌ನಲ್ಲಿ ಯಶಸ್ವಿಯಾಗಿ ನೀರು ಹರಿಸಲಾಗಿತ್ತು. ಗುರುತ್ವ ಕಾಲುವೆ ಮೂಲಕ ನೀರು 32 ಕಿಮೀವರೆಗೆ ತಲುಪಿತ್ತು. ಅಲ್ಲಿ ಅರಣ್ಯ ಇಲಾಖೆ ಅಡ್ಡಿಪಡಿಸಿದ್ದರಿಂದ ವಿಧಿ ಇಲ್ಲದೆ ನೀರನ್ನು ವಾಣಿವಿಲಾಸ (ಮಾರಿಕಣಿವೆ) ಜಲಾಶಯಕ್ಕೆ ಹರಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net