ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಬೇಲೂರು ತಾಲೂಕು ಅರೇಹಳ್ಳಿ ಸಮೀಪದ ಗ್ರಾಮಗಳಲ್ಲಿ ನೆಲಕ್ಕುರುಳಿರುವ ವಿದ್ಯುತ್ ಕಂಬ ಮತ್ತು ವಿದ್ಯುತ್ ಪರಿವರ್ತಕದ ತಂತಿ ಮೇಲೆ ಮರ ಬಿದ್ದಿದ್ದರಿಂದ ತಂತಿಗಳು ತುಂಡಾಗಿರುವುದು.
ಬೇಲೂರು ತಾಲೂಕು ಅರೇಹಳ್ಳಿ ಸಮೀಪದ ಗ್ರಾಮಗಳಲ್ಲಿ ನೆಲಕ್ಕುರುಳಿರುವ ವಿದ್ಯುತ್ ಕಂಬ ಮತ್ತು ವಿದ್ಯುತ್ ಪರಿವರ್ತಕದ ತಂತಿ ಮೇಲೆ ಮರ ಬಿದ್ದಿದ್ದರಿಂದ ತಂತಿಗಳು ತುಂಡಾಗಿರುವುದು.
Published on
ಬೇಲೂರು: ತಾಲೂಕಿನ ಅರೇಹಳ್ಳಿ ಸುತ್ತಮುತ್ತಲಿನ ಸಾಕಷ್ಟು ಗ್ರಾಮಗಳಲ್ಲಿ ಶನಿವಾರ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಸುರಿದ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲ ಮನೆಗಳ ಛಾವಣಿಗಳು ಹಾರಿ ಹೋಗಿದ್ದರಿಂದ ಮನೆಯವರು ರಾತ್ರಿ ಪೂರ್ತಿ ಪರದಾಡುವಂತಾಯಿತು.
ಶನಿವಾರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಭಾರಿ ಗಾಳಿಗೆ ತಾಲೂಕಿನ ಅರೇಹಳ್ಳಿ ಪಟ್ಟಣದಿಂದ ವಿದ್ಯುತ್ ಸರಬರಾಜಾಗುವ ಮಲಸಾವರ, ಹೊಸಮನೆ, ಕೆಸಗೋಡು ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಹತ್ತಾರು ಮರಗಳು ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ಹಲವಾರು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲ್ಲಕ್ಕುರುಳಿವೆ. ಸುಮಾರು 25ರಿಂದ 30 ವಿದ್ಯುತ್ ಕಂಬಗಳು ಬಾಗಿವೆ. ಸಿಡಿಲಿಗೆ ವಿದ್ಯುತ್ ಪರಿವರ್ತಕಗಳು ಹಾನಿಗೊಳಗಾಗಿವೆ. ಸೆಸ್ಕ್ ಸಿಬ್ಬಂದಿ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿರುವಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲೇ ದುರಸ್ತಿ ಕಾರ್ಯ ಮಾಡಿದ್ದಾರೆ.
ಅರೇಹಳ್ಳಿ ಹೋಬಳಿ ವಿವಿಧ ಗ್ರಾಮಗಳಲ್ಲಿ ಮನೆಗೆ ಅಳವಡಿಸಿದ್ದ ಸೀಮೆಂಟ್ ಶಿಟ್‌ಗಳ ಛಾವಣಿಗಳು ಹಾರಿ ಹೋಗಿವೆ. ಇದರಿಂದಾಗಿ ಮನೆಯವರು ರಾತ್ರಿ ಪೂರ್ತಿ ಅಕ್ಕಪಕ್ಕದ ಮನೆಗಳಲ್ಲಿ ವಾಸ್ತವ್ಯ ಮಾಡಿದರೆ ಮತ್ತೆ ಕೆಲವರು ಅದೇ ಮನೆಯಲ್ಲಿ ರಾತ್ರಿ ಕಳೆದರು.
ಅರೇಹಳ್ಳಿ ಭಾಗದಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಹಲವು ಕಂಬಗಳು ಬಾಗಿವೆ. ಮಳೆ ನಿಂತ ನಂತರ ದುರಸ್ತಿ ಮಾಡಬಹುದಾದ ಕಂಬಗಳನ್ನು ಮತ್ತು ವಿದ್ಯುತ್ ತಂತಿಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ವ್ಯತ್ಯಯ ಉಂಟಾದ ಪ್ರದೇಶಗಳ ಸಾರ್ವಜನಿಕರು ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಸೆಸ್ಕ್ ಅರೇಹಳ್ಳಿ ವಿಭಾಗದ ಶಾಖಾಧಿಕಾರಿ ಚಂದ್ರಶೇಖರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net