ಬಾಬು ಜಗಜೀವನರಾಮ್, ಅಂಬೇಡ್ಕರ್ ಜಯಂತಿ ಪ್ರತ್ಯೇಕವಾಗಿ ಆಚರಣೆಗೆ ನಿರ್ಧಾರ
ಅರಸೀಕೆರೆ: ರಾಜ್ಯ ಸರ್ಕಾರದ ಒಳ ಮೀಸಲಾತಿ ಜಾರಿ ವಿಳಂಬ ಧೋರಣೆ ಖಂಡಿಸಿ ಏ.5ರ ಬಾಬು ಜಗಜೀವನ ರಾಮ್ ಹಾಗೂ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ನಡೆಸಲಾಗುವುದು ಎಂದು ಮಾದಿಗ ಸಮುದಾಯದ ಮುಖಂಡ ಎಚ್.ಟಿ.ಶಿವಮೂರ್ತಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಿಗ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಳೆದ 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ನ್ಯಾಯ ಕೊಡಲಿದೆ ಎಂಬ ವಿಶ್ವಾಸ ದೂರವಾಗಿದೆ. ಮಾ.27 ರಂದು ಒಳ ಮೀಸಲಾತಿ ಕುರಿತು ನಡೆಯಬೇಕಿದ್ದ ರಾಜ್ಯ ಸಚಿವ ಸಂಪುಟದ ಸಭೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸ್ವಾಭಿಮಾನಿ ಮಾದಿಗ ಸಮುದಾಯ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಡಾ.ಬಾಬು ಜಗಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸರ್ಕಾರಿ ಜಯಂತಿ ಆಚರಣೆ ಕಾರ್ಯಕ್ರಮದಿಂದ ಹೊರಗುಳಿಯಲು ತೀರ್ಮಾನ ಮಾಡಿದ್ದು, ಏ.9ರವರೆಗೆ ಕಾದು ನೋಡುತ್ತೇವೆ. ಸಕಾರಾತ್ಮಕ ತೀರ್ಮಾನ ಬಾರದಿದ್ದಲ್ಲಿ ಜೇನುಕಲ್ಲು ಕ್ರೀಡಾಂಗಣದ ಸಿಂಧು ಭವನದವರೆಗೆ ಬೈಕ್ ಜಾಥಾದ ಮೂಲಕ ತೆರಳಿ ಉಭಯ ಮಹನೀಯರ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ, ರಾಜ್ಯ ಸರ್ಕಾರ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಲು ಹೊರಟಿದೆ. ಇದು ಖಂಡನೀಯ, ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಲಾಗುವುದು, ತಾಲೂಕು ಮಾದಿಗ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಈ ಬಾರಿಯ ಬಾಬು ಜಗಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಸರ್ಕಾರ ಆಯೋಜಿಸುವ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ ಎಂದರು.
ಮಾದಿಗ ಸಮುದಾಯದ ತಾಲೂಕು ಅಧ್ಯಕ್ಷ ಎ.ಪಿ.ಚಂದ್ರಯ್ಯ, ಮುಖಂಡ ಮಂಜುನಾಥ್ ಸಂಕೋಡನಹಳ್ಳಿ, ಮಹೇಶ್, ಸ್ವಾಮಿ, ಜಯಕುಮಾರ್, ರಂಗನಾಥ್, ದಾಸಪ್ಪ, ಹಟ್ಟಿಗಯ್ಯ, ಗೋವಿಂದರಾಜು, ಗುರುಮೂರ್ತಿ, ಭಾಸ್ಕರ್ ಜಾಜೂರು, ಪ್ರದೀಪ್, ಕೆಂಚಪ್ಪ, ಕಿರಣ್, ಹರೀಶ್ ಇದ್ದರು.