ಸಂವಿಧಾನದ ಅರಿವಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಸಹಕಾರಿ

ಚನ್ನರಾಯಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೂರನೇ ವರ್ಷದ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ಕುರಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ಸೇರಿದಂತೆ ಗಣ್ಯರು ಸನ್ಮಾನಿಸಿದರು. ಹಡೇನಹಳ್ಳಿ ಲೋಕೇಶ್, ದಿಂಡಗೂರು ಗೋವಿಂದರಾಜು, ಮರಿ ದ್ಯಾವೇಗೌಡ, ಕರ್ನಾಟಕ ದಲಿತ ಸಮನ್ವಯ ಸಮಿತಿ (ಮನುಜ ಮತ)ದ ಪದಾಧಿಕಾರಿಗಳು ಇದ್ದರು.
ಚನ್ನರಾಯಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೂರನೇ ವರ್ಷದ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ಕುರಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ಸೇರಿದಂತೆ ಗಣ್ಯರು ಸನ್ಮಾನಿಸಿದರು. ಹಡೇನಹಳ್ಳಿ ಲೋಕೇಶ್, ದಿಂಡಗೂರು ಗೋವಿಂದರಾಜು, ಮರಿ ದ್ಯಾವೇಗೌಡ, ಕರ್ನಾಟಕ ದಲಿತ ಸಮನ್ವಯ ಸಮಿತಿ (ಮನುಜ ಮತ)ದ ಪದಾಧಿಕಾರಿಗಳು ಇದ್ದರು.
Published on
ಚನ್ನರಾಯಪಟ್ಟಣ: ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಅರಿವು ಮೂಡಿಸಲು ಸ್ಪರ್ಧಾತ್ಮಕ ಪರೀಕ್ಷೆಗಳು ಸಹಕಾರಿಯಾಗಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಕರ್ನಾಟಕ ದಲಿತ ಸಮನ್ವಯ ಸಮಿತಿ (ಮನುಜ ಮತ) ಹಾಗೂ ಡಾ.ಸಿ.ಎನ್.ಬಾಲಕೃಷ್ಣ ಜನವಿಕಾಸ ಸಾಂಸ್ಕೃತಿಕ ವೇದಿಕೆ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಮೂರನೇ ವರ್ಷದ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ಕುರಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದಿಸಿ ಮಾತನಾಡಿದರು.
ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ, ರಾಜ್ಯ ಸರ್ಕಾರ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆ ಹಾಗೂ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವುದು ಮತ್ತು ಪ್ರದರ್ಶಿಸುವುದನ್ನು ಕಡ್ಡಾಯ ಮಾಡಿದೆ. ಇಂದಿನ ವಿದ್ಯಾರ್ಥಿಗಳು ಸಂವಿಧಾನ ರಚನೆ ಇತಿಹಾಸ, ಅದರ ಅಂಶಗಳು ಹಾಗೂ ನಾಗರಿಕರಿಗೆ ನೀಡಿರುವ ಹಕ್ಕುಗಳ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯವಾಗಿದೆ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯು ಇಡೀ ಸಂವಿಧಾನವನ್ನು ಅಧ್ಯಯನ ಮಾಡಬೇಕೇ ಹೊರತು ಅದರ ಪೀಠಿಕೆ ಓದುವಿಕೆಗಷ್ಟೇ ಸೀಮಿತವಾಗಬಾರದು. ಸಂವಿಧಾನದ ಆಶಯ ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಂವಿಧಾನ ಕುರಿತಂತೆ ಕರ್ನಾಟಕ ದಲಿತ ಸಮನ್ವಯ ಸಮಿತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸಂವಿಧಾನ ತಿಳಿದುಕೊಳ್ಳಲು ಪ್ರೇರಣೆ ನೀಡುತ್ತಿದೆ. ಜತೆಗೆ ಪೀಠಿಕೆ ಆಶಯದಂತೆ ಸಮಾನತೆ, ಸಮಭಾವ, ಸೌಹಾರ್ದ ಉಳಿಸಲು ಸಾಧ್ಯವಾಗುತ್ತಿದೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಸಂವಿಧಾನ ಕುರಿತು ಆಯೋಜಿಸುವ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಿ ಸವಿಧಾನದ ಬಗ್ಗೆ ಅಧ್ಯಯನ ಮಾಡಲು ಪ್ರೇರೇಪಿಸಬೇಕೆಂದು ತಿಳಿಸಿದರು.
ಕರ್ನಾಟಕ ದಲಿತ ಸಮನ್ವಯ ಸಮಿತಿ (ಮನುಜ ಮತ) ಹಾಗೂ ಡಾ.ಸಿ.ಎನ್. ಬಾಲಕೃಷ್ಣ ಜನವಿಕಾಸ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ದಿಂಡಗೂರು ಗೋವಿಂದರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿ ದ್ಯಾವೇಗೌಡ, ಕರ್ನಾಟಕ ದಲಿತ ಸಮನ್ವಯ ಸಮಿತಿ (ಮನುಜ ಮತ)ದ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಹುಮಾನಿತರು: ಭಾರತದ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ಕುರಿತು ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ ವಿತರಿಸಲಾಯಿತು. ಮಲ್ಲಿಕಾರ್ಜುನ ಎ.ಪಿ ಪಾಟೀಲ್-ಪ್ರಥಮ ಬಹುಮಾನ. ವಿ.ಪಿ. ದರ್ಶನ್ - ದ್ವಿತೀಯ ಬಹುಮಾನ, ಎ.ಜೆ. ಶಿವರಾಜು-ತೃತೀಯ ಬಹುಮಾನ ಹಾಗೂ ಸಮಾಧಾನಕರ ಬಹುಮಾನ ಪಡೆದ ಬಿ.ವಿ.ವೀರಭದ್ರಪ್ಪ, ಬಿ.ಪಿ.ರಮ್ಯಾ, ಬಿ.ಎಂ.ಐಶ್ವರ್ಯಾ, ಡಿ.ಜೆ.ದರ್ಶನ್, ವಿ.ಟಿ.ವರ್ಷಿಣಿ, ಲಿಖಿತ್ ಕುಮಾರ್ ಅವರಿಗೆ ನಗದು ಸೇರಿದಂತೆ ಪಾರಿತೋಷಕ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net