ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿಗೆ ವಿಲೀನಗೊಳಿಸಲು ಹೊರಟಿರುವ ಯಲಗುಂದ ಸರ್ಕಾರಿ ಶಾಲೆಯನ್ನು ಉಳಿಸಲು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರ ಪ್ರತಿಭಟನೆ
ಹಾಸನ: ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿಗೆ ವಿಲೀನಗೊಳಿಸಲು ಹೊರಟಿರುವ ಯಲಗುಂದ ಸರ್ಕಾರಿ ಶಾಲೆಯನ್ನು ಉಳಿಸಲು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಚೈತ್ರಾ ಮಾತನಾಡಿ, ಒಂದು ಬಾರಿ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆ ಮುಚ್ಚಿದರೆ, ಎಷ್ಟೇ ಪ್ರಯತ್ನಪಟ್ಟರೂ ಮತ್ತೆ ಶಾಲೆ ತೆರೆಯಲು ಸಾಧ್ಯವಿಲ್ಲ. ಒಂದೇ ಒಂದು ಮಗು ಇದ್ದರೂ ಆ ಮಗುವಿಗೆ ಶಾಲೆ ಇರಬೇಕು. ಒಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು. ಒಂದೇ ಒಂದು ಮಗು ಇದ್ದರೂ ಶಾಲೆ ಮುಚ್ಚಲ್ಲ ಎಂಬ ಹೇಳಿಕೆ ನೀಡಿರುವ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ಕೆಪಿಎಸ್-ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪಾಲಕರ ಪ್ರತಿಭಟನೆಗಳು ನಡೆಯುತ್ತಿವೆ. ಈ ಯೋಜನೆ ಅಡಿಯಲ್ಲಿ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ನಡೆ ಖಂಡನೀಯ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಇಲ್ಲ ಎಂದು ಸರ್ಕಾರ ಹೇಳುತ್ತಿರುವುದು ಶುದ್ಧ ಸುಳ್ಳು. ರಾಜ್ಯದಲ್ಲಿ 37 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ ಸರ್ಕಾರದ ನಿರ್ಲಕ್ಷೃದಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ರಾಜ್ಯದಲ್ಲಿ 21 ಸಾವಿರ ಸರ್ಕಾರಿ ಶಾಲಾ ಕಟ್ಟಡಗಳು ಹಲವು ವರ್ಷಗಳಿಂದ ದುರಸ್ತಿ ಕಂಡಿಲ್ಲ. 60 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇವೆ. ಈ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚಲು ಹೊರಟಿದೆ. ಕರ್ನಾಟಕದ ಜನತೆ ಈ ನೀತಿ ವಿರುದ್ಧ ಗಟ್ಟಿಯಾಗಿ ಹೋರಾಟ ಮಾಡಬೇಕಿದೆ ಹಾಗೂ ಈ ಊರಿನ ಸರ್ಕಾರಿ ಶಾಲೆ ಉಳಿಸಲು ಊರಿನ ಗ್ರಾಮಸ್ಥರು ಮುಂದಾಗಬೇಕು ಎಂದರು.
ಯಲಗುಂದ ಸರ್ಕಾರಿ ಶಾಲೆ ಉಳಿಸಿ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಾದ ಆಶಿಕ್, ಬಸವರಾಜು, ಚಂದ್ರಶೇಖರ್, ದಿನೇಶ್, ಜಗದೀಶ್ ಇತರರಿದ್ದರು.