ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿಯ ಸ್ಟಡಿ ವಿತ್ ಸೊಸೈಟಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಾನನಷ್ಟ ಮೊಕದ್ದಮೆ, ಸಾರ್ವಜನಿಕ ಹಿತಾಸಕ್ತಿಗಳೊಂದಿಗೆ ಪತ್ರಿಕೋದ್ಯಮ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಕೀಲ ಸೂರ್ಯ ಮುಕುಂದರಾಜ್, ಎಚ್.ಬಿ.ಮದನಗೌಡ, ಜೆ.ಆರ್.ಕೆಂಚೇಗೌಡ ಇತರರಿದ್ದರು.
ಹಾಸನ: ಇಂದಿನ ದಿನಗಳಲ್ಲಿ ಮಾನನಷ್ಟ ಮೊಕದ್ದಮೆಯನ್ನು ಕೆಲವರು ಬೆದರಿಕೆಗೆ ಮತ್ತೆ ಕೆಲವರು ವೈಯಕ್ತಿಕ ದ್ವೇಷ ಸಾಧನೆ ಬಳಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ ಎಂದು ವಕೀಲ ಸೂರ್ಯ ಮುಕುಂದರಾಜ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿಯ ಸ್ಟಡಿ ವಿತ್ ಸೊಸೈಟಿ ಕಾರ್ಯಕ್ರಮದಡಿಯಲ್ಲಿ ಶನಿವಾರ ಆಯೋಜಿಸಿದ್ದ ಮಾನನಷ್ಟ ಮೊಕದ್ದಮೆ, ಸಾರ್ವಜನಿಕ ಹಿತಾಸಕ್ತಿಗಳೊಂದಿಗೆ ಪತ್ರಿಕೋದ್ಯಮ ವಿಷಯ ಕುರಿತು ಉಪನ್ಯಾಸ ನೀಡಿದರು.
ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರೃವಿದೆ. ಆದರೂ ಪತ್ರಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ನೀತಿ ನಿಯಮ ಮೀರಿ ಮುನ್ನುಗ್ಗುತ್ತಿದೆ. ಸ್ವೇಚ್ಛಾಚಾರದಿಂದ ನಡೆದುಕೊಂಡರೆ ಅಥವಾ ಅಪರಾಧ ಮಾಡಿದರೆ ದಂಡಿಸಲು 66 ಐಟಿ ಕಾಯ್ದೆ ಇತ್ತು. ಆದರೆ ಸುಪ್ರೀಂಕೋರ್ಟ್ ಇದನ್ನು ಸ್ಟ್ರಕ್‌ಡೌನ್ ಮಾಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರೃ ಪರ ತೀರ್ಪು ನೀಡಿದೆ ಎಂದರು. ಆದರೆ, ಕೆಲವು ಸಂದರ್ಭದಲ್ಲಿ ನ್ಯಾಯಾಂಗದಲ್ಲೇ ವೈರುಧ್ಯ ಇದೆ ಎಂದು ಬೇಸರ ಹೊರ ಹಾಕಿದರು.
ಮಾನನಷ್ಟ ಮೊಕದ್ದಮೆ ಹಾಕಿದಾಕ್ಷಣ ದಂಡನೆ ಆಗಲಿದೆ ಎಂದಲ್ಲ. ನೀವು ನ್ಯಾಯಬದ್ಧವಾಗಿದ್ದರೆ ಸಾಕ್ಷಿ ಕರೆದರೆ ನಿರಾಕರಿಸಬಹು, ರೈಟ್ ಟು ಸೈಲೆನ್ಸ್ ಎಂದು ಸುಮ್ಮನಿರಬಹುದು. ಅಥವಾ ಆಕ್ಟ್ 499/500 ಅಡಿ ನಾವು ಪೂರಕ ದಾಖಲೆ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದರು.
ನೇರವಾರಿ ಕೋರ್ಟ್‌ಗೆ ಹೋಗಿ ತಮ್ಮ ವಕೀಲರ ಮೂಲಕ ವಾದ ಮಂಡಿಸಿಬಹುದು. ವಾದ-ಪ್ರತಿವಾದ ನಡೆದು ಸತ್ಯಾಸತ್ಯತೆ ನಿರ್ಧಾರ ಆಗಲಿದೆ ಎಂದು ವಿವರಿಸಿದರು.
ಅಭಿವ್ಯಕ್ತಿ ಸ್ವಾತಂತ್ರೃ ಇದೆ ಎಂದಾಕ್ಷಣ ಪತ್ರಕರ್ತರು ದಾಖಲೆ ಇಲ್ಲದ ಸುದ್ದಿ ಮಾಡಬಾರದು, ಒಂದು ವೇಳೆ ಸರ್ಕಾರಿ ಶಾಲೆ ಮಕ್ಕಳಿಗೆ ಸಾಕ್ಸ್ ಕೊಡುತ್ತಿಲ್ಲ ಎಂದು ನೀವು ದೊಡ್ಡ ಸುದ್ದಿ ಮಾಡಿದರೆ ಆಗ ಸರ್ಕಾರದ ಹೊಣೆಗೇಡಿತನ ಬಯಲಾಗಲಿದೆ. ಈ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಪೂರಕವಾಗಿ ಬಳಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನೀವು ಏನೇ ಸುದ್ದಿ ಮಾಡಿದರೂ ಅದಕ್ಕೆ ಪೂರಕವಾದ ಮಾಹಿತಿ ನಿಮ್ಮ ಬಳಿ ಇದ್ದರೆ ಉತ್ತಮ. ಯಾವುದೋ ಒಂದು ಅಪರಾಧ, ಅತ್ಯಾಚಾರ ಪ್ರಕರಣದ ವರದಿ ಮಾಡಿದರೆ ಅದರ ನಿಖರ ಮಾಹಿತಿಗಾಗಿ ಬೆನ್ನು ಹತ್ತಿ ಮಾಹಿತಿ ಕಲೆಹಾಕಬೇಕು ಎಂದು ಕಿವಿ ಮಾತು ಹೇಳಿದರು.
ಸ್ಟಿಂಗ್ ಆಪರೇಷನ್ ನಲ್ಲೂ ಅಕ್ರಮ, ಕಾನೂನು ಬಾಹಿರ ಚಟುವಟಿಕೆ ಬಯಲಿಗೆ ಎಳೆಯಬಹುದು. ಆದರೆ ಅದು ಸರಿಯಾದ ಮಾದರಿ ಆಧರಿಸಿ ನಡೆದರೆ ಸಮಾಜದ ಬದಲಾವಣೆಗೆ, ಸರ್ಕಾರ ಹಾಗೂ ಸಂಬಂಧಪಟ್ಟವರನ್ನು ಎಚ್ಚರಿಸಲು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಪತ್ರಕರ್ತರು ಹಾಗೂ ಮಾಧ್ಯಮಗಳಿಗೆ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ, ಸರ್ಕಾರವನ್ನು ತಿದ್ದುವ ಗುರುತರವಾದ ಜವಾಬ್ದಾರಿ ಇದೆ. ಇದಕ್ಕೆ ಪೂರಕವಾಗಿ ಈಗಿನ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮುನ್ನಡೆಯಬೇಕೆಂದರು. ಹಾಗೆಯೇ ಹೊಸದಕ್ಕೆ ಒಗ್ಗಿಕೊಂಡು, ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ ಎಂದರು. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು, ವಕೀಲರು ಸೇರಿದಂತೆ ಅನೇಕರಿಗೆ ಲೋಕಜ್ಞಾನ ಇಲ್ಲ. ವಾಸ್ತವಿಕ ಅರಿವು ಕಡಿಮೆಯಾಗಿದೆ ಎಂದು ಸಾರ್ವಜನಿಕ ಅಭಿಪ್ರಾಯ ಕೇಳಿ ಬರುತ್ತಿದೆ ಎಂದು ವಿಷಾದಿಸಿದರು.
ಕೆಯೂಡಬ್ಲೂೃಜೆ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ಮಾತನಾಡಿ, ಇಂತಹ ಬಹುಪಯೋಗಿ ಕಾರ್ಯಕ್ರಮ ರಾಜ್ಯದಲ್ಲಿ ಎಲ್ಲೂ ನಡೆಯುತ್ತಿಲ್ಲ. ಹಾಸನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾತ್ರ ನಡೆಯುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕೆಯೂಡಬ್ಲ್ಯೂಜೆ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲೆಯ ಮೂವರು ಹಿರಿಯ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡ ಮಾತನಾಡಿ, ಸಾಂಸ್ಕೃತಿಕ ಸಮಿತಿ ವತಿಯಿಂದ ವಿಭಿನ್ನವಾದ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದಕ್ಕೆ ಮೆಚ್ಚುವೆ ವ್ಯಕ್ತಪಡಿಸಿದರು. ಇಂದು ವಕೀಲರು, ಪತ್ರಕರ್ತರು ಸೇರಿದಂತೆ ಲೋಕಜ್ಞಾನ ಕಡಿಮೆ ಆಗಿದೆ. ಪ್ರಬುದ್ಧತೆಯ ಕೊರತೆ ಕಾಡುತ್ತಿದೆ. ಈಗಿನ ವಿದ್ಯಾರ್ಥಿಗಳು ಕಾನೂನು ಬಗ್ಗೆ ಅರಿಯಿರಿ, ವಿವಿಧ ಸೆಕ್ಷನ್‌ಗಳ ಬಗ್ಗೆ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ಕೆ.ಎಂ.ಹರೀಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಬಾಳ್ಳುಗೋಪಾಲ್, ಚಲಂ ಹಾಡ್ಲಹಳ್ಳಿ, ಹಿಂದೂ ಪ್ರಕಾಶ್, ಮಲ್ಲಿಕಾರ್ಜುನ ಕೊಚ್ಚರಗಿ, ಚೈತ್ರಾ ಮಹಾಲಿಂಗು ಇದ್ದರು.