ರಸ್ತೆಬದಿಯ ಮರಕ್ಕೆ ಬಸ್ ಡಿಕ್ಕಿ

ಅರಸೀಕೆರೆ ತಾಲೂಕಿನ ಬೋರನಕೊಪ್ಪಲು ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿರುವುದು.
ಅರಸೀಕೆರೆ ತಾಲೂಕಿನ ಬೋರನಕೊಪ್ಪಲು ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರಿಗೆ ಗಂಭೀರ ಗಾಯ
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬೋರನಕೊಪ್ಪಲು ಬಳಿ ಶುಕ್ರವಾರ ಚಲಿಸುತ್ತಿದ್ದ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅರಸೀಕೆರೆ ಹಾಗೂ ಹಾಸನಕ್ಕೆ ಕಳಿಸಿಕೊಡಲಾಗಿದೆ. ದಾವಣಗೆರೆಯಿಂದ ಶಿವಮೊಗ್ಗ, ಅರಸೀಕೆರೆ, ಹಾಸನ ಮಾರ್ಗವಾಗಿ ಮಡಿಕೇರಿಗೆ ಹೋಗುವ ಬಸ್ ಅರಸೀಕೆರೆಯನ್ನು ಬೆಳಗ್ಗೆ 10.30ಕ್ಕೆ ಬಿಟ್ಟು ಗೀಜಿಹಳ್ಳಿಯಿಂದ ಬೋರನಕೊಪ್ಪಲು ಹೋಗುವ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ. ರಸ್ತೆಯಲ್ಲಿನ ಅಪಾಯಕಾರಿ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ನೇರವಾಗಿ ರಸ್ತೆಬದಿಯ ಬೃಹತ್ ಮರಕ್ಕೆ ಅಪ್ಪಳಿಸಿದೆ.
ಘಟನೆಯಲ್ಲಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಸ್ಥಳೀಯರು ಹೊರತಂದು ತಕ್ಷಣ ಆಸ್ಪತ್ರೆಗೆ ರವಾನಿಸಿದರು. ನಾಲ್ವರು ಪ್ರಯಾಣಿಕರಿಗೆ ತೀವ್ರ ಗಾಯಗೊಂಡಿದ್ದರೆ, ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಪೆಟ್ಟು ಬಿದ್ದಿದೆ.
ಅಪಘಾತ ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಎಲ್ಲ ವೈದ್ಯಾಧಿಕಾರಿಗಳನ್ನು ಕರೆಸಿ ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ಒದಗಿಸುವಂತೆ ಸೂಚಿಸಿದರು. ನಗರಸಭಾ ಅಧ್ಯಕ್ಷ ಸಮಿವುಲ್ಲಾ, ಡಿವೈಎಸ್ಪಿ ಗೋಪಿ, ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್, ಎಸ್‌ಐ ಅರುಣ್‌ಕುಮಾರ್, ಪೊಲೀಸ್ ಸಿಬ್ಬಂದಿ ಗಾಯಾಳುಗಳಿಗೆ ನೆರವಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net