ಬೇಸಿಗೆ ಮುಗಿಯುವವರೆಗೂ ವಿದ್ಯುತ್ ಸಮಸ್ಯೆಯಾಗದಿರಲಿ

ಚನ್ನರಾಯಪಟ್ಟಣದ ಸೆಸ್ಕ್ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರ್.ರತ್ನಾ, ಎನ್.ಆರ್.ಹರೀಶ್,  ವಜ್ರಕುಮಾರ್, ಕೃಷ್ಣ ಇದ್ದರು.
ಚನ್ನರಾಯಪಟ್ಟಣದ ಸೆಸ್ಕ್ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರ್.ರತ್ನಾ, ಎನ್.ಆರ್.ಹರೀಶ್, ವಜ್ರಕುಮಾರ್, ಕೃಷ್ಣ ಇದ್ದರು.
Published on
ಚನ್ನರಾಯಪಟ್ಟಣ: ಬೇಸಿಗೆ ಅವಧಿ ಮುಗಿಯುವವರೆಗೂ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ಗಮನಹರಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಸೆಸ್ಕ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ತ್ರಿಫೇಸ್ ಲೈನ್ ಇದ್ದಾಗ ಎಲ್ಸಿ ತೆಗೆದುಕೊಳ್ಳಬೇಡಿ ಎಂದರು.
ಕಳೆದ 3 ವರ್ಷಗಳಿಂದ ತಾಲೂಕು ವ್ಯಾಪ್ತಿಯ ಬಹುತೇಕ ಕೆರೆ-ಕಟ್ಟೆಗಳಿಗೆ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸುತ್ತಿರುವ ಪರಿಣಾಮ ವ್ಯಾಪ್ತಿಯಲ್ಲಿ ಅಂತರ್ಜಲ ಚೇತರಿಕೆ ಕಂಡಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದರು.
ಬೇಸಿಗೆ ಬಿಸಿಲಿನ ತಾಪಮಾನ ಏರಿಕೆಯಾಗಿರುವುದರಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ನೀಡುವುದು ಅಗತ್ಯವಿರುತ್ತದೆ. ವಿದ್ಯುತ್ ಅಭಾವ ಎದುರಾದರೆ ಬೆಳೆಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.
ತಾಲೂಕಿನ ಶೇ.40ರಷ್ಟು ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಇದೆ. ದಯವಿಟ್ಟು ಅವುಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು. ರೈತರ ಬೆಳೆಗಳಿಗೆ, ಜನ-ಜಾನುವಾರುಗಳ ಕುಡಿಯುವ ನೀರಿಗೆ ಹಾಗೂ ಮಕ್ಕಳ ಓದಿನ ಸಲುವಾಗಿ ಅಗತ್ಯವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಯಾವುದೇ ಸಮಸ್ಯೆಗಳು ಕಂಡುಬಂದರೂ ತಕ್ಷಣ ಸರಿಪಡಿಸಿ ವಿದ್ಯುತ್ ಪೂರೈಕೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿಯೇ ಚನ್ನರಾಯಪಟ್ಟಣ ತಾಲೂಕು ಹೆಚ್ಚು ಕೊಳವೆ ಬಾವಿಗಳನ್ನು ಹೊಂದಿದೆ. ವಿದ್ಯುತ್ ಪರಿವರ್ತಕಗಳು (ಟಿಸಿ) ಸುಟ್ಟರೆ ಸಾಧ್ಯವಾದಷ್ಟು ಬೇಗ ಒದಗಿಸಬೇಕು. ವಿದ್ಯುತ್ ಪರಿವರ್ತಕದ ಸಲುವಾಗಿ ರೈತರನ್ನು ಅಲೆದಾಡಿಸಬೇಡಿ, ರೈತರೊಂದಿಗೆ ಗೌರವದಿಂದ ವರ್ತಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಬಹುತೇಕ ರೈತರು ಹೈನುಗಾರಿಕೆಯನ್ನು ಅಳವಡಿಸಿಕೊಂಡಿದ್ದು ಹಾಲು ಕರೆಯಲು ಮಷಿನ್ ಉಪಯೋಗಿಸುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ವಿದ್ಯುತ್ ಅಗತ್ಯವಿದ್ದು ಸಮಸ್ಯೆಯಾಗದಂತೆ ಗಮನಹರಿಸಬೇಕು ಎಂದರು.
ಭೈರಾಪುರ, ಸಾತೇನಹಳ್ಳಿ ಹಾಗೂ ಹಾರೋ ಸೋಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ತಮ್ಮ ತಮ್ಮ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳನ್ನು ಕುರಿತು ಶಾಸಕರಿಗೆ ಹಲವು ದೂರುಗಳನ್ನು ನೀಡಿದರು.
ಭೈರಾಪುರ ಗ್ರಾಮದ ರೈತ ಕೃಷ್ಣೇಗೌಡ ಮಾತನಾಡಿ, ಸಂಜೆ 6 ಗಂಟೆಯಿಂದ ಬೆಳಗಿನ ಜಾವದವರೆಗೂ ಅಗತ್ಯವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಸಂಜೆ ಗ್ರಾಮೀಣ ಪ್ರದೇಶದಲ್ಲಿ ಚಿರತೆಗಳ ಕಾಟ ಪ್ರಾರಂಭವಾಗಲಿದೆ. ದಯವಿಟ್ಟು ರಾತ್ರಿಯಿಡೀ ವಿದ್ಯುತ್ ಪೂರೈಕೆ ಮಾಡುವುದು ಸೂಕ್ತ ಎಂದು ಕೋರಿದರು.
ಶಾಸಕರು ಸ್ಥಳದಿಂದಲೇ ಮೇಲಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕರೆ ಮಾಡಿ ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ರತ್ನಾ ಮಾತನಾಡಿ, ಈಗಾಗಲೇ ಅರ್ಜಿ ನೀಡಿರುವ ರೈತರಿಗೆ ಎಸ್ಟಿಮೇಷನ್ ಸಿದ್ಧಪಡಿಸಿ ವಿದ್ಯುತ್ ಪರಿವರ್ತಕಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಹಾಗೂ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯ ಸಲುವಾಗಿ ವಿದ್ಯುತ್ ತೊಂದರೆಯಾಗದಂತೆ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಪ್ರಮುಖರಾದ ಬಸವರಾಜ್, ಎಇ ಎನ್.ಆರ್.ಹರೀಶ್, ಎಇಇಗಳಾದ ವಜ್ರಕುಮಾರ್, ಕೃಷ್ಣ, ವಿಶಾಲ, ಶಾಖಾಧಿಕಾರಿಗಳು, ಸಿಬ್ಬಂದಿ ಹಾಗೂ ತಾಲೂಕು ವ್ಯಾಪ್ತಿಯ ರೈತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net