ಜನರನ್ನು ವಂಚಿಸಿರುವ ಹಾಸನದ ಖಾಸಗಿ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ಅವರನ್ನು ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರಿಗೆ ಸಂತ್ರಸ್ತರು ದೂರು ಸಲ್ಲಿಸಿದರು. ವಿಶ್ವಾಸ್, ಶ್ರೀಧರ್, ಉಮೇಶ್, ಧರ್ಮನಾಯಕ್, ಚಂದ್ರೇಗೌಡ, ಯೋಗೀಶ್, ಶ್ರೀನಿವಾಸ್, ಗೀತಾ, ವಿನಯ್ ಇದ್ದರು.
ಹಾಸನ:ಇಲ್ಲಿನ ಖಾಸಗಿ ಫೈನಾನ್ಸ್‌ನ ಮಾಜಿ ಮ್ಯಾನೇಜರ್ ಸಬ್ಸಿಡಿ ರೂಪದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ 60ಕ್ಕೂ ಹೆಚ್ಚು ಗ್ರಾಹಕರಿಂದ 4 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿರುವ ಸಂಬಂಧ ಪ್ರಕರಣ ದಾಖಲಾಗಿದ್ದರೂ ಸಮರ್ಪಕ ತನಿಖೆ ನಡೆದಿಲ್ಲ ಹಾಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ವಂಚನೆಗೊಳಗಾದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರಿಗೆ ದೂರು ಸಲ್ಲಿಸಿದರು.
ಆರೋಪಿಯಾಗಿರುವ ಮಾಜಿ ಮ್ಯಾನೇಜರ್ ಪೂಜಾ ಹಾಗೂ ಅವರ ಸಹೋದರಿಯರು ಹಾಗೂ ಕ್ಯಾಷಿಯರ್ ಹೆಸರನ್ನೂ ಉಲ್ಲೇಖಿಸಿ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ 2026ರ ಮಾರ್ಚ್ 1ರಂದು ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾಗಿ 45 ದಿನ ಕಳೆದರೂ ಪ್ರಮುಖ ಆರೋಪಿಗಳ ಬಂಧನವಾಗದಿಲ್ಲ. ತನಿಖೆ ಹೊಣೆ ಹೊತ್ತಿರುವ ಪೊಲೀಸ್ ಅಧಿಕಾರಿ ಆರೋಪಿಗಳಿಗೆ ಪರೋಕ್ಷವಾಗಿ ಸಹಕಾರ ನೀಡಿರುವ ಅನುಮಾನ ಮೂಡಿಸಿದೆ ಎಂದು ಸಂತ್ರಸ್ತರು ಆರೋಪಿಸಿದರು.
ಈ ಸಂಬಂಧ ಕೆಲ ಆಡಿಯೋ, ವಿಡಿಯೋ ಹಾಗೂ ಸಂದೇಶಗಳ ದಾಖಲೆಗಳಿದ್ದು, ಅವುಗಳನ್ನು ತನಿಖಾ ಅಧಿಕಾರಿಗಳಿಗೆ ಸಲ್ಲಿಸಲು ಸಿದ್ಧವಿದ್ದೇವೆ ಎಂದು ಹೇಳಿದರು.
ಎಸ್ಪಿ ಅವರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಆಗ್ರಹಿಸಿದರು.
ಇದಕ್ಕೂ ಮುನ್ನ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದಾಗ ವಾಗ್ವಾದ ನಡೆಯಿತು. ನಂತರ ನೇರವಾಗಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು. ಹಣ ಕಳೆದುಕೊಂಡ ವಿಕಾಸ್, ಶ್ರೀಧರ್, ಉಮೇಶ್, ಧರ್ಮನಾಯಕ್, ಚಂದ್ರೇಗೌಡ, ಯೋಗೀಶ್, ಶ್ರೀನಿವಾಸ್, ಗೀತಾ, ವಿನಯ್ ಇದ್ದರು.