ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಲೂಗಡ್ಡೆ ಬೆಳೆಯ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಸ್ವರೂಪ ಪ್ರಕಾಶ್, ಜಿಲ್ಲಾಧಿಕಾರಿ ಲತಾ ಕುಮಾರಿ, ಯೋಗೇಶ್, ಮೂರ್ತಿ, ಗೋಪಾಲ್ ಇತರರಿದ್ದರು.
ಹಾಸನ: ಆಲೂಗಡ್ಡೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಬೆಳೆಯ ವಿಸ್ತೀರ್ಣ ಕುಸಿಯುತ್ತಿದೆ. ರೈತರು ಬೆಳೆ ಬೆಳೆಯಲು ಉತ್ತೇಜನ ನೀಡಬೇಕು ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಲೂಗಡ್ಡೆ ಬೆಳೆಯ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಕೃಷಿಕರಿಗೆ ಒದಗಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಆಲೂಗಡ್ಡೆಯ ಮಾರಾಟ ದರವನ್ನು 1200 ರೂ.ಗೆ ನಿಗದಿಪಡಿಸಲಾಯಿತು. ಮಾರಾಟ ಪ್ರಕ್ರಿಯೆ ಮೇ 15ರಿಂದ ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ರೈತರ ಹಿತ ಕಾಯುವ ದೃಷ್ಟಿಯಿಂದ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ, ಎಪಿಎಂಸಿಯಲ್ಲಿ ವರ್ತಕರು ನೋಂದಣಿ ಆಗಬೇಕು. ಅದೇ ಪ್ರಾಂಗಣದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಬಿತ್ತನೆ ಬೀಜದ ಬಗ್ಗೆ ಯಾವುದೇ ದೂರುಗಳು ಬಂದರೆ ಈಗಾಗಲೇ ರಚನೆಗೊಂಡಿರುವ ತಂಡ ತಕ್ಷಣ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಈಗಾಗಲೇ ಬಿತ್ತನೆ ಬೀಜದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ರೋಗಗ್ರಸ್ತ ಬೀಜ ಎಂದು ಕಂಡುಬಂದಿರುವುದನ್ನು ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಅಂಗಮಾರಿ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ರೈತರಿಗೆ ಸಮಯಕ್ಕೆ ಸರಿಯಾಗಿ ಔಷಧಗಳನ್ನು ಒದಗಿಸಬೇಕು. ಬಿತ್ತನೆ ಬೀಜ ಖರೀದಿಸಿದ ವೇಳೆ ಕಡ್ಡಾಯವಾಗಿ ಬಿಲ್ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಆಲೂಗಡ್ಡೆ ಬೆಳೆ ಕುರಿತಾದ ಮಾಹಿತಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಯೋಗೇಶ್, ರೈತ ಸಂಘದ ಮುಖಂಡ ಮೂರ್ತಿ, ವರ್ತಕರ ಸಂಘದ ಅಧ್ಯಕ್ಷ ಗೋಪಾಲ್ ಇತರರಿದ್ದರು.