ಪಾಲಕರ ಒತ್ತಡದಿಂದ ಮಕ್ಕಳಲ್ಲಿ ಖಿನ್ನತೆ

ಹಾಸನದ ಸಂತ ಜೋಸೆಫ್‌ರ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರಿಗೆ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವೆಂಕಟೇಶ್, ಬಿ.ಕೆ ದಾಕ್ಷಾಯಿಣಿ, ಕೆ.ಜಿ.ದಿಲೀಪ್ ಇತರರಿದ್ದರು.
ಹಾಸನದ ಸಂತ ಜೋಸೆಫ್‌ರ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರಿಗೆ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವೆಂಕಟೇಶ್, ಬಿ.ಕೆ ದಾಕ್ಷಾಯಿಣಿ, ಕೆ.ಜಿ.ದಿಲೀಪ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಕರ ಒತ್ತಡದಿಂದ ಮಕ್ಕಳಲ್ಲಿ ಖಿನ್ನತೆ
  • ವೆಂಕಟೇಶ್ ಅಭಿಪ್ರಾಯ ತರಬೇತಿ ಕಾರ್ಯಕ್ರಮ
ಹಾಸನ: ಯುವಜನರಿಗೆ ಪಾಲಕರ ಅತಿಯಾದ ನಿರೀಕ್ಷೆ ಕಾಡುತ್ತಿದೆ. ಪಾಲಕರು ನಮ್ಮ ಮಕ್ಕಳು ಫಸ್ಟ್ ರ‌್ಯಾಂಕ್ ಬರಬೇಕು, ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು ಎಂಬ ಮನೋಭಾವದಿಂದ ಮಕ್ಕಳ ಮೇಲೆ ಓದಲು ಹೆಚ್ಚು ಒತ್ತಡ ಹಾಕುತ್ತಿದ್ದಾರೆ. ಇದೊಂದು ರೀತಿಯಲ್ಲಿ ಮಕ್ಕಳು ಖಿನ್ನತೆಗೆ ಒಳಗಾಗಲು ಕಾರಣವಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಹಯೋಗದಲ್ಲಿ ಸಂತ ಜೋಸೆಫ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪಾಲಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖಿನ್ನತೆಗೆ ಒಳಗಾಗುವ ಮಕ್ಕಳು ನಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದು, ದುಶ್ಚಟಗಳಿಗೆ ಒಳಗಾಗುವುದು ಕಂಡು ಬರುತ್ತಿದೆ. ಪಾಲಕರು ತಮ್ಮ ನಿರೀಕ್ಷೆಯ ಭಾರವನ್ನು ಮಕ್ಕಳ ಮೇಲೆ ಹೇರದೆ ಸಹಜವಾಗಿ ಕಲಿಯಲು ಬಾಲ್ಯ ಅನುಭವಿಸಲು ನೆರವಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ ದಾಕ್ಷಾಯಿಣಿ ಮಾತನಾಡಿ, ಹದಿಹರೆಯವು ಮಕ್ಕಳ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ದೈಹಿಕ, ಮಾನಸಿಕ, ಬೌದ್ಧಿಕ, ಭಾಷೆ ಮತ್ತು ಸಾಮಾಜಿಕ ಬೆಳವಣಿಗೆಗಳಾಗುತ್ತದೆ. ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ಪೋಷಣೆ, ಕಾಳಜಿ, ಆರೈಕೆ ದೊರೆಯಬೇಕು.
ಹದಿಹರೆಯದಲ್ಲಿ ನಡೆಯುವ ನೈಸರ್ಗಿಕ ಬದಲಾವಣೆಗಳಿಂದ ಗಂಡು-ಹೆಣ್ಣು ಮಕ್ಕಳು ಆಕರ್ಷಣೆಗೆ ಒಳಗಾಗುತ್ತಾರೆ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಪ್ರಭಾವಗಳಿಂದ ಮಕ್ಕಳು ಬಹುಬೇಗನೆ ನಕಾರಾತ್ಮಕ ಅಂಶಗಳ ಅನುಕರಣೆ, ಆಲೋಚನೆಗಳಿಗೆ, ಲವು ಚಟಗಳಿಗೆ ಒಳಗಾಗುವುದು ಜಾಸ್ತಿಯಾಗುತ್ತದೆ. ಅದರಿಂದ ಯುವ ಜನತೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಜಿ.ದಿಲೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಕಾಂತರಾಜು ತರಬೇತಿ ನೀಡಿದರು. ಅತಿಥಿಗಳಾಗಿ ಪೆನ್‌ಷನ್ ಮೊಹಲ್ಲಾ ಠಾಣೆಯ ಆರಕ್ಷಕ ನಿರೀಕ್ಷಕ ಸ್ವಾಮಿನಾಥ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net