ಜೂ.18ರಂದು ನಿವೇಶನ ಹಂಚಿಕೆಗೆ ಅಪಸ್ವರ

ಬಿಜಿಎಸ್‌ಕೆ ಬಡಾವಣೆಗೆ ಭೂಮಿ ನೀಡಿದ ಹತ್ತಾರು ರೈತರು ಹುಡಾ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಬಿಜಿಎಸ್‌ಕೆ ಬಡಾವಣೆಗೆ ಭೂಮಿ ನೀಡಿದ ಹತ್ತಾರು ರೈತರು ಹುಡಾ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜೂ.18ರಂದು ನಿವೇಶನ ಹಂಚಿಕೆಗೆ ಅಪಸ್ವರ
  • ಹುಡಾದ ಹೈಟೆಕ್ ಬಡಾವಣೆ ವಿರುದ್ಧ ರೈತರ ಅಸಮಾಧಾನ
  • ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ
ಹಾಸನ: ನಗರದ ಬೂವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ ಮತ್ತು ಕೆಂಚಟ್ಟಹಳ್ಳಿ ವ್ಯಾಪ್ತಿಯಲ್ಲಿ ಹುಡಾ ನಿರ್ಮಾಣ ಮಾಡಿರುವ ಹೈಟೆಕ್ ಬಡಾವಣೆಯಲ್ಲಿ ಜೂ.18 ರಂದು ನಿವೇಶನ ಹಂಚಿಕೆಗೆ ಅಪಸ್ವರ ಎದುರಾಗಿದೆ.
ಬಡಾವಣೆಗೆ ಭೂಮಿ ನೀಡಿದ ಹತ್ತಾರು ರೈತರು ಸೋಮವಾರ ಹುಡಾ ಅಧ್ಯಕ್ಷರನ್ನು ಭೇಟಿ ಮಾಡಿ, ಭೂಮಿ ನೀಡಿದ ನಮ್ಮೊಂದಿಗೆ ಯಾವುದೇ ಚರ್ಚೆ ಮಾಡದೆ, ಮೊದಲು ನಮಗೆ ನಿವೇಶನ ನೀಡದೆ ಸಾರ್ವಜನಿಕರಿಗೆ ಸೈಟ್ ಹಂಚಲು ದಿನಾಂಕ ಹೇಗೆ ಘೋಷಣೆ ಮಾಡಿದ್ರಿ ಎಂದು ಪ್ರಶ್ನಿಸಿದರು.
ನಮ್ಮೊಂದಿಗೆ ಮಾತಾಡದೆ, ಜಮೀನು ಕೊಟ್ಟವರಿಗೆ ಮೊದಲು ಸೈಟ್ ಕೊಡದೆ ಜನರಿಗೆ ಕೊಡೋದು ಸರಿಯಲ್ಲ, ನಮ್ಮ ಸಮ್ಮುಖದಲ್ಲೇ ಮರು ದಿನಾಂಕ ನಿಗದಿ ಮಾಡಿ ಎಂದು ಒತ್ತಾಯಿಸಿದರು.
ಇನ್ನೂ ಸುಮಾರು 80 ಎಕರೆ ಅಗ್ರಿಮೆಂಟ್ ಆಗಿಲ್ಲ. ಮೂಲ ಸೌಕರ್ಯ ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ಆರು ತಿಂಗಳು ತಡವಾದರೂ ಆದ್ರೂ ಪರವಾಗಿಲ್ಲ. ಕೃಷ್ಣ ನಗರದಲ್ಲಿ ಈಗಲೂ ಅನೇಕ ಸಮಸ್ಯೆ ಬಗೆಹರಿದಿಲ್ಲ. ಈ ಬಡಾವಣೆಯನ್ನೂ ಹಾಗೆ ಮಾಡಬೇಡಿ ಎಂದು ಪಟ್ಟು ಹಿಡಿದರು. ಇನ್ನೂ ಕೆಲವರು ನಮಗೆ ಕಾರ್ನರ್ ಸೈಟ್ ಕೊಡಬೇಕು ಎಂದು ಆಗ್ರಹಿಸಿದರು.
ಆದ್ದರಿಂದ ಬಿಜಿಎಸ್‌ಕೆ ಬಡಾವಣೆಯಲ್ಲಿ ಮೂಲ ಸೌಕರ್ಯ ಪೂರ್ಣ ಗೊಳಿಸಿದ ಬಳಿಕವೇ ನಿವೇಶನ ಹಂಚಿಕೆ ಮಾಡಬೇಕು. ಹಂಚಿಕೆ ತಡವಾದರೂ ಪರವಾಗಿಲ್ಲ, ಆದರೆ ಜನರು ಮತ್ತೆ ಸಮಸ್ಯೆ ಎದುರಿಸಬಾರದು ಎಂದು ರೈತರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಹುಡಾ ಅಧ್ಯಕ್ಷ ಪಟೇಲ್ ಶಿವಣ್ಣ, ಜೂ.18 ರಂದೇ ನಿವೇಶನ ಹಂಚಿಕೆ ಮಾಡುವುದಿಲ್ಲ. ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವರು ಯಾವ ದಿನಾಂಕ ಕೊಡುತ್ತಾರೋ ಅಂದು ವಿತರಣೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.
ನಾವು ರೈತರನ್ನು ಕಡೆಗಣಿಸಿಲ್ಲ. ರೈತರಿಗೆ ಮೊದಲ ಆದ್ಯತೆ, ರೈತರ ಗ್ರಾಮಗಳಿಗೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿ, ಪರಸ್ಪರ ಚರ್ಚಿಸಿ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.
ಜೂ.2 ರಂದು ಪ್ರತಿ ಹಳ್ಳಿಗೆ ಬರುತ್ತೇವೆ, ಅಲ್ಲೇ ಚರ್ಚೆ ಮಾಡುತ್ತೇವೆ. ರೈತರನ್ನು ಕೇಳದೆ ಮುಂದುವರಿಯಲ್ಲ. ಈಗಾಗಲೇ ಬೂವನಹಳ್ಳಿ ಬಳಿ ಒಂದು ಸ್ಮಶಾನ ಮಾಡಿದ್ದೇವೆ. ಬೇಕಿದ್ದರೆ ಮತ್ತೊಂದನ್ನು ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಮೂಲ ಸೌಕರ್ಯವನ್ನು ಹಂತ ಹಂತವಾಗಿ ಮಾಡುತ್ತೇವೆ. ರೈತರು ಕೇಳೋದು ಸರಿ ಇದೆ, ಕಂಪನಿಯವರು ಬೇಗ ಕೆಲಸ ಮಾಡಲಿ ಎಂದು ದಿನಾಂಕ ಘೋಷಣೆ ಮಾಡಿದ್ದೇವೆ. ದಿನಾಂಕ ವ್ಯತ್ಯಾಸ ಆಗಬಹುದು. ರೈತರಿಗೆ ಕಾರ್ನರ್ ಸೈಟ್ ಕೊಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net