ಜಿಲ್ಲೆಯಲ್ಲಿ ಹೆಚ್ಚಿದ ಜಾನುವಾರು ಕಳವು ಪ್ರಕರಣ

ಹಾಸನ ಪಶುವೈದ್ಯಕೀಯ ಇಲಾಖೆಯಲ್ಲಿ ಹಸುಗಳಿಗೆ ಕಿವಿಯೋಲೆ ಹಾಕಲು ಸಿದ್ಧಪಡಿಸಿರುವುದು.
ಹಾಸನ ಪಶುವೈದ್ಯಕೀಯ ಇಲಾಖೆಯಲ್ಲಿ ಹಸುಗಳಿಗೆ ಕಿವಿಯೋಲೆ ಹಾಕಲು ಸಿದ್ಧಪಡಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಹೆಚ್ಚಿದ ಜಾನುವಾರು ಕಳವು ಪ್ರಕರಣ
  • ಗಂಭೀರವಾಗಿ ಪರಿಗಣಿಸಿದ ಪಶುಪಾಲನಾ ಇಲಾಖೆ
  • ಸ್ವಯಂ ದೂರು ದಾಖಲಿಸಲು ಮುಂದು
ಹಾಸನ: ನಗರ ಸೇರಿ ಜಿಲ್ಲಾದ್ಯಂತ ನಡೆಯುತ್ತಿರುವ ಹಸು ಸೇರಿ ಇತರ ಮೂಕ ಪ್ರಾಣಿಗಳ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶುಪಾಲನಾ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಲು ಮುಂದಾಗಿದೆ.
ನಗರದ ವಿದ್ಯಾ ನಗರದಲ್ಲಿ ಇತ್ತೀಚೆಗೆ ಹೆಲ್ಮೆಟ್ ಧರಿಸಿದ ಮುಸುಕುಧಾರಿಯೊಬ್ಬ ಗಬ್ಬದ ಹಸುವನ್ನು ಕದ್ದೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಹಸುವಿನ ವಾರಸುದಾರರು ಪತ್ತೆಗೆ ಮನವಿ ಮಾಡಿಕೊಂಡಿದ್ದರ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಕಳ್ಳ ಬೂದೇಶ್ವರ ಮಠದ ಆವರಣದಲ್ಲಿ ಹಸು ಬಿಟ್ಟು ಪರಾರಿಯಾಗಿದ್ದ. ಆದರೆ ಎರಡೇ ದಿನದಲ್ಲಿ ಹಸು ಮೃತಪಟ್ಟಿದೆ. ದುರುದ್ದೇಶದಿಂದ ಆತ ಹಸುವಿಗೆ ವಿಷ ಬೆರೆಸಿದ್ದ ಎಂದು ವಾರಸುದಾರರಾದ ಸುಶೀಲಮ್ಮ ಅವರು ಆರೋಪಿಸಿದ್ದಾರೆ. ಹಾಸನದ ಪಶು ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಸುಂಡೇನಹಳ್ಳಿಯಲ್ಲೂ ನಾಲ್ಕು ದಿನಗಳ ಹಿಂದಷ್ಟೇ 4 ಟಗರು, ಮೇಕೆಗಳನ್ನು ಕಳವು ಮಾಡಲಾಗಿದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಶುಪಾಲನಾ ಇಲಾಖೆ ಉಪನಿರ್ದೇಶಕ ಬಿ.ಕೆ.ರಮೇಶ್ ಅವರು ಪಶು ಚಿಕಿತ್ಸಾಲಯ ವ್ಯಾಪ್ತಿಯಲ್ಲಿ ಜಾನುವಾರುಗಳ ಕಳುವಾದರೆ ತಾಲೂಕು ಸಹಾಯಕ ನಿರ್ದೇಶಕರಿಂದಲೇ ಎಫ್‌ಐಆರ್ ದಾಖಲಿಸಲು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೇಮಕವಾಗಿರುವ ಪಶು ಸಖಿಯರಿಗೆ ನಿರ್ದೇಶನ ನೀಡುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾಕ್ಷಿ ಕೇಳುವ ಪೊಲೀಸರು:
ಜಾನುವಾರು ಕಳವು ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರೆ ಸಾಕ್ಷಿ ಇಲ್ಲದೆ ಪ್ರಕರಣ ದಾಖಲಿಸುವುದಿಲ್ಲವೆಂದು ಪೊಲೀಸರು ಹೇಳುತ್ತಾರೆ. ಸಿಸಿ ದೃಶ್ಯಾವಳಿಯನ್ನು ಸಾಬೀತುಪಡಿಸಿದ ನಂತರವೇ ಪ್ರಕರಣ ದಾಖಲಿಸುವ ಪ್ರಕ್ರಿಯೆ ಇದೆ. ಎಲ್ಲ ಪ್ರಕರಣಗಳಲ್ಲೂ ಸಿಸಿ ಕ್ಯಾಮರಾ ದೃಶ್ಯಾವಳಿ ಇರುವುದಿಲ್ಲ. ಆದ್ದರಿಂದ ಸಮಸ್ಯೆಗೆ ಬೇರೆ ಮಾರ್ಗ ಕಂಡುಕೊಳ್ಳಬೇಕೆಂಬ ಆಗ್ರಹ ಕೇಳಿಬಂದಿತ್ತು.
ವಿಮೆ, ಕಿವಿಯೊಲೆ ಹಾಕಿಸಲು ಸೂಚನೆ:
ಜಾನುವಾರುಗಳಿಗೆ ಕಿವಿಯೊಲೆ ಹಾಗೂ ವಿಮೆ ಮಾಡಿಸುವಂತೆ ಅಧಿಕಾರಿಗಳು ರೈತರಿಗೆ ಸೂಚನೆ ನೀಡಿದ್ದಾರೆ. ಪಶು ಸಂಗೋಪನಾ ಇಲಾಖೆಯಿಂದ ನೀಡಲಾಗುವ ಕಿವಿಯೊಲೆಯಿಂದ ಹಸು ಎಲ್ಲೇ ಇದ್ದರೂ ಪತ್ತೆ ಮಾಡಬಹುದು. ಅದರಲ್ಲಿ 12 ಡಿಜಿಟ್ ಸಂಖ್ಯೆ, ಬಾರ್ ಕೋಡ್ ಇರುವುದರಿಂದ ರಾಸು ಎಲ್ಲೇ ಇದ್ದರೂ ಪತ್ತೆಯಾಗುತ್ತದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಓಲೆ ಹಾಕಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜತೆಗೆ ವಿಮೆ ಇದ್ದರೂ ಅನುಕೂಲವಾಗುತ್ತದೆ. ಹಸು ಕಳುವಾದರೆ ವಿಮೆ ಮೊತ್ತ ಪಾವತಿಯಾಗುವುದಿಲ್ಲ. ಒಂದು ವೇಳೆ ಅನಾರೋಗ್ಯ ಅಥವಾ ಮತ್ತಿತರ ಕಾರಣಗಳಿಂದ ಮೃತಪಟ್ಟರೆ 15 ಸಾವಿರ ರೂ. ವರೆಗೆ ಪರಿಹಾರ ದೊರೆಯುತ್ತದೆ. ಕುರಿ, ಮೇಕೆಗಳಿಗೆ 7 ಸಾವಿರ ರೂ. ಹಾಗೂ ಹುಟ್ಟಿನಿಂದ 6 ತಿಂಗಳ ಒಳಗಿನ ಪ್ರಾಣಿಗಳಿಗೆ 5 ಸಾವಿರ ರೂ.ತನಕ ಪರಿಹಾರ ದೊರೆಯಲಿದೆ. ರಾಸುಗಳಿಗೆ ವಿಮೆ ಹಾಗೂ ಕಿವಿಯೊಲೆ ಎರಡೂ ಇದ್ದರೆ ಅದರ ಮಾರುಕಟ್ಟೆ ಮೌಲ್ಯ ಎಷ್ಟಿರುತ್ತದೋ ಅಷ್ಟು ಹಣವನ್ನು ಸರ್ಕಾರದಿಂದ ಕೊಡಿಸುವ ಅವಕಾಶವಿದೆ.
ಮಝಲ್ ಮ್ಯಾಪಿಂಗ್ ಅನುಷ್ಠಾನ:
ರಾಸುಗಳ ನಿಖರ ಪತ್ತೆ ಹಚ್ಚುವ ಉದ್ದೇಶದಿಂದ ಪ್ರಸ್ತುತ ಕಿವಿಯೊಲೆ ಹಾಕಲಾಗುತ್ತಿದೆಯಾದರೂ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುವವರು ಅದನ್ನು ಕಿತ್ತು ಹಾಕುವ, ಬಹಳ ದಿನಗಳಾದ ಬಳಿಕ ಅದೇ ಬಿದ್ದು ಹೋಗುವ ಸಾಧ್ಯತೆಯಿದೆ. ಆದ್ದರಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ (ಎನ್‌ಎಲ್‌ಎಂ) ಮಝಲ್ ಮ್ಯಾಪಿಂಗ್‌ಗೆ ಮುಂದಾಗಿದೆ. ಅಂದರೆ ಜಾನುವಾರುಗಳ ಮುಖದ ಭಾಗವನ್ನು ಸ್ಕಾೃನ್ ಮಾಡಿ ದತ್ತಾಂಶವನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಕಿವಿಯೊಲೆಗಿಂತ ಈ ಪ್ರಕ್ರಿಯೆ ಪರಿಣಾಮಕಾರಿ ಆಗಲಿದೆ. ಪ್ರಾಯೋಗಿಕವಾಗಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಿದ್ದು ಮುಂದಿನ ವರ್ಷದಿಂದ ಹಾಸನದಲ್ಲೂ ಜಾರಿಯಾಗಲಿದೆ.
ಹಾಸನದಲ್ಲಿ ಜಾನುವಾರು ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಗ್ರಾಮೀಣ ಭಾಗದಲ್ಲಿ ಪಶು ಚಿಕಿತ್ಸಾ ಕೇಂದ್ರಗಳ ಮೂಲಕ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಎಮ್ಮೆ, ಹಸು ಸೇರಿ ಯಾವುದೇ ಪ್ರಾಣಿ ಕಳುವಾದರೂ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ವಿಳಂಬ ಮಾಡದೆ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡುತ್ತೇನೆ.
ಬಿ.ಕೆ.ರಮೇಶ್
ಪಶುಪಾಲನಾ ಇಲಾಖೆ ಉಪನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net