ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆ ಅವಶ್ಯ

ಕರ್ನಾಟಕ ಸಾಧಕರ ಹೆಸರು ಉಳಿವಿಗಾಗಿ ಸಂಘಟನಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಟಿಸುತ್ತಿರುವ ಗಣ್ಯರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿರುವುದು. ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ರೈತ ಸಂಘದ ತಾಲೂಕು ಅಧ್ಯಕ್ಷ ಬೋಗ ಮಲ್ಲೇಶ್, ಕರ್ನಾಟಕ ಸಾಧಕರ ಹೆಸರು ಉಳಿವಿಗಾಗಿ ಸಂಘಟನಾ ಸಮಿತಿ ಅಧ್ಯಕ್ಷ ಮಹೇಶಗೌಡ, ಗೌರವಾಧ್ಯಕ್ಷ ಯೋಗೀಶ್‌ಗೌಡ, ಉಪಾಧ್ಯಕ್ಷ ಸಿದ್ದೇಗೌಡ, ಪ್ರಧಾನ ಕಾರ್ಯದರ್ಶಿ ಧರ್ಮಪ್ರಕೃತಿ, ಚಂದ್ರು, ಯೋಗೇಶ್, ಅದ್ದೂರಿ ಕುಮಾರ್ ಇತರರಿದ್ದರು.

Published on

ಬೇಲೂರು:

ಬೇಲೂರಿನಲ್ಲಿ ಸಾಕಷ್ಟು ಜನರು ಸೇವಾ ಕಾರ್ಯದ ಮೂಲಕ ಇತಿಹಾಸ ನಿರ್ಮಿಸಿ ಇತರರಿಗೂ ಮಾದರಿಯಾಗಿದ್ದು, ಅಂತವರ ಹೆಸರನ್ನು ಗುರುತಿಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಸಾಧಕರ ಹೆಸರು ಉಳಿವಿಗಾಗಿ ಸಂಘಟನಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ದುಡಿಮೆಯ ಒಂದು ಭಾಗವನ್ನು ಜನರ ಸೇವೆಗೆ ಮುಡಿಪಾಗಿಟ್ಟು ಬಡವರ ಅನುಕೂಲಕ್ಕಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಿಸಿದ್ದಲ್ಲದೆ, ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬೇಲೂರಿನಲ್ಲೆ ದೊಡ್ಡ ದಾನಿಗಳೆಂದು ಹೆಸರು ಪಡೆದ ವೈ.ಡಿ.ನಂಜೇಗೌಡರ ಸೇವೆ ಮರೆಯುವಂತಿಲ್ಲ. ಸಂಘಟನಾ ಸಮಿತಿಯವರು ಸರ್ಕಾರಿ ಆಸ್ಪತ್ರೆ ಮುಂಭಾಗ ವೈ.ಡಿ.ನಂಜೇಗೌಡರ ಪ್ರತಿಮೆ ನಿರ್ಮಿಸಲು ಮನವಿ ಮಾಡಿದ್ದು, ಇದಕ್ಕೆ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಂಡು ಅವರ ಕುಟುಂಬಕ್ಕೂ ಗೌರವ ಸಲ್ಲಿಸಲಾಗುವುದು. ಬೇಲೂರಿನಲ್ಲಿ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಬೇಕು ಎಂದರು.

ಸಮಿತಿ ಜಿಲ್ಲಾಧ್ಯಕ್ಷ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರನ್ನು ಗುರುತಿಸಲು ಕರ್ನಾಟಕ ಸಾಧಕರ ಹೆಸರು ಉಳಿವಿಗಾಗಿ ಸಂಘಟನಾ ಸಮಿತಿ ರಚಿಸಲಾಗಿದೆ. ಪ್ರಮುಖವಾಗಿ ಶಾಸಕರಾಗಿ ಬಸ್ಸುಗಳಲ್ಲಿ ಓಡಾಡಿ ಸರಳ ಜೀವನದೊಂದಿಗೆ ಸಾರ್ವಜನಿಕರ ಸೇವೆಗೆ ಮುಂದಾಗಿದ್ದ ಬೋರಣ್ಣಗೌಡರು ಹಾಗೂ ವೈ.ಡಿ.ನಂಜೇಗೌಡರು ದೊಡ್ಡ ದಾನಿಗಳಾಗಿ ಅತ್ಯುತ್ತಮ ಸೇವೆ ಸಲ್ಲಿಸಿದವರು. ಬೇಲೂರು ಹಳೇಬೀಡು ಶಿಲ್ಪಕಲೆಗೆ ಹೆಸರಾಗಿದ್ದು, ಬೇಲೂರು-ಹಳೇಬೀಡು ನಡುವೆ ಶಿಲ್ಪಕಲಾ ಕಾಲೇಜು ನಿರ್ಮಿಸುವಂತೆ ಸರ್ಕಾರದ ಮೇಲೆ ನಮ್ಮ ಸಂಘಟನೆ, ಸಾರ್ವಜನಿಕರು, ಸಂಘ ಸಂಸ್ಥೆಗಳು ಒತ್ತಡ ಹಾಕಿದರೆ ಶಿಲ್ಪಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ದಿ.ಮಾಜಿ ಶಾಸಕ ಬೋರಣ್ಣಗೌಡ ಹಾಗೂ ವೈ.ಡಿ.ನಂಜೇಗೌಡ ಕುಟುಂಬ ಸದಸ್ಯರು ಮತ್ತು ಐಆರ್‌ಎಸ್ ಜಂಟಿ ನಿರ್ದೆಶಕ ಶ್ರೇಯಸ್, ನಂಜೇಗೌಡರ ಪುತ್ರ ವೈ.ಎನ್.ಮಲ್ಲೇಶಗೌಡ, ಸಾಹಿತಿ ಬೇಲೂರು ರಘು ನಂದನ್, ಮಾ.ಶಿವಮೂರ್ತಿ ಮತ್ತು ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net