ಜಿಲ್ಲೆಯಲ್ಲಿ ಕುಸಿಯುತ್ತಿದೆ ತೆಂಗು ಇಳುವರಿ

ಪರೋಪ ಕೀಟವನ್ನು ಅರಸೀಕೆರೆ ಲ್ಯಾಬ್‌ನಲ್ಲಿ ಉತ್ಪತ್ತಿಮಾಡುತ್ತಿರುವುದು.
ಪರೋಪ ಕೀಟವನ್ನು ಅರಸೀಕೆರೆ ಲ್ಯಾಬ್‌ನಲ್ಲಿ ಉತ್ಪತ್ತಿಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಕುಸಿಯುತ್ತಿದೆ ತೆಂಗು ಇಳುವರಿ
  • 2-3 ವರ್ಷಗಳಲ್ಲಿ ಶೇ.25 ರಿಂದ 30 ರಷ್ಟು ಇಳಿಕೆ
  • ಕೀಟಬಾಧೆಯಿಂದ ಬೆಳೆಗಾರರು ತತ್ತರ
ಕೆ.ಆರ್.ಪ್ರಸಿನ್ ಹಾಸನ
ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಹಾಸನ ಜಿಲ್ಲೆಯಲ್ಲಿ ಕಳೆದ ಎರಡು-ಮೂರು ವರ್ಷದಲ್ಲಿ ಶೇ.25 ರಿಂದ 30ರಷ್ಟು ತೆಂಗು ಬೆಳೆ ಇಳುವರಿ ಕುಂಠಿತವಾಗಿದೆ.
ಜಿಲ್ಲೆಯಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಜೀವನೋಪಾಯ ಹಾಗೂ ಆದಾಯಕ್ಕಾಗಿ ತೆಂಗು ಬೆಳೆ ಮೇಲೆ ಅವಲಂಬಿತರಾಗಿದ್ದಾರೆ. ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಬೇಲೂರು, ಹೊಳೇನರಸೀಪುರ ಹಾಗೂ ಅರಕಲಗೂಡು ತಾಲೂನಿನಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಕಳೆದ 2-3 ವರ್ಷಗಳಲ್ಲಿ ತೆಂಗಿನ ಬೆಳೆಯಲ್ಲಿ ಶೇ.25 ರಿಂದ 30 ರಷ್ಟು ಇಳುವರಿ ಕುಂಠಿತವಾಗಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ತೆಂಗಿನ ಇಳುವರಿ ಕುಂಠಿತವಾಗಲು ಹವಾಮಾನ ವೈಪರೀತ್ಯ, ಕೀಟ ಮತ್ತು ರೋಗಬಾಧೆ, ಮಣ್ಣು, ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಇರುವುದಾಗಿದೆ. ಕಪ್ಪುತಲೆ ಹುಳು ಮತ್ತು ಬಿಳಿ ನೊಣ ಕಾಟ, ಕಾಂಡ ಸೋರುವ ರೋಗ ಮತ್ತು ಅಣಬೆ ರೋಗ ಪ್ರಮುಖ ಇಳುವರಿ ಕುಂಠಿತಕ್ಕೆ ಕಾರಣವಾಗಿದೆ. ಪರಿಣಾಮ ಹೆಚ್ಚಿನ ಸಂಖ್ಯೆಯ ಮರಗಳು ಒಣಗಿ ಸಾಯುತ್ತಿವೆ. ತೆಂಗು ಬೆಳೆಯುವ ಶೇ.70 ರಷ್ಟು ಭಾಗದಲ್ಲಿ ಈ ರೋಗ/ಕೀಟಗಳ ಬಾಧೆ ಕಾಣಬಹುದಾಗಿದೆ. ಕೆರಗೋಡು ಹೊಡೆಯುವುದು, ಹನಿ ನೀರಾವರಿ ಅಳವಡಿಸದೆ ಇರುವುದು, ಸರಿಯಾದ ವಿಧಾನದಲ್ಲಿ ಉಳುಮೆ ಮಾಡದಿರುವುದು ಕೂಡ ರೋಗ ಹರಡಲು ಕಾರಣವಾಗಿದೆ.
ರೋಗ ನಿಯಂತ್ರಣಕ್ಕೆ ಇಲಾಖೆ ಪಣ
ತೆಂಗು ಬೆಳೆಯ ಪುನಶ್ಚೇತನಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ತೆಂಗು ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಹಾಗೂ ರಾಜ್ಯ ವಲಯ ಯೋಜನೆಗಳಡಿಯಲ್ಲಿ ಪೋಷಕಾಂಶಗಳು, ಹಸಿರೆಲೆ ಗೊಬ್ಬರ ಬೀಜಗಳು, ಬೇವಿನ ಹಿಂಡಿ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗಿರುತ್ತಿದೆ. ಕಾಂಡ ಸೋರುವ ರೋಗ ಮತ್ತು ಅಣಬೆ ರೋಗಗಳ ನಿರ್ವಹಣೆಗಾಗಿ ಏಛ್ಡಿಚ್ಚಟ್ಞಚ್ಢಟ್ಝಛಿ ಮತ್ತು ಇಟಛ್ಟಿ ಣ್ಡ ಇಜ್ಝಟ್ಟಜಿಛಿ ಔಷಧಗಳನ್ನು ವಿತರಿಸಲಾಗಿದ್ದು, ಇವುಗಳನ್ನು ಬಳಸುವ ವಿಧಾನಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಪ್ರಾತ್ಯಕ್ಷತೆ ಕಾರ್ಯಕ್ರಮಗಳನ್ನು ಮತ್ತು ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.
ಪರೋಪಜೀವಿ ಉತ್ಪಾದನೆ
ಕಪ್ಪುತಲೆ ಹುಳುವಿನ ನಿರ್ವಹಣೆಗಾಗಿ ಪರೋಪಜೀವಿಗಳನ್ನು ಅರಸೀಕೆರೆ ಮತ್ತು ಹೊಳೆನರಸೀಪುರ ತಾಲೂಕಿನಲ್ಲಿರುವ ಪ್ರಯೋಗಶಾಲೆಗಳಲ್ಲಿ ಉತ್ಪಾದನೆ ಮಾಡಿ ರೈತರ ತೋಟಗಳಿಗೆ ಬೇಟಿ ನೀಡಿ ಸಾಮೂಹಿಕವಾಗಿ ಬಿಡುಗಡೆ ಮಾಡುವುದು ಹಾಗೂ ಪ್ರಯೋಗಶಾಲೆಗಳಿಗೆ ಬರುವ ರೈತರಿಗೆ ಉಚಿತವಾಗಿ ಗೋನಿಯೋಜಸ್ ಪರೋಪಜೀವಿಗಳನ್ನು ಕೊಡಲಾಗುತ್ತಿದೆ. ಇದಲ್ಲದೇ ಪರೋಪಜೀವಿಗಳನ್ನು ಬಿಡುಗಡೆ ಮಾಡುವ ವಿಧಾನವು ಅತ್ಯಂತ ಪರಿಣಾಮಕಾರಿಯಾಗಿರುವುದರಿಂದ ಪ್ರಯೋಗಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಪರೋಪಜೀವಿಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ ಪ್ರಯೋಗಶಾಲೆಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ತೆಂಗು ಅಭಿವೃದ್ಧಿ ಮಂಡಳಿಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ತೆಂಗು ಬೆಳೆಯಲ್ಲಿ ಅಳವಡಿಸಬಹುದಾದ ಉತ್ತಮ ಬೇಸಾಯ ಪದ್ಧತಿಗಳು, ಕೀಟ/ರೋಗ ನಿರ್ವಹಣೆ ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿಯನ್ನು ಆಗ್ಗಿಂದಾಗೆ ಒದಗಿಸಲಾಗುತ್ತಿದೆ. ಹನಿ ನೀರಾವರಿ ಅಳವಡಿಸುವ ಎಲ್ಲ ವರ್ಗದ ರೈತರಿಗೆ ಶೆ.90ರಷ್ಟು ಸಹಾಯಧನ ನೀಡಲಾಗುತ್ತಿದೆ.
ತೆಂಗು ಬೆಳೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು
* ಅತಿಯಾಗಿ ಟ್ರ್ಯಾಕ್ಟರ್ ಉಳುಮೆ ಮಾಡಬಾರದು
* ಕೆರೆಗೋಡು/ ಕಪ್ಪು ಜೇಡಿಮಣ್ಣನ್ನು ಹಾಕಬಾರದು
* ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು
* ವರ್ಷದಲ್ಲಿ ಎರಡು ಬಾರಿ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆಯುವುದು.
* ತೆಂಗಿನ ಗಿಡಗಳ ಮಧ್ಯೆ ಸೂಕ್ತ ತರಕಾರಿ, ಹಣ್ಣು, ಹೂವು, ಸಾಂಬಾರು ಬೆಳೆ, ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು
* ತೆಂಗಿನ ಗರಿಗಳನ್ನು ಕತ್ತರಿಸಿ ಬುಡದ ಸುತ್ತಲೂ ಹಾಕುವುದು, ಕಾಯಿ ಸಿಪ್ಪೆಯನ್ನು ಬುಡದ ಸುತ್ತಲೂ ಹೂಳುವುದು
* ಎರಡು ಗಿಡಗಳ ಮಧ್ಯೆ ಕಂದಕ ಮಾಡಿ ಕಾಯಿಸಿಪ್ಪೆ ಮತ್ತು ಒಣಗಿದ ಗರಿಗಳನ್ನು ಹಾಕುವುದು. ಇದರಿಂದ ತ್ಯಾಜ್ಯ ನಿರ್ವಹಣೆ ಮಾಡುವ ಜತೆಗೆ ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನೂ ಮಾಡಬಹುದು.
ಇಲಾಖೆ ವತಿಯಿಂದ ಪ್ರತಿ ತಾಲೂಕು ಮಟ್ಟದಲ್ಲೂ ರೈತರ ಜಮೀನಿಗೆ ತೆರಳಿ ರೈತರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಬೇಸಾಯ ಕ್ರಮಗಳು ಕುರಿತು ಇಲಾಖೆಯ ಸಿಬ್ಬಂದಿ ರೈತರಿಗೆ ತಿಳಿಸುತ್ತಿದ್ದಾರೆ. ತೆಂಗು ಬೆಳೆಗೆ ತಗಲುವ ರೋಗಗಳು, ನಿರ್ವಹಣೆ ಹಾಗೂ ಔಷಧ ಕ್ರಮಗಳ ಬಗ್ಗೆ ವಿವರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಯೋಜನೆ ಮಾಡಲಾಗಿದೆ. ರೈತರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ಹಾಗೂ ಪರೋಪಕಾರಿ ಹುಳುಗಳನ್ನು ಬಿಡುವ ಕುರಿತು ರೈತರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ.
ಯೋಗೇಶ್
ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಹಾಸನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net