ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ರಸ್ತೆ ಅಪಘಾತದ ಹುತಾತ್ಮರ ಸ್ಮರಣೆ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಮ್ಮಿಗೆ ಮೋಹನ್, ಶಬ್ಬೀರ್‌ಅಹ್ಮದ್, ಜಯೇಂದ್ರ ಕುಮಾರ್, ಎಚ್.ಡಿ ಕುಮಾರ್, ಸುಬ್ಬುಸ್ವಾಮಿ, ಗಿರಿಗೌಡರು, ಗಿರೀಶ್, ಭೀಮರಾಜ್, ಜಿ.ಎ.ಅವಿನಾಶ್ ಇತರರಿದ್ದರು.
ರೆಡ್‌ಕ್ರಾಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಪಾಷ ಸಲಹೆ
ರಸ್ತೆ ಅಪಘಾತದ ಹುತಾತ್ಮರಿಗೆ ಸ್ಮರಣೆ
ಹಾಸನ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ರಸ್ತೆ ಅಪಘಾತದ ಹುತಾತ್ಮರ ಸ್ಮರಣೆ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು, ರಾಜೀವ್ ಆಯುರ್ವೇದ ಕಾಲೇಜು ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಅಧ್ಯಯನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ರೆಡ್‌ಕ್ರಾಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಪಾಷ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 650 ಜನರು ಹಾಗೂ ದೇಶದಲ್ಲಿ ಒಂದು ವರ್ಷದಲ್ಲಿ 1,65,000 ಜನರು ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾರೆ. ಅವರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಗೌರವ ಸೂಚಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಪ್ರಾಪ್ತ ವಯಸ್ಸಿನವರು ಯಾವುದೇ ಕಾರಣಕ್ಕೂ ಲೈಸೆನ್ಸ್ ಪಡೆಯದೆ ವಾಹನ ಚಲಾಯಿಸಿದರೆ ಅವರ ಪಾಲಕರು ಕಾನೂನು ಅಡಿಯಲ್ಲಿ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮೊಬೈಲ್ ಹಿಡಿದು ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದರು. ವಾಹನ ಚಲಾಯಿಸುವ ಮೊದಲು ವಾಹನವನ್ನು ಒಂದು ಆಯುಧ ಎಂದು ಪರಿಗಣಿಸಿ ಜಾಗರೂಕತೆಯಿಂದ ಚಲಾಯಿಸಬೇಕೆಂದು ಎಚ್ಚರಿಕೆ ನೀಡಿದರು.
ಸಾಕ್ಷೃ ಚಿತ್ರ ಪ್ರದರ್ಶಿಸುವ ಮೂಲಕ ಅಪಘಾತಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.