ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳ ಕುರಿತು ಸಭೆ ನಡೆಸಿ ಡಿಸಿ ಲತಾಕುಮಾರಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರಮುನಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾದ ಬಲರಾಮ್ ಇತರರಿದ್ದರು.
ಹಾಸನ:ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳ ಕುರಿತು ಸಭೆ ನಡೆಸಿ ಮಾತನಾಡಿದರು.
ಕುಡಿಯವ ನೀರಿನ ಅಭಾವ ಉಂಟಾಗಬಹುದಾದ ದುರ್ಬಲ ಪ್ರದೇಶಗಳನ್ನು ಗುರುತಿಸಿ ಹಾಗೂ ಹಿಂದಿನ ವರ್ಷ ಕುಡಿಯವ ನೀರಿನ ಸಮಸ್ಯೆ ಉಂಟಾಗಿರುವ ವಾರ್ಡ್‌ಗಳನ್ನು ಗುರುತಿಸಿ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ನೀರು ಒದಗಿಸಬೇಕು ಎಂದು ಹೇಳಿದರು.
ತಾಪಮಾನ ಹೆಚ್ಚಿದ್ದು, ಅತಿ ಹೆಚ್ಚು ತಾಪಮಾನದಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗೆ ಸಲಹೆಗಳು, ಪರಿಣಾಮಗಳ ವಿವರ ಹಾಗೂ ಅತಿ ಹೆಚ್ಚು ತಾಪಮಾನದಿಂದ ಬರಬಹುದಾದ ಕಾಯಿಲೆಗೆ ಪ್ರಥಮ ಚಿಕಿತ್ಸೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಅಭಾವದ ಕುರಿತು ಎಲ್ಲ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ವರದಿಯನ್ನು ಸಲ್ಲಿಸಬೇಕು. ಜತೆಗೆ ಕುಡಿಯುವ ನೀರಿನ ಕುರಿತು ಸಹಾಯವಾಣಿ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಶಾಲೆಗಳು ಇ-ಖಾತಾ ಮಾಡಿಸಬೇಕು ಇದಕ್ಕೆ ಶಿಕ್ಷಣ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದ ಅವರು, ಖಾತೆಗೆ ಬಾಕಿ ಇರುವುದನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಹಸಿರು ಹಾಸನ ಯೋಜನೆಯಡಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಶಾಲೆಗಳ ಮೈದಾನದ ಸುತ್ತ, ಕೆರೆ ಏರಿಗಳ ಸುತ್ತ, ರಸ್ತೆ ಬದಿಯಲ್ಲಿ ಗಿಡಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಬೇಲೂರು, ಸಕಲೇಶಪುರ ಹಾಗೂ ಆಲೂರು ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಪ್ರದೇಶದಲ್ಲಿರುವ ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಿ ನೀಡುವಂತೆ ಸೂಚಿಸಿದ ಅವರು, ವಾಹನ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರಮುನಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಲರಾಮ್, ಎಲ್ಲ ತಾಲೂಕು ಮುಖ್ಯಾಧಿಕಾರಿಗಳು ಇದ್ದರು.