ಬರ, ಬಿತ್ತನೆ ಬೀಜ, ರಸಗೊಬ್ಬರದ ವಿಷಯದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ವಿಷಯದ ಕುರಿತು ಚರ್ಚಿಸಲು ಹಾಸನ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ತೆರಳಿದಾಗ ನಿರ್ಲಕ್ಷೃ ಧೋರಣೆ ತೋರಲಾಯಿತು ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದಿಂದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಡಾ.ಬಿ.ಸಿ.ನವೀನ್ ಕುಮಾರ್, ಅಮಿತ್ ಶೆಟ್ಟಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣಗೌಡ, ನಾಗೇಶ್ ಹಿರಿಬಿಳತಿ, ಗಿರೀಶ ನಂಬಿಹಳ್ಳಿ, ವಿದ್ಯಾಪ್ರಸಾದ್, ಭಾಸ್ಕರ ಚಾರ್, ಮನುಗೌಡ ಇತರರು ಇದ್ದರು.
ಹಾಸನ: ಬರ, ಬಿತ್ತನೆ ಬೀಜ, ರಸಗೊಬ್ಬರದ ವಿಷಯದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ವಿಷಯದ ಕುರಿತು ಚರ್ಚಿಸಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ತೆರಳಿದಾಗ ನಿರ್ಲಕ್ಷೃ ಧೋರಣೆ ತೋರಲಾಯಿತು ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದಿಂದ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಅನಿಶ್ಚಿತತೆ ಹಾಗೂ ಅಂತರ್ಜಲ ಮಟ್ಟದ ತೀವ್ರ ಕುಸಿತದ ಹಾಗೂ ಬರಬರುವ ಸಾಧ್ಯತೆಗಳಿವೆ ಬಗ್ಗೆ ವರದಿಗಳು ಕೃಷಿ ವಲಯದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿವೆ.
ಹಾಸನ ಜಿಲ್ಲೆಯ ರೈತರು ಮುಂಬರುವ ದಿನಗಳಲ್ಲಿ ಎದುರಿಸಬಹುದಾದ ಸಮಸ್ಯೆಗಳು ಗಂಭೀರವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಚರ್ಚಿಸಲು ತೆರಳಿದರೆ ನಿರ್ಲಕ್ಷೃ ಹಾಗೂ ಉಡಾಫೆಯಾಗಿ ವರ್ತಿಸಿದ್ದಾರೆ.
ಇಂದು ಕಾಂಗ್ರೆಸ್ ಅಧಿಕಾರದಲ್ಲಿ ಇರಬಹುದು. ಮುಂದೆ ಆಡಳಿತ ಇದೇ ರೀತಿ ಇರುವುದಿಲ್ಲ ಎಂದರು. ಹಾಸನ ಕೃಷಿ ಇಲಾಖೆ ಸಾರ್ವಜನಿಕ ಕಚೇರಿಯೋ, ಇಲ್ಲ ಕಾರ್ಪೋರೇಟ್ ಕಚೇರಿಯೊ ಎಂದು ಅನುಮಾನ ಬರುವ ರೀತಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಮುಂಗಾರು ಮಳೆ ಕೊರತೆ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಭತ್ತ, ಜೋಳ, ರಾಗಿ ಹಾಗೂ ದ್ವಿದಳ ಧಾನ್ಯಗಳ ಇಳುವರಿ ತೀವ್ರವಾಗಿ ಕುಸಿಯುವ ಭೀತಿ ಎದುರಾಗಿದೆ. ಇದರಿಂದ ರೈತರ ಆದಾಯ ಕುಸಿತ, ಸಾಲಭಾರ ಹೆಚ್ಚಳ ಹಾಗೂ ಜೀವನಮಟ್ಟದ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಮುನ್ನೆಚ್ಚರಿಕೆಯಿಂದ ಎದುರಿಸಲು ಸರ್ಕಾರ ತಕ್ಷಣವೇ ಬರ ನಿರ್ವಹಣಾ ಸಮಿತಿಯನ್ನು ಸಕ್ರಿಯಗೊಳಿಸಿ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಮಳೆಯ ಅನಿಶ್ಚಿತತೆಯನ್ನು ದುರುಪಯೋಗಪಡಿಸಿಕೊಂಡು ಕಾಳಸಂತೆಕೋರರು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೃತಕ ಅಭಾವವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಗಾವಹಿಸಿ, ರೈತರಿಗೆ ಅವಶ್ಯಕ ವಸ್ತುಗಳು ಸಮರ್ಪಕವಾಗಿ ಮತ್ತು ನಿಗದಿತ ದರದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ದಾಸ್ತಾನು ವಿವರಗಳನ್ನು ಪಾರದರ್ಶಕವಾಗಿ ಪ್ರಕಟಿಸಿ, ಅನಧಿಕೃತ ಸಂಗ್ರಹಣೆ ಹಾಗೂ ಕಾಳಸಂತೆ ಚಟುವಟಿಕೆಗಳನ್ನು ತಡೆಯುವುದು ಅತ್ಯಗತ್ಯವಾಗಿದೆ ಎಂದರು. ಜಿಲ್ಲೆಯಲ್ಲಿ ಪಶುಸಂಗೋಪನೆಗೂ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ. ಮೇವು ಕೊರತೆಯಿಂದ ರೈತರು ತಮ್ಮ ಜಾನುವಾರುಗಳನ್ನು ಕಾಪಾಡಿಕೊಳ್ಳಲು ಕಷ್ಟಪಡುವ ಪರಿಸ್ಥಿತಿ ಉಂಟಾಗಬಹುದು. ಇದರಿಂದ ಅನಿವಾರ್ಯವಾಗಿ ಜಾನುವಾರುಗಳನ್ನು ಖಾಸಗಿ ಮಾರುಕಟ್ಟೆಗೆ ಮಾರಾಟ ಮಾಡುವ ದುಸ್ಥಿತಿ ಎದುರಾಗುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ತಾಲ್ಲೂಕು ಮಟ್ಟದಲ್ಲಿ ಮೇವು ಬ್ಯಾಂಕುಗಳನ್ನು ಸ್ಥಾಪಿಸಿ, ರೈತರಿಗೆ ಸಮರ್ಪಕವಾಗಿ ಮೇವು ವಿತರಿಸುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ಬೆಳೆ ವಿಮೆ ಯೋಜನೆಗಳ ಬಗ್ಗೆ ಸಮರ್ಪಕ ಜಾಗೃತಿ ಮೂಡಿಸಿ, ವಿಮೆ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಬೇಕು. ಸಂಭವನೀಯ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುಂಚಿತವಾಗಿಯೇ ಪರಿಹಾರ ಪ್ಯಾಕೇಜ್ ರೂಪಿಸಿ, ಹಾನಿಗೊಳಗಾಗುವ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಕೆಲಸ ಮಾಡಬೇಕು. ರೈತರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟವಾದ ಕ್ರಿಯಾ ಯೋಜನೆ ಪ್ರಕಟಿಸುವುದು ಅಗತ್ಯವಾಗಿದೆ ಎಂದರು.
ಕೃಷಿ ಇಲಾಖೆಯ ನಿರ್ಲಕ್ಷೃ ಅಥವಾ ವಿಳಂಬದಿಂದ ರೈತರ ಸಮಸ್ಯೆಗಳು ಗಂಭೀರವಾಗಿದೆಯೆಂಬ ಆರೋಪಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ರಾಜ್ಯ ಬಿಜೆಪಿ ರೈತ ಮೋರ್ಚಾ ಹಾಗೂ ಹಾಸನ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ರೂಪಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣಗೌಡ, ನಾಗೇಶ್ ಹಿರಿಬಿಳತಿ, ಗಿರೀಶ ನಂಬಿಹಳ್ಳಿ, ವಿದ್ಯಾಪ್ರಸಾದ್, ಭಾಸ್ಕರ ಚಾರ್, ಮನುಗೌಡ ಇತರರು ಇದ್ದರು.