ಡಿ.ಕೆ. ಶಿವಕುಮಾರ್‌ಗೆ ದೊರೆತಿದೆ ಪೂಜಾ ಫಲ

ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತ ಹಾಸನಾಂಬೆಯ ದರ್ಶನ ಪಡೆದಿದ್ದ ದೃಶ್ಯ.
ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತ ಹಾಸನಾಂಬೆಯ ದರ್ಶನ ಪಡೆದಿದ್ದ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಡಿ.ಕೆ. ಶಿವಕುಮಾರ್‌ಗೆ ದೊರೆತಿದೆ ಪೂಜಾ ಫಲ
  • ಜಿಲ್ಲೆಯ ಹಲವು ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಡಿಕೆಶಿ
  • ಜನಮಾನಸದಲ್ಲಿ ಪ್ರತಿಫಲ ಸಿಕ್ಕಿದೆ ಎನ್ನುವ ಅಭಿಪ್ರಾಯ
ಹಾಸನ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನ ಸಿಗಲೆಂದು ಜಿಲ್ಲೆಯ ಹಲವು ದೇವಾಲಯಗಳಿಗೆ ಕಳೆದ ವರ್ಷ ಭೇಟಿ ನೀಡಿ ಪ್ರಾರ್ಥಿಸಿದ್ದರು. ಇದೀಗ ಅವರ ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಹಾಸನಾಂಬ ಜಾತ್ರಾ ಮಹೋತ್ಸವದ ವೇಳೆ ದೇವಾಲಯಕ್ಕೆ ಪತ್ನಿ ಸಮೇತ ಆಗಮಿಸಿ ಗರ್ಭಗುಡಿಯಲ್ಲಿ ಕುಳಿತು ಪೂಜೆ ಸಲ್ಲಿಸಿದ್ದರು. ಈ ವೇಳೆ ಬಲಗಡೆಯಿಂದ ಪ್ರಸಾದವಾಗಿತ್ತು. ಇತಿಹಾಸ ಪ್ರಸಿದ್ಧ ಜೇನುಕಲ್ಲು ಸಿದ್ದೇಶ್ವರಸ್ವಾಮಿ, ನಾಗರನವಿಲೆ ದೇವಾಲಯಲಗಳಿಗೂ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದಲ್ಲದೆ ಕೋಡಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಭವಿಷ್ಯ ಕೇಳಿದ್ದರು.
ಜೇನುಕಲ್ಲು ಸಿದ್ದೇಶ್ವರಸ್ವಾಮಿಗೆ ಹರಕೆ:
ಅರಸೀಕೆರೆ ತಾಲೂಕಿನ ಯಾದಪುರ ಗ್ರಾಮದಲ್ಲಿರುವ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ದೇವಾಲಯ ಭೇಟಿ ನೀಡಿ ಹರಕೆ ಕಟ್ಟಿಕೊಂಡರೆ ಬೇಡಿದ್ದು ಈಡೇರುತ್ತೆ ಎನ್ನುವ ಪ್ರತೀತಿ ಇದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹೋದ ನಂತರ ಮುಖ್ಯಮಂತ್ರಿಯಾಗಿದ್ದರು. ಡಿ.ಕೆ.ಶಿವಕುಮಾರ್ ಅವರು ಕೂಡ 2025 ಜು.26 ಜೇನುಕಲ್ಲು ಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಬಲಗಡೆಯಿಂದ ಪ್ರಸಾದವಾಗಿದ್ದು ಶುಭ ಸೂಚನೆ ಸಿಕ್ಕಿತ್ತು. ಬಳಿಕ ನ.21ರಂದು ಜೇನುಕಲ್ಲು ಸಿದ್ದೇಶ್ವರಸ್ವಾಮಿ ಅಡ್ಡಪಲ್ಲಕ್ಕಿಯನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪತ್ನಿ ಜತೆ ವಿಶೇಷ ಪೂಜೆ ಸಲ್ಲಿಸಿದ್ದರು.
ನಾಗರನವಿಲೆಯಲ್ಲಿ ವಿಶೇಷ ಪೂಜೆ:
ಉಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಡಿ.ಕೆ. ಶಿವಕುಮಾರ್ ಅವರು ಜು.23ರಂದು ಬೆಂಗಾವಲು ವಾಹನ ಇಲ್ಲದೆ, ಯಾರಿಗೂ ತಿಳಿಸದೆ ಚನ್ನರಾಯಪಟ್ಟಣ ತಾಲೂಕಿನ ನಾಗರನವಿಲೆ ಗ್ರಾಮಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ನಾಗದೋಷ ನಿವಾರಣೆಗೆ ಪ್ರಸಿದ್ಧಿಯಾಗಿರುವ ಬಾಗೂರು ಹೋಬಳಿಯ ಈ ಪುಣ್ಯಕ್ಷೇತ್ರದಲ್ಲಿ ವಿಶೇಷ ಆರಾಧನೆ ನಡೆಸಿದ್ದರು.
ನ.26 ರಂದು ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಮಠದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದರು. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟಕ್ಕಾಗಿ ಜಿಲ್ಲೆಯ ಪ್ರಮುಖ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು ಹಾಸನಾಂಬೆ ಹಾಗು ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬಲಗಡೆಯಿಂದ ಪ್ರಸಾದ ನೀಡುವ ಮೂಲಕ ನೀಡಿದ ಶುಭ ಸೂಚನೆ ಇದೀಗ ಫಲಿಸುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹಾಸನಾಂಬೆ ಎದುರು ಖಡ್ಗಮಾಲ ಸ್ತೋತ್ರ ಪಠಣ
2025 ಅಕ್ಟೋಬರ್ 14ರಂದು ಹಾಸನದ ಅಧಿದೇವತೆ, ಶಕ್ತಿದೇವತೆ ಬೇಡಿದ್ದನ್ನು ಕರುಣಿಸುವ, ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿ ಬಾಗಿಲು ತೆರದು ಭಕ್ತರಿಗೆ ದರ್ಶನ ಕೊಡುವ ಹಾಸನನಾಂಬ ದೇವಾಲಯಕ್ಕೆ ಪತ್ನಿ ಸಮೇತ ಆಗಮಿಸಿ ಸುಮಾರು ಅರ್ಧ ಗಂಟೆ ಕಾಲ ಗರ್ಭಗುಡಿಯಲ್ಲಿ ಕುಳಿತು ಖಡ್ಗಮಾಲ ಸ್ತೋತ್ರ ಪಠಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಹಾಸನಾಂಬ ದೇವಿ ಬಲಗಡೆಯಿಂದ ಪ್ರಸಾದ ಕರುಣಿಸುವ ಮೂಲಕ ಶುಭ ಸೂಚನೆ ಸಿಕ್ಕಿತ್ತು.
ಕೋಡಿಮಠದಲ್ಲಿ ಭವಿಷ್ಯ ಕೇಳಿದ್ದ ಡಿಕೆಶಿ:
2025ರ ಜುಲೈ 26ರಂದು ಅರಸೀಕೆರೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು, ಕೋಡಿಮಠಕ್ಕೆ ತೆರಳಿ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಭವಿಷ್ಯ ಕೇಳಿದ್ದರು. ನಂತರ ಶಿವಲಿಂಗಜ್ಜಯ್ಯ ಹಾಗು ನೀಲಮ್ಮಜ್ಜಯ್ಯ ಗದ್ದುಗೆ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net