ಹೆಣ್ಣು ಮಕ್ಕಳ ರಕ್ಷಣೆಗೆ ಬಿಗಿ ಕಾನೂನು ಅಗತ್ಯ

ರಾಜಸ್ಥಾನದಲ್ಲಿ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಅಕ್ಷರ ಶಾಲೆಯಿಂದ ಬೃಹತ್ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗಿಯಾಗಿದ್ದರು.
ರಾಜಸ್ಥಾನದಲ್ಲಿ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಅಕ್ಷರ ಶಾಲೆಯಿಂದ ಬೃಹತ್ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗಿಯಾಗಿದ್ದರು.
Published on
ಚನ್ನರಾಯಪಟ್ಟಣ: ರಾಜಸ್ಥಾನದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ನಾಚಿಕೆಗೇಡಿನ ಸಂಗತಿ, ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಆಗ್ರಹಿಸಿ ಅಕ್ಷರ ಸ್ಕೂಲ್ ಆಫ್ ಎಕ್ಸಲೆನ್ಸ್ ವತಿಯಿಂದ ಸೋಮವಾರ ಬೃಹತ್ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಶಾಲೆಯ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಕೈಯಲ್ಲಿ ಜಾಗೃತಿ ಫಲಕಗಳನ್ನು ಹಿಡಿದು ಹಿಡಿದು ಘೋಷಣೆ ಕೂಗಿದರು. ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಮತ್ತೊಮ್ಮೆ ಇಂತಹ ಘಟನೆ ಮರುಕಳಿಸದಂತೆ ಬಲಿಷ್ಠ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಮೆರವಣಿಗೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ 13 ವರ್ಷದ ಬಾಲಕಿಯ ಮೇಲೆ 32 ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆಗೆ ಕಾರಣರಾದವರೆಲ್ಲರಿಗೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು. ದೇಶದಲ್ಲಿ ಹಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲದಂತಹ ಸನ್ನಿವೇಶ ಸೃಷ್ಟಿ ಮಾಡಿರುವ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಮೆರವಣಿಗೆ ಶಾಲಾ ಆವರಣದಿಂದ ಆರಂಭವಾಗಿ ಮುಖ್ಯರಸ್ತೆ, ಮಾರುಕಟ್ಟೆ ರಸ್ತೆ, ಬಸ್ ನಿಲ್ದಾಣ, ನವೋದಯ ವೃತ್ತ, ಮೈಸೂರು ರಸ್ತೆ ಮೂಲಕ ಸುಮಾರು ಐದು ಕಿಲೋಮೀಟರ್ ಸಂಚರಿಸಿ ಕೋರ್ಟ್ ಮುಂಭಾಗದಲ್ಲಿ ಮುಕ್ತಾಯಗೊಂಡಿತು. ರಾಷ್ಟ್ರಗೀತೆ ಹಾಡುವ ಮೂಲಕ ತೆರೆ ಎಳೆಯಲಾಯಿತು.
ಶಾಲಾ ಪ್ರತಿನಿಧಿಗಳು ಮಾತನಾಡಿ, ಕುಟುಂಬಸ್ಥರು ಹೆಣ್ಣು ಮಕ್ಕಳ ಮೇಲೆ ನಿಗಾ ಇಡುವುದು ಮುಖ್ಯವಾಗಬೇಕು. ಅದು ಅವರ ಜವಾಬ್ದಾರಿಯೂ ಹೌದು. ಅತ್ಯಾಚಾರದ ವಿಷಯದಲ್ಲಿ ಹೊರ ದೇಶದ ಕಾನೂನುಗಳು ಬಿಗಿಯಾಗಿದ್ದು, ನಮ್ಮ ದೇಶದಲ್ಲಿ ಮಾತ್ರ ಸಡಿಲವಾಗಿದೆ. ಈ ಉದ್ದೇಶದಿಂದಲೇ ಹೆಣ್ಣಿನ ಮೇಲೆ ಇಂತಹ ನೀಚ ಕೃತ್ಯ ಎಸಗುತ್ತಿದ್ದಾರೆ. ಅತ್ಯಾಚಾರ ಮಾಡಿ ಜೈಲಿಗೆ ಹೋದವರು ಮತ್ತೆ ಜಾಮೀನಿನ ಮೇಲೆ ಹೊರ ಬರುತ್ತಿದ್ದಾರೆ. ಅತ್ಯಾಚಾರ ಮಾಡಿದ ವ್ಯಕ್ತಿಗಳನ್ನು ಜೈಲಿನಲ್ಲಿಯೇ ಇರುವಂತೆ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯವನ್ನು ಸಮಾಜ ಒಗ್ಗಟ್ಟಿನಿಂದ ವಿರೋಧಿಸಬೇಕು. ಪ್ರತಿಯೊಬ್ಬ ನಾಗರಿಕನು ಮಕ್ಕಳ ಸುರಕ್ಷತೆ ಹಾಗೂ ಗೌರವವನ್ನು ಕಾಪಾಡುವ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಅಕ್ಷರ ಸ್ಕೂಲ್ ಆಫ್ ಎಕ್ಸಲೆನ್ಸ್ ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net