ಚೆನ್ನಮ್ಮ ಸಮಾಧಿಗೆ ಭಾವಪೂರ್ಣ ನಮನ

ಚೆನ್ನಮ್ಮ ಅವರ ಸಮಾಧಿಗೆ ಪತಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಲು ಸಮರ್ಪಿಸಿದರು.
ಚೆನ್ನಮ್ಮ ಅವರ ಸಮಾಧಿಗೆ ಪತಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಲು ಸಮರ್ಪಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಚೆನ್ನಮ್ಮ ಸಮಾಧಿಗೆ ಭಾವಪೂರ್ಣ ನಮನ
  • ಪೂಜೆ ಸಲ್ಲಿಸಿ ಪತ್ನಿ ನೆನೆದು ಕಣ್ಣೀರಿಟ್ಟ ಗೌಡರು
  • ಕುಟುಂಬಸ್ಥರು, ಸಂಬಂಧಿಕರು, ಸಹಸ್ರಾರು ಜನರು ಭಾಗಿ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ದಿ.ಚೆನ್ನಮ್ಮ ಅವರ 11ನೇ ದಿನದ ಕಾರ್ಯ ಹಿನ್ನೆಲೆ ಗುರುವಾರ ಕುಟುಂಬ ಸದಸ್ಯರು, ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳ ನಾಯಕರು ಚೆನ್ನಮ್ಮ ಅವರ ಸಮಾಧಿಗೆ ನಮಿಸಿ, ವಂದಿಸಿ ಪುಣ್ಯಸ್ಮರಣೆ ಮಾಡಿದರು.
ಹೊಳೆನರಸೀಪುರ ತಾಲೂಕು ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಸುಮಾರು 32 ಎಕರೆ ವಿಶಾಲ ಜಾಗದಲ್ಲಿ ದೊಡ್ಡಗೌಡರು ಮತ್ತವರ ಕುಟುಂಬದವರು ಸಾಮೂಹಿಕ ಪಂಕ್ತಿಯಲ್ಲಿ ಭೋಜನದ ವ್ಯವಸ್ಥೆ ಮಾಡಿದ್ದರು. ತಂಡೋಪ ತಂಡವಾಗಿ ಜನರು ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಹೊರತುಪಡಿಸಿದರೆ ಎಲ್ಲವೂ ಅಚ್ಚುಕಟ್ಟು, ಶಿಸ್ತುಬದ್ಧವಾಗಿ ನಡೆಯಿತು.
ಹರಿದು ಬಂದ ಜನಸಾಗರ: ಚೆನ್ನಮ್ಮ ಅವರ ಪುಣ್ಯತಿಥಿಯಗೆ ಬೆಳಗ್ಗೆಯಿಂದಲೂ ಮಹಿಳೆಯರು, ಮಕ್ಕಳು, ಪುರುಷರು ವಿವಿಧೆಡೆಗಳಿಂದ ಆಗಮಿಸಿದ್ದರು. ಇದಕ್ಕಾಗಿ ನೂರಾರು ಖಾಸಗಿ ಬಸ್‌ಗಳು, ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಜನರ ದಂಡೇ ನೆರೆದಿತ್ತು. ಜನರನ್ನು ಹೊತ್ತು ತರುವ ವಾಹನಗಳಿಗೆ ಒಂದು ಕಿ.ಮೀ.ದೂರದಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಸ್ಥಳದಲ್ಲಿ ಇಳಿದು ಜನರು ನಡೆದುಕೊಂಡು ಕಾರ್ಯಕ್ರಮ ಸ್ಥಳಕ್ಕೆ ಬಂದರು. ನಡುವೆ ತುಂತುರು ಮಳೆ ಬಂದರೂ ಯಾರೊಬ್ಬರೂ ಕದಲಲಿಲ್ಲ. ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಅವರು ಭದ್ರತೆಯ ನೇತೃತ್ವ ವಹಿಸಿದ್ದರು.
ಪೂಜಾ ಕೈಂಕರ್ಯ
ಚೆನ್ನಮ್ಮ ಅವರ ಸಮಾಧಿ ಸ್ಥಳದಲ್ಲಿ ಮಧ್ಯಾಹ್ನ 12 ಗಂಟೆ ನಂತರ ಪೂಜಾ ಕಾರ್ಯ ಶುರುವಾದವು. ಅದಕ್ಕೂ ಮುನ್ನ ಹರದನಹಳ್ಳಿಯ ದೇವೇಗೌಡರ ನಿವಾಸ ಹಾಗೂ ಹೊಳೆನರಸೀಪುರದ ಎಚ್.ಡಿ.ರೇವಣ್ಣ ಅವರ ಮನೆಯಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿದವು. ಬಳಿಕ ಸಮಾಧಿ ಸ್ಥಳಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಮಾಧಿಗೆ ಮೊದಲ ಪೂಜೆ ಸಲ್ಲಿಸಿದರು. ಪತ್ನಿಯ ಸಮಾಧಿಗೆ ದುಂಡು ಮಲ್ಲಿಗೆ ಹೂಗಳನ್ನು ಅರ್ಪಿಸಿ, ನಮಿಸಿದರು. ಬಳಿಕ ಸಮಾಧಿ ಬಳಿಯೇ ಕೆಲ ನಿಮಿಷ ಮೌನವಾಗಿ ಕುಳಿತು ಭಾವುಕರಾದರು. ನಂತರ ಒಬ್ಬೊಬ್ಬರಾಗಿ ಕುಟುಂಬ ಸದಸ್ಯರು ಆಗಮಿಸಿ ಪೂಜೆ ಸಲ್ಲಿಸಿದರು. ಪುತ್ರರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಬಾಲಕೃಷ್ಣಗೌಡ, ಡಾ.ರಮೇಶ್, ಪುತ್ರಿಯರಾದ ಅನಸೂಯಾ, ಶೈಲಜಾ, ಸೊಸೆಯಂದಿರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಡಾ.ಸೂರಜ್ ರೇವಣ್ಣ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೈಸೂರಿನ ಸುತ್ತೂರು ಮಠದ ಡಾ.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ದೇವೇಗೌಡರ ಕುಟುಂಬ ಸದಸ್ಯರು ಹಾಜರಿದ್ದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರ ದಿನ್ಯ ಸಾನ್ನಿಧ್ಯದಲ್ಲಿ 11 ದಿನದ ಉತ್ತರ ಕ್ರಿಯಾದಿ ಕಾರ್ಯಗಳು ನೆರವೇರಿದವು.
ಇಷ್ಟವಾದ ತಿನಿಸುಗಳ ಎಡೆ:
ಸಮಾಧಿ ಸುತ್ತಲೂ ವಿಶೇಷ ಹೂವಿನ ಅಲಂಕಾರ ಜತೆಗೆ ಮಂಟಪ ನಿರ್ಮಾಣ ಮಾಡಲಾಗಿತ್ತು. ಚೆನ್ನಮ್ಮ ಅವರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಹೆಣ್ಣು ಮಕ್ಕಳು ಮನೆಯಿಂದಲೇ ತಯಾರಿಸಿಕೊಂಡು ಬಂದು ಎಡೆ ಇಟ್ಟಿದ್ದರು.
ಹಲವು ನಾಯಕರ ಉಪಸ್ಥಿತಿ
ಕೇಂದ್ರ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಎಂಎಲ್ಸಿ ಸಿ.ಟಿ.ರವಿ, ಮಾಜಿ ಸಚಿವರಾದ ಡಾ.ಅಶ್ವತ್ಥನಾರಾಯಣ, ಸಿ.ಎಂ.ಇಬ್ರಾಹಿಂ, ಸುರೇಶ್ ಬಾಬು, ಹಿರಿಯ ನಾಯಕ ಬಿ.ಎಲ್.ಶಂಕರ್, ಸಂಸದ ಮಲ್ಲೇಶಬಾಬು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಇತರರು ಆಗಮಿಸಿದ್ದರು. ಶಿವಾರ ಉಮೇಶ್ ಮತ್ತವರ ತಂಡದಿಂದ ನಡೆದ ವಿಶೇಷ ಗಾಯನ ನಮನ ಕಾರ್ಯಕ್ರಮ ಗಮನ ಸೆಳೆಯಿತು.
14 ಊಟದ ಕೌಂಟರ್
ಬಂದ ಜನರಿಗೆ ಯಾವುದೇ ತೊಂದರೆ, ನೂಕು ನುಗ್ಗಲು, ಗೊಂದಲ ಆಗದಂತೆ ಒಟ್ಟು **********16 ಊಟದ ಕೌಂಟರ್ ತೆರೆಯಲಾಗಿತ್ತು. ಸಾಮಾನ್ಯ ಜನರು, ಮಹಿಳೆಯರು, ವಿಐಪಿಗಳಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಇವುಗಳ ಪಕ್ಕದಲ್ಲೇ ಅಡುಗೆ ತಯಾರಿಸಲಾಗಿತ್ತು. ಊಟ ಬಡಿಸಲು, ಸ್ವಚ್ಛತೆಗೆ ಪ್ರತ್ಯೇಕ ಜನರನ್ನು ನೇಮಕ ಮಾಡಿದ್ದರಿಂದ ಬಂದವರೆಲ್ಲ ನೆಮ್ಮದಿ ಯಿಂದ ಊಟಮಾಡಿದರು.
1500 ಬಾಣಸಿಗರು ತರಹೇವಾರಿ ಅಡುಗೆ ತಯಾರಿದ್ದರು. ಕಜ್ಜಾಯ, ಲಾಡು, ಹೋಳಿಗೆ, ಹಲ್ವಾ, ಪಾಯಸ, ವಡೆ, ಪುಳಿಯೊಗರೆ, ಬಿಸಿಬೇಳೆ ಬಾತ್ ಸೇರಿದಂತೆ ವಿವಿಧ ಬಗೆಯ ತಿನಿಸುಗಳ ತಯಾರು ಮಾಡಲಾಗಿತ್ತು. ಒಂದು ಪಂಕ್ತಿಗೆ ಸುಮಾರು 15 ಸಾವಿರ ಜನ ಕೂರಲು ವ್ಯವಸ್ಥೆ ಮಾಡಲಾಗಿತ್ತು.
ಚೆನ್ನಮ್ಮ ಕಲಾಕೃತಿ
ಮೈಸೂರಿನ ಕಲಾವಿದ ಪುನೀತ್ ಹಾಗೂ ರವಿ ಸಮಾಧಿ ಬಳಿ ಚೆನ್ನಮ್ಮ ಅವರ ಕಲಾಕೃತಿ ನಿರ್ಮಾಣ ಮಾಡಿದ್ದರು. ಬಣ್ಣ ಬಣ್ಣದ ರಂಗೋಲಿಯಿಂದ ಬಿಡಿಸಿದ ಚಿತ್ರ ಗಮನ ಸೆಳೆಯಿತು.
ನಿನ್ನೆಯೇ ಕುಟುಂಬದ ಎಲ್ಲ ಸದಸ್ಯರು ಆಗಮಿಸಿದ್ದೆವು. ಅತ್ತೆಯವರಿಗೆ ಮೈಸೂರ್ ಪಾಕ್, ಚಕ್ಕುಲಿ ಅಂದರೆ ಇಷ್ಟ. ಅವರಿಗೆ ಇಷ್ಟದ ತಿನಿಸುಗಳನ್ನೂ ಪೂಜೆಗೆ ಇಡಲಾಗಿದೆ. ಅವರ ಅಂತಿಮ ಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಅದು ಅವರು ಗಳಿಸಿದ ಪ್ರೀತಿ. ಇಂದು ಕೂಡ ಅವರನ್ನು ಇಷ್ಟಪಡುವವರು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದಾರೆ.
ಅನಿತಾ ಕುಮಾರಸ್ವಾಮಿ
ಚೆನ್ನಮ್ಮ ಸೊಸೆ
ಭೂಮಿ ಇರುವವರೆಗೂ ಸ್ಥಳ ಬೆಳಗಬೇಕು
ಕೇಂದ್ರ ಸಚಿವ ಎಚ್‌ಡಿಕೆ ಹೇಳಿಕೆ
ಚೆನ್ನಮ್ಮ ಅವರ ಸಮಾಧಿ ಸ್ಥಳ ಈ ಭೂಮಿ ಇರುವವರೆಗೂ ಬೆಳಗಬೇಕು ಎಂದು ಪುತ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜುಲೈ 18ರಂದು ಚೆನ್ನಮ್ಮ ಅವರು ನಮ್ಮೆಲ್ಲರನ್ನು ಅಗಲಿದರು. ಆ ವೇಳೆ ಲಕ್ಷಾಂತರ ಜನ ಗೌರವ ಸಲ್ಲಿಸಿದ್ದರು. ನಾವು 24ಗಂಟೆ ರಾಜಕೀಯದಲ್ಲಿ ಇದ್ದರೂ ಎಂದಿಗೂ ಅವರು ರಾಜಕೀಯಕ್ಕೆ ಅಂಟಿಕೊಳ್ಳಲಿಲ್ಲ. ಹಳ್ಳಿಯ ಸಂಬಂಧದ ಜೀವನವನ್ನ ಅಳವಡಿಸಿಕೊಂಡು ಬಂದವರು. ದೇವೇಗೌಡರು ಪ್ರಧಾನ ಮಂತ್ರಿ ಆದರೂ ಎಂದಿಗೂ ಅವರಿಗೆ ಆ ಹಮ್ಮು ಇರಲಿಲ್ಲ. ನಮ್ಮಿಂದ ಅವರು ದೂರ ಹೋಗಿದ್ದಾರೆ ಎಂಬ ಭಾವನೆ ನಮ್ಮಲ್ಲಿಲ್ಲ. ಅವರ ನೆನಪಿಗಾಗಿ ಹಲವಾರು ಯೋಜನೆಯನ್ನ ಈ ಸ್ಥಳದಲ್ಲಿ ಮಾಡಲು ಯೋಜಿಸಿದ್ದೇವೆ. ಯಾರು ಸಂಕಷ್ಟದಲ್ಲಿ ಇದ್ದಾರೆ. ಅಂತಹವರ ನೆರಳಿಗೆ ಕೆಲವು ಕಾರ್ಯಕ್ರಮ ತರಲು ಯೋಜಿಸಿದ್ದೇವೆ. ಈ ಸ್ಥಳ ಸಂಕಷ್ಟದಲ್ಲಿರುವವರಿಗೆ ಅರ್ಪಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಇಂದು ನಾಡಿನಾದ್ಯಂತ ನಮ್ಮ ಪಕ್ಷ, ಬೇರೆ ಪಕ್ಷದದವರು, ಮಾಜಿ ಮಂತ್ರಿಗಳು, ಶಾಸಕರುಗಳು ಮಂತ್ರಿಗಳು ಎಲ್ಲರೂ ಭಾಗಿಯಾಗಿ ಅವರ ಸಮಾಧಿಗೆ ಗೌರವವನ್ನ ಸಲ್ಲಿಸಿ ಪ್ರಸಾದ ಸ್ವೀಕಾರ ಮಾಡಿದ್ದಾರೆ. ಇದು ರಂಗನಾಥ ಸ್ವಾಮಿ ಸನ್ನಿಧಿ. ನಮ್ಮ ನಿರೀಕ್ಷೆ ಇದ್ದಿದ್ದಕ್ಕಿಂತ ಮೀರಿ ಜನ ಸೇರಿದ್ದಾರೆ. ಅತ್ಯಂತ ಅಚ್ಚುಕಟ್ಟಾಗಿ ಆಗಿದೆ. ವರುಣನ ಆಶೀರ್ವದ ನೀಡಿದ್ದಾರೆ ಎಂದರು.
ಎಚ್‌ಎಂಟಿ ವಾಚಿಗೆ ತಾಯಿ ಚಿತ್ರ
ಎಚ್.ಡಿ.ಕುಮಾರಸ್ವಾಮಿ ಅವರು ತಾಯಿ ಚಿತ್ರವನ್ನು ಕೈಗೆ ಹಾಕಿಕೊಂಡಿರುವ ಎಚ್‌ಎಂಟಿ ವಾಚಿಗೆ ಹಾಕಿಸಿಕೊಂಡಿದ್ದಾರೆ. ಮಾಧ್ಯಮಕ್ಕೆ ಕೈ ಚಾಚಿ ವಾಚ್ ತೋರಿಸಿದ ಎಚ್‌ಡಿಕೆ, ನಮ್ಮ ಕಾರ್ಯಕರ್ತರು ಬಿಜಿನೆಸ್ ಮಾಡಿದರೆ ಎಚ್‌ಎಂಟಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಸಾಧ್ಯತೆ ಇದೆ. ನಾನೇ ಇದನ್ನ ಸ್ಯಾಂಪಲ್ ಮಾಡಿಸಿದ್ದೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net