ಬೇಲೂರಿನಲ್ಲಿ ಆಯೋಜಿಸಿದ್ದ ರೋಟರಿ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಬಿ.ಬಿ.ಶಿವರಾಜ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
Published on:
Copied
Follow Us
ಬೇಲೂರು: ಪಟ್ಟಣ ಸಮೀಪದ ವಿಆರ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಬಿ.ಬಿ.ಶಿವರಾಜ್, ಕಾರ್ಯದರ್ಶಿಯಾಗಿ ರಾಘವೇಂದ್ರ ಅಧಿಕಾರ ಸ್ವೀಕರಿಸಿದರು.
ಹಾಸನದ ಹೊಯ್ಸಳ ರೋಟರಿ ಸಂಸ್ಥೆ ಚೇರ್ಮನ್ ಪ್ರೀತಿ ಮೋಹನ್ ಮಾತನಾಡಿ, ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮೇಲೆ ದೊಡ್ಡ ಜವಾಬ್ದಾರಿ ಇದೆ. ಭೂಮಿ ಮೇಲೆ ಜನ್ಮ ತಾಳಿದ ನಾವು ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಶೋಷಿತರು, ನಿರ್ಗತಿಕರು, ದೀನರು, ಅಂಗವಿಕಲರ ಸೇವೆ ಮಾಡುವ ಮೂಲಕ ಆತ್ಮವಿಶ್ವಾಸ ಮೂಡಿಸಬೇಕು ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋಮುಕ್ತ ಅಭಿಯಾನದ ಯಶಸ್ಸಿಗೆ ರೋಟರಿ ಸಂಸ್ಥೆ ಪಾತ್ರ ಮರೆಯುವಂತಿಲ್ಲ. ಇಲ್ಲಿ ಸಂಘ ಮತ್ತು ಸಂಘಟನೆ, ಅಧ್ಯಕ್ಷ ಪದವಿಗಿಂತ ರೋಟರಿ ಸಂಸ್ಥೆ ಅಧ್ಯಕ್ಷ ಸ್ಥಾನ ವಿಶೇಷವಾದದ್ದು. ಇಲ್ಲಿನ ಜವಾಬ್ದಾರಿ ಸುಲಭವಲ್ಲ. ನಾಯಕತ್ವದ ಜತೆಗೆ ಇತರ ಸದಸ್ಯರ ನಾಯಕತ್ವಕ್ಕೆ ಮುನ್ನುಡಿ ಬರೆಯಬೇಕು. ನೂತನ ಅಧ್ಯಕ್ಷ ಬಿ.ಬಿ.ಶಿವರಾಜ್ ಹತ್ತಾರು ಸೇವಾ ಯೋಜನೆ ರೂಪಿಸಿದ್ದು, ಅವುಗಳಿಗೆ ಸರ್ವ ಸದಸ್ಯರ ಸಹಕಾರ ಮುಖ್ಯ. ಬೇಲೂರು ವಿಶ್ವ ಪಾರಂಪರಿಕ ತಾಣವಾದ್ದರಿಂದ ಇಲ್ಲಿನ ರೋಟರಿ ಸಂಸ್ಥೆಯೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕಿದೆ. ಇದಕ್ಕಾಗಿ ನೂತನ ಪದಾಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದರು.
ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಬಿ.ಬಿ.ಶಿವರಾಜ್ ಮಾತನಾಡಿ, ರೋಟರಿ ಸಂಸ್ಥೆಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲದಿರುವ ಸಂದರ್ಭದಲ್ಲೂ ಸಂಸ್ಥೆಯ ಸದಸ್ಯರು ದುಡಿದ ಒಂದು ಭಾಗವನ್ನು ಸಮಾಜಕ್ಕೆ ನೀಡುವ ದೇಣಿಗೆಯಿಂದ ರೋಟರಿ ಸಂಸ್ಥೆಯಲ್ಲಿ ವಿವಿಧ ಸೇವಾ ಕಾರ್ಯ ನಡೆಸಲಾಗುತ್ತಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ರಂಗನಾಥ ಮಾತನಾಡಿ, ಗಂಗಯ್ಯ ಹೆಗ್ಗಡೆ ಅವರು ಕೊಡುಗೆಯಾಗಿ ನೀಡಿದ ನಿವೇಶನದಲ್ಲಿ ಸಮುದಾಯದ ಭವನ ಕಾಮಗಾರಿ ಪ್ರಗತಿಯಲ್ಲಿದ್ದು, ಇದನ್ನು ಪೂರೈಸಲು ಎಲ್ಲರೂ ಸಹಕಾರ ನೀಡಲಿದ್ದೇವೆ ಎಂದರು.
ರೋಟರಿ ಸಂಸ್ಥೆ ಸಹಾಯಕ ಪ್ರಾಂತಪಾಲ ಡಾ.ಗಣೇಶ, ರೋಟರಿ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ, ಮಾಜಿ ಕಾರ್ಯದರ್ಶಿ ರಮೇಶ್, ಜೋನಲ್ ಲೆಫ್ಟಿನೆಂಟ್ ವೀರೇಂದ್ರ ಕುಮಾರ್, ಪದಾಧಿಕಾರಿಗಳಾದ ಲೋಕೇಶ್, ಶಂಭುಗೌಡ ಇತರರಿದ್ದರು.