ಇಂಡಿ ಕೂಟದ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ

ನಾರಿಶಕ್ತಿ ವಂದನಾ ಅಧಿನಿಯಮ ಜಾರಿಗೆ ಬೆಂಬಲ ನೀಡದ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟದ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಾರಾಯಣಗೌಡ, ನೇತ್ರಾವತಿ ಮಂಜುನಾಥ್, ವಿಜಯಲಕ್ಷ್ಮೀ ಅಂಜನಪ್ಪ, ಬಿ.ವೇದಾವತಿ, ರಮೇಶ್ ಇತರರಿದ್ದರು.
ನಾರಿಶಕ್ತಿ ವಂದನಾ ಅಧಿನಿಯಮ ಜಾರಿಗೆ ಬೆಂಬಲ ನೀಡದ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟದ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಾರಾಯಣಗೌಡ, ನೇತ್ರಾವತಿ ಮಂಜುನಾಥ್, ವಿಜಯಲಕ್ಷ್ಮೀ ಅಂಜನಪ್ಪ, ಬಿ.ವೇದಾವತಿ, ರಮೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿ ಕೂಟದ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ
  • ಖಂಡನಾ ನಿರ್ಣಯ ಸಭೆ ನಡೆಸಿ ಆಕ್ರೋಶ
ಹಾಸನ: ನಾರಿಶಕ್ತಿ ವಂದನಾ ಅಧಿನಿಯಮ-2026 ಜಾರಿಗೆ ಬೆಂಬಲ ನೀಡದ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟದ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಖಂಡನಾ ನಿರ್ಣಯ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ನಾರಾಯಣಗೌಡ, ದೇಶದ ಮಹಿಳೆಯರು ಬಹುಕಾಲದಿಂದ ನಿರೀಕ್ಷಿಸಿದ್ದ ಮಹಿಳಾ ಮೀಸಲಾತಿ ಜಾರಿಗೆ ತರುವ ಮಹತ್ವದ ಅಧಿನಿಯಮ ಪಾಸಾಗಲು ಬಿಡದ ಇಂಡಿ ಕೂಟವು ಮಹಿಳಾ ಹಕ್ಕುಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.
ದೇಶದ ಒಟ್ಟು 144 ಕೋಟಿ ಜನಸಂಖ್ಯೆಯಲ್ಲಿ ಮಹಿಳೆಯರು ಶೇ.49ರಷ್ಟು ಇದ್ದರೂ ಲೋಕಸಭೆ, ವಿಧಾನಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಕೇವಲ ಶೇ.14-15 ಮಾತ್ರ ಪ್ರಾತಿನಿಧಿತ್ವ ಹೊಂದಿರುವುದು ಅನ್ಯಾಯದ ಸಂಗತಿ ಎಂದರು. ಹಲವು ದಶಕಗಳಿಂದ ಮಹಿಳಾ ಮೀಸಲಾತಿಗಾಗಿ ನಡೆದ ಹೋರಾಟಗಳಿಗೆ ಈ ಅಧಿನಿಯಮ ಸ್ಪಂದನೆ ಆಗಬೇಕಿತ್ತು ಎಂದು ಹೇಳಿದರು.
ರಾಜಕೀಯ ವಿರೋಧದ ಹೆಸರಿನಲ್ಲಿ ಕಾಂಗ್ರೆಸ್ ಮಹಿಳೆಯರ ಹಕ್ಕುಗಳನ್ನು ದಮನ ಮಾಡಿದೆ ಎಂದು ಟೀಕಿಸಿದರಲ್ಲದೆ, ಇಂತಹ ನಡೆಗಳನ್ನು ಜನತೆ ತಿರಸ್ಕರಿಸುವುದು ನಿಶ್ಚಿತ ಎಂದು ಎಚ್ಚರಿಸಿದರು.
ಬಿಜೆಪಿ ಈ ವಿಷಯದಲ್ಲಿ ಹಿಂಜರಿಯದೆ ಹೋರಾಟ ಮುಂದುವರಿಸಿ ಮಹಿಳಾ ಮೀಸಲಾತಿ ಜಾರಿಗೆ ತರುವವರೆಗೆ ನಿರಂತರ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸಬಲೀಕರಣಕ್ಕೆ ಮಹತ್ವ ನೀಡಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿರುವುದು ಹಾಗೂ ರಕ್ಷಣಾ, ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳಲ್ಲಿ ಮಹಿಳೆಯರನ್ನು ನೇಮಿಸಿರುವುದು ಇದಕ್ಕೆ ಸಾಕ್ಷಿ ಎಂದರು. ಸೇನೆ, ನೌಕಾದಳ ಮತ್ತು ವಾಯು ಪಡೆಯಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಅವಕಾಶ ಲಭಿಸುತ್ತಿದ್ದು, ಶೀಘ್ರದಲ್ಲೇ ಶೇ.33 ಮೀಸಲಾತಿ ಜಾರಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಸದಸ್ಯೆ ವಿಜಯಲಕ್ಷ್ಮೀ ಅಂಜನಪ್ಪ, ಮಾಧ್ಯಮ ಪ್ರಮುಖ್ ಬಿ.ವೇದಾವತಿ, ಜಿಲ್ಲಾ ಉಪಾಧ್ಯಕ್ಷ ರಮೇಶ್, ಒಬಿಸಿ ಮೋರ್ಚಾ ಮುಖಂಡ ಜಯಣ್ಣ ಸೇರಿದಂತೆ ಜಿಲ್ಲಾ ಘಟಕ, ರೈತ ಮೋರ್ಚಾ, ಯುವ ಮೋರ್ಚಾ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯ ಅಂತ್ಯದಲ್ಲಿ ಇಂಡಿ ಕೂಟದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಿ, ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net