ಬೇಲೂರು: ತಾಲೂಕಿನಾದ್ಯಂತ ಶನಿವಾರ ಮಧ್ಯಾಹ್ನ ಹಾಗೂ ಸಂಜೆ ಸುರಿದ ಬಿರಿಗಾಳಿ ಸಹಿತ ಭಾರಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಮರಿದು ಬಿದ್ದಿದ್ದು, ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನ ಅರೇಹಳ್ಳಿ ಹೋಬಳಿ ತುಂಬುದೇವನಹಳ್ಳಿಯಲ್ಲಿ ಮನೆಯ ಚಾವಣಿ ಹಾರಿ ಹೋದರೆ, ಹಳೇಬೀಡು ಹೋಬಳಿ ರಾಜನಶಿರಿಯೂರು ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮತ್ತು 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಸಾಕಷ್ಟು ಮರಗಳು ನೆಲಕ್ಕುರುಳಿವೆ.
ಮಧ್ಯಾಹ್ನ 2.30 ಗಂಟೆ ಸುಮಾರಿನಲ್ಲಿ ಭಾರಿ ಗಾಳಿ ಮಳೆಯೊಂದಿಗೆ ತಾಲೂಕಿನ ಹಳೇಬೀಡು ಸಮೀಪದ ರಾಜನಶಿರಿಯೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ಗಾಳಿಯ ಅಬ್ಬರಕ್ಕೆ ಬೃಹತ್ ಗಾತ್ರದ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸೇರಿದಂತೆ 15 ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ಎಲ್ಲೆಂದರಲ್ಲಿ ಧರೆಗುರುಳಿದವು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ರಾಜನಶಿರಿಯೂ ಗ್ರಾಮದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಕೆಲವೆಡೆ ರಸ್ತೆ ಮೇಲೆ ವಿದ್ಯುತ್ ಕಂಬ ಮತ್ತು ಮರಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿತ್ತು. ಸ್ಥಳೀಯರು ವಿದ್ಯುತ್ ಕಂಬ ಹಾಗೂ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರಾಜನಶಿರಿಯೂರು ಗ್ರಾಮಕ್ಕೆ ಆಗಮಿಸಿದ ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳು ಬಿದ್ದಿರುವುದನ್ನು ಪರಿಶೀಲಿಸಿದರು. ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಶೀಘ್ರದಲ್ಲೇ ಗ್ರಾಮಕ್ಕೆ ವಿದ್ಯುತ್ ಸರಬರಾಜು ಕಲ್ಪಿಸುವುದಾಗಿ ತಿಳಿಸಿದರು.
ರಾಜನಶಿರಿಯೂರು ಗ್ರಾಮದಲ್ಲಿ ಗಾಳಿ, ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳುವ ಸಂದರ್ಭದಲ್ಲೇ ವಾಹನವೊಂದು ಬಂದಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಚಾಲಕ ವಾಹನವನ್ನು ನಿಲ್ಲಿಸಿ ಮಳೆ ನಿಲ್ಲುವವೆಗೆ ವಾಹನದಲ್ಲೇ ಕುಳಿತಿದ್ದ. ನಂತರ ವಿದ್ಯುತ್ ಕಡಿತಗೊಂಡಿರುವುದನ್ನು ಖಚಿತಪಡಿಸಿಕೊಂಡು ಹೊರ ಬಂದ.
ಅರೇಹಳ್ಳಿ ಹೋಬಳಿಯ ತುಂಬುದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಂದ ಈರಪ್ಪ, ಚಂದ್ರು, ಮೀನಾಕ್ಷಿ, ತಮ್ಮಣ್ಣಿ, ಮೋಹಿನಿ ಎಂಬುವವರಿಗೆ ಸೇರಿದ ಮನೆಯ ಚಾವಣಿಗೆ ಹಾಕಿದ್ದ ಸೀಮೆಂಟ್ ಶಿಟ್‌ಗಳು ಹಾರಿ ಹೋಗಿವೆ. ಇದರಿಂದ ಮನೆಯೊಳಗಿದ್ದ ದಿನ ಬಳಕೆಯ ವಸ್ತುಗಳು ನೀರಿನಲ್ಲಿ ತೋಯ್ದು ಹಾಳಾಗಿವೆ.
ಬೇಲೂರು ತಾಲೂಕಿನ ರಾಜನಶಿರಿಯೂರು ಗ್ರಾಮದಲ್ಲಿ ಭಾರಿ ಗಾಳಿ, ಮಳೆಗೆ ಒಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈಗಾಗಲೇ ಸಿಬ್ಬಂದಿ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಭಾನುವಾರ ಸಂಪೂರ್ಣ ಕಾಮಗಾರಿ ಮುಗಿಸಿ ವಿದ್ಯುತ್ ಸರಬರಾಜು ಮಾಡಲಿದ್ದೇವೆ.