ಗ್ರಾಮದ ಕೆ.ಪಿ.ಶಿವಕುಮಾರ್ ಮಾತನಾಡಿ, ಚಿಗಳ್ಳಿ ಗ್ರಾಮದ ಸರ್ವೆ ನಂಬರ್ 38 ಹಾಗೂ 206ರಲ್ಲಿ ನಮ್ಮ ಗ್ರಾಮದ ರೈತರು ಅನೇಕ ವರ್ಷಗಳಿಂದ ನಿರಂತರವಾಗಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇತ್ತೀಚೆಗೆ ಭೂಮಿಯ ಕೆಳಭಾಗದಲ್ಲಿ ಕಲ್ಲು ಇರುವುದನ್ನು ನೆಪವಾಗಿಸಿಕೊಂಡು, ಹಣಬಲ ಹಾಗೂ ರಾಜಕೀಯ ಪ್ರಭಾವ ಹೊಂದಿರುವ ಕೆಲವರು ಈ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ನಡೆಸಲು ಮುಂದಾಗಿದ್ದಾರೆ. ಈ ಕುರಿತು ನಾವು ತಾಲೂಕು ಕಚೇರಿಗಳನ್ನು ಸಂಪರ್ಕಿಸಿದಾಗ, ಈ ಜಮೀನು ಎಚ್.ಆರ್.ಪಿ ರಿಸರ್ವ್ ಲ್ಯಾಂಡ್ ಆಗಿರುವುದರಿಂದ ರೈತರಿಗೆ ಮಂಜೂರು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಉಪವಿಭಾಗಾಧಿಕಾರಿಗಳು, ತಾಲೂಕು ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಲವು ವರ್ಷದಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನನ್ನು ಕಲ್ಲು ಗಣಿಗಾರಿಕೆ ಉದ್ದೇಶಕ್ಕಾಗಿ ಮಂಜೂರು ಮಾಡುವ ಸಂಬಂಧ ಜ.15ರಂದು ಜಾಗದ ಮಹಾಜರ್ ನಡೆಸಿದ್ದಾರೆ ಎಂದರು.