ಹೊರ ಗುತ್ತಿಗೆ ನೌಕರರಿಗೆ ಪಿಎಫ್ ನೀಡದೆ ವಂಚನೆ

ಪುರಸಭೆಯಲ್ಲಿ ಕರೆಯಲಾಗಿದ್ದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಪುರಸಭೆ ಅಧ್ಯಕ್ಷ  ಅಕ್ರಂ ಷರೀಫ್ ಮಾತನಾಡಿದರು. ತೀರ್ಥಕುಮಾರಿ ವೆಂಕಟೇಶ್ ,ಜಗದೀಶ್ ಮತ್ತಿತರರಿದ್ದರು.
ಪುರಸಭೆಯಲ್ಲಿ ಕರೆಯಲಾಗಿದ್ದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿದರು. ತೀರ್ಥಕುಮಾರಿ ವೆಂಕಟೇಶ್ ,ಜಗದೀಶ್ ಮತ್ತಿತರರಿದ್ದರು.
Published on
ಬೇಲೂರು: ನೀರು ಸರಬರಾಜು ಮಾಡುವ ಹೊರ ಗುತ್ತಿಗೆ ನೌಕರರ ಪಿಎಫ್ ಹಣವನ್ನು ಅರ್ಹರ ಖಾತೆಗೆ ಪಾವತಿಸದೆ ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.
ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಅಕ್ರಂ ಷರೀಫ್ ಅಧ್ಯಕ್ಷತೆಯಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿ.ಎ.ಜಮಾಲುದ್ದೀನ್, ಟೆಂಡರ್‌ದಾರನ ನಿರ್ಲಕ್ಷ್ಯದಿಂದಾಗಿ ನೀರು ಸರಬರಾಜು ವಿಭಾಗದ ನೌಕರರು ವೇತನ ಹಾಗೂ ಪಿಎಫ್ ಹಣಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರನ ವಿರುದ್ಧ ದೂರು ನೀಡಿ ಕ್ರಮಕೈಗೊಂಡು ನ್ಯಾಯ ಕೊಡಿಸಬೇಕು ಎಂದರು.
ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪುರಸಭೆಯ ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಮಸ್ಯೆ ಬಗ್ಗೆ ಈ ಹಿಂದೆ ಇದ್ದ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದ ಮೇರೆಗೆ ಕ್ರಮಕ್ಕೆ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ಉದಾಸೀನ ತೋರಿದ್ದಾರೆ ಎಂದರು.
ಪಟ್ಟಣದ ಎಲ್ಲ ಹೊಟೇಲ್, ತಿಂಡಿಗಾಡಿ, ರಸ್ತೆ ಬದಿ ಟೆಂಟ್, ಟಿಫಿನ್ ಸೆಂಟರ್‌ಗಳನ್ನು ತಕ್ಷಣವೇ ಅಧಿಕಾರಿಗಳು ಪರಿಶೀಲಿಸಬೇಕು. ಜತೆಗೆ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆಬದಿ ವ್ಯಾಪಾರ ನಿಯಂತ್ರಿಸಬೇಕೆಂದು ಸಲಹೆ ನೀಡಿದರು.
ಜಗದೀಶ್ ಮಾತನಾಡಿ, ಗೋವಾ ಪ್ರವಾಸ ಹೋದ ಬಗ್ಗೆ ಪ್ರವಾಸಕ್ಕೆ ಬಾರದವರು ವಿನಾ ಕಾರಣ ಮಾತನಾಡಿದ್ದಾರೆ. ಆದರೆ, ನಾವು ಗೋವಾಕ್ಕೆ ಹೋಗಿದ್ದು ಅಧ್ಯಯನಕ್ಕೆ ಹೊರತು, ಮೋಜು ಮಸ್ತಿಗಾಗಿ ಅಲ್ಲ. ಪ್ರವಾಸ 12 ತಿಂಗಳ ಹಿಂದೆಯೇ ನಿಗದಿಯಾಗಿತ್ತು, ಕಾಮಾಲೆ ಕಣ್ಣಿನವರಿಗೆ ನೋಡಿದ್ದೆಲ್ಲ ಹಳದಿ ಎನ್ನುವಂತಾಗಿದೆ ಎಂದು ಕುಟುಕಿದರು.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನ ರಸ್ತೆಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿ ಕೊಡುವಂತೆ ಹಾಗೂ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸುವಂತೆ ಪುಟ್ಟಸ್ವಾಮಿ, ಜಗದೀಶ್, ಶೈಲೇಶ್ ಸಲಹೆ ನೀಡಿದರು. ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಪುರಸಭೆ ನೀರು ಸರಬರಾಜು ನೌಕರರಿಗೆ ವೇತನ ಹಾಗೂ ಪಿಎಫ್ ಹಣ ಕೊಡಿಸಲು ನೀರು ಸರಬರಾಜಿನ ಹಳೇ ಟೆಂಡರ್‌ದಾರನಿಗೆ ಫೋನ್ ಮಾಡಿದರೂ ರಿಸೀವ್ ಮಾಡ್ತಿಲ್ಲ. ಶೀಘ್ರವೇ ವಕೀಲರೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಲಾಗುವುದು ಎಂದರು.
ಉಪಾಧ್ಯಕ್ಷೆ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಸದಸ್ಯರಾದ ರತ್ನ ಸತ್ಯನಾರಾಯಣ, ಅಶೋಕ್, ಮೀನಾಕಿ ್ಷವೆಂಕಟೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net