ದೇಶದ ಅಭಿವೃದ್ಧಿಗೆ ಜನಗಣತಿ ಸಹಕಾರಿ

ಸಕಲೇಶಪುರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿದರು
ಸಕಲೇಶಪುರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿದರು
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿಮೆಂಟ್ ಮಂಜು ಅಭಿಪ್ರಾಯ
ಸಕಲೇಶಪುರ: ದೇಶದ ಅಭಿವೃದ್ಧಿ ಹಾಗೂ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಸ್ವಯಂ ಜನಗಣತಿಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಏ.1ರಿಂದ ಜನಗಣತಿ ಪ್ರಕ್ರಿಯೆ ಆರಂಭವಾಗಿದೆ. ಇದು ಕೇವಲ ಅಂಕಿ-ಅಂಶಗಳ ಸಂಗ್ರಹವಲ್ಲ, ಬದಲಿಗೆ ನಮ್ಮ ರಾಜ್ಯ ಮತ್ತು ದೇಶದ ಭವಿಷ್ಯದ ನಕಾಶೆ ರೂಪಿಸುವ ಮಹತ್ವದ ಕಾರ್ಯಕ್ರಮವಾಗಿದೆ. ವಿಶೇಷವಾಗಿ ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಗಣತಿಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಜನಗಣತಿಯ ಮೊದಲ ಹಂತದಲ್ಲಿ ನಾಗರಿಕರು ತಾವಾಗಿಯೇ ಮಾಹಿತಿ ದಾಖಲಿಸಲು ಅವಕಾಶವಿದೆ. ಏಪ್ರಿಲ್ 15 ರವರೆಗೆ ಸಾರ್ವಜನಿಕರು ಆನ್‌ಲೈನ್ ಮೂಲಕ ತಮ್ಮ ಮೊಬೈಲ್‌ನಲ್ಲೇ ಕುಟುಂಬದ ಮಾಹಿತಿಯನ್ನು ಭರ್ತಿ ಮಾಡಬಹುದು. ನಾಗರಿಕರು ನೀಡುವ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಪ್ರತಿಯೊಬ್ಬರೂ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ನಾಗರಿಕರು ತಮ್ಮ ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸ್ವಯಂ ಗಣತಿ ಪೂರ್ಣಗೊಳಿಸಿದ ನಂತರ ಸಿಗುವ ಐಡಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಏಪ್ರಿಲ್ 16ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದಾಗ ಅವರಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ಕೋರಿದರು.
ತಾಲೂಕು ಚುನಾವಣಾ ಶಾಖೆಯ ಗ್ರೇಡ್-2 ತಹಸೀಲ್ದಾರ್ ಜನಾರ್ದನ್, ಕಂದಾಯ ನಿರೀಕ್ಷಕ ದಾನ್ ಪ್ರಕಾಶ್, ಪುರಸಭಾ ಸಿಬ್ಬಂದಿ ಸುಂದರೇಶ್, ಗಂಗಾಧರ್, ವರದರಾಜ್, ರೇವಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net