ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಗಂಧದಕೋಠಿ ಕಾಲೇಜಿನಲ್ಲಿ ವಾಸನ್ ಐ ಕೇರ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಡಾ.ಕೆ.ಆರ್.ಸ್ನೇಹಾ, ಡಿ.ಕೆ.ಮಂಜಯ್ಯ, ಜಿ.ಆರ್.ಮೋಹನ್ ಕುಮಾರ್, ಪಿ.ನಂದನ್, ಡಾ.ಕೆ.ಆರ್. ಸುರೇಶ್ ಕುಮಾರ್ ಇತರರಿದ್ದರು.
ಹಾಸನ: ಮನುಷ್ಯನ ದೇಹದಲ್ಲಿ ಕಣ್ಣು ಅತ್ಯಂತ ಸೂಕ್ಷ್ಮವಾದ ಅಂಗವಾಗಿದ್ದು, ಅದನ್ನು ಸರಿಯಾಗಿ ಸಂರಕ್ಷಿಸಿಕೊಳ್ಳಬೇಕು ಎಂದು ಕಣ್ಣಿನ ವೈದ್ಯೆ ಡಾ.ಕೆ.ಆರ್.ಸ್ನೇಹಾ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಗಂಧದಕೋಟಿ ಕಾಲೇಜಿನಲ್ಲಿ ಶುಕ್ರವಾರ ವಾಸನ್ ಐ ಕೇರ್ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ತನ್ನ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಅಥವಾ ಯಾವುದೇ ಸಾಧನೆ ಮಾಡಬೇಕಾದರೂ ಕಣ್ಣಿನ ಸಹಾಯ ಅತ್ಯಗತ್ಯ. ಹಾಗಾಗಿ ಪ್ರತಿಯೊಬ್ಬ ಮನುಷ್ಯನು ತಮ್ಮ ಕಣ್ಣುಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೆ ಅತಿಯಾಗಿ ಮೊಬೈಲ್ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುತ್ತಿರುವುದರಿಂದ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಪರಿಣಾಮ ಚಿಕ್ಕ ವಯಸ್ಸಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಇತರ ಚಿಕಿತ್ಸೆಗೆ ಒಳಗಾಗಬೇಕಾಗಿದೆ ಎಂದರು.
ಇನ್ನು ಕೆಲವು ಸಂಗತಿಗಳಲ್ಲಿ ಕಣ್ಣಿನ ಬಗ್ಗೆ ಸಾಮಾನ್ಯವಾಗಿ ನಿರ್ಲಕ್ಷೃ ವಹಿಸಿ ಅದಕ್ಕೆ ಹಾನಿಯಾದ ಬಳಿಕ ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಪ್ರತಿ 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಇಲ್ಲವೇ ಮನುಷ್ಯನಿಗೆ 40 ವರ್ಷ ದಾಟಿದ ಮೇಲೆ ಕಡ್ಡಾಯವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಶಿಕ್ಷಣ ಕಣ್ಣುಗಳಿಗೆ ಹೊಸ ಲೋಕವನ್ನು ತೋರಿಸುತ್ತದೆ. ಕಣ್ಣುಗಳ ಮೂಲಕವೇ ನಾವು ಅನುಭವಗಳನ್ನು ಸಂಗ್ರಹಿಸುತ್ತೇವೆ. ಕಣ್ಣುಗಳಂತೆ ಮನಸ್ಸನ್ನೂ ಸ್ವಚ್ಛವಾಗಿಡಬೇಕು, ಹೆಚ್ಚಾಗಿ ಮೊಬೈಲ್ ಬಳಕೆ ಮತ್ತು ಕಂಪ್ಯೂಟರ್ ಬಳಕೆಯಿಂದಾಗಿ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದೆ. ಆದಷ್ಟು 18 ವರ್ಷ ವಯೋಮಿತಿ ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಿ 14 ವರ್ಷದ ನಂತರ ಕಡ್ಡಾಯವಾಗಿ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕಣ್ಣಿನ ಪೊರೆ ಮತ್ತು ಕಣ್ಣು ಸಮಸ್ಯೆ ಬಂದಾಗ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ, ಕಣ್ಣು ಮನುಷ್ಯನಿಗೆ ಮುಖ್ಯವಾದ ಅಂಗವಾಗಿದ್ದು, ಮನುಷ್ಯ ಮೃತಪಟ್ಟ ನಂತರ ಕಣ್ಣುಗಳನ್ನು ದಾನ ಮಾಡಬಹುದಾದ ಅಂಗವಾಗಿದೆ. ಕಣ್ಣುಗಳನ್ನು ಬಹಳ ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು. ಕಣ್ಣಿನ ಚಿಕ್ಕಪುಟ್ಟ ಸಮಸ್ಯೆಗಳು ಬಂದಾಗ ಮೂಢನಂಬಿಕೆಯ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸದೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಉತ್ತಮ ಆಹಾರ ಸೇವನೆಯಿಂದ ಕಣ್ಣುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂದರು.