ಕಾರ್ಮಿಕರ ಖಾತೆಗಳಿಗೆ ಪಿಎಫ್ ಹಣ ಜಮೆ ಮಾಡಿ

ಪುರಸಭೆ ನೀರು ಸರಬರಾಜು ನೌಕರರಿಗೆ ಬಾಕಿ ವೇತನ ಹಾಗೂ ಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಕಚೇರಿ ಮುಂದೆ ಪ್ರತಿಭಟಿಸುತ್ತಿರುವ ಕೆ ಆರ್‌ಎಸ್ ಪಕ್ಷದ ಮುಖಂಡರು, ನೌಕರರು.
ಪುರಸಭೆ ನೀರು ಸರಬರಾಜು ನೌಕರರಿಗೆ ಬಾಕಿ ವೇತನ ಹಾಗೂ ಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಕಚೇರಿ ಮುಂದೆ ಪ್ರತಿಭಟಿಸುತ್ತಿರುವ ಕೆ ಆರ್‌ಎಸ್ ಪಕ್ಷದ ಮುಖಂಡರು, ನೌಕರರು.
Published on
ಬೇಲೂರು: ಪುರಸಭೆ ನೀರು ಸರಬರಾಜು ನೌಕರರಿಗೆ ಬಾಕಿ ವೇತನ ಪಾವತಿಸುವ ಜತೆಗೆ ಹಲವು ವರ್ಷಗಳ ಪಿಎಫ್ ಹಣವನ್ನು ಕಾರ್ಮಿಕರ ಖಾತೆಗಳಿಗೆ ಜಮೆ ಮಾಡುವಂತೆ ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಆದೇಶ್ ಆಗ್ರಹಿಸಿದರು.
ಪಟ್ಟಣದ ಪುರಸಭೆ ಕಚೇರಿ ಮುಂದೆ ಬುಧವಾರ ಕಾರ್ಮಿಕರೊಂದಿಗೆ ಪ್ರತಿಭಟಿಸಿ ಮಾತನಾಡಿದ ಅವರು, ಪಟ್ಟಣದ ಜನರಿಗೆ ಪ್ರತಿನಿತ್ಯ ನೀರು ಸರಬರಾಜು ಮಾಡುವ ಕೆಲಸಗಾರರು ಕರ್ತವ್ಯ ನಿರ್ವಹಿಸುತ್ತಿದ್ದರೂ ಕೆಲವು ತಿಂಗಳಿಂದ ಪಿಎಫ್ ಹಣ ಪಾವತಿಯಾಗಿಲ್ಲ. ನೌಕರರಿಗೆ ವೇತನ ನೀಡದೆ ಪುರಸಭೆ ಹಣದಲ್ಲಿ ಸದಸ್ಯರು ಪ್ರವಾಸ ಕೈಗೊಳ್ಳುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ನೀರು ಸರಬರಾಜು ನೌಕರರು ತಮ್ಮ ವೇತನವನ್ನೇ ನಂಬಿ ಜೀವನ ನಡೆಸುತ್ತಿದ್ದು, ವೇತನ ವಿಳಂಬದಿಂದ ಕುಟುಂಬಗಳ ನಿರ್ವಹಣೆ, ಮಕ್ಕಳ ಶಿಕ್ಷಣ, ದಿನ ನಿತ್ಯದ ಅಗತ್ಯ ವಸ್ತುಗಳ ಖರ್ಚು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಲು ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮುಂದಾಗಬೇಕು. ಜತೆಗೆ ಗುತ್ತಿಗೆದಾರರು ಪಿಎಫ್ ಹಣವನ್ನು ಹಲವು ವರ್ಷಗಳಿಂದ ಪಾವತಿಸಿಲ್ಲ ಎಂಬ ಆರೋಪವಿದ್ದು, ಅಧಿಕಾರಿಗಳು ಮಾಹಿತಿ ನೀಡಬೇಕು ಆಗ್ರಹಿಸಿದರು.
ನೌಕರರ ಪಿಎಫ್, ಇಎಸ್‌ಐ ಸೌಲಭ್ಯವನ್ನು ನಿಯಮಾನುಸಾರ ಒದಗಿಸಬೇಕು, ನೌಕರರ ಸಮಸ್ಯೆ ಬಗೆಹರಿಯುವವರೆಗೆ ಕೆಆರ್‌ಎಸ್ ಪಕ್ಷ ಬೆಂಬಲ ನೀಡಲಿದೆ. ನೌಕರರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪುರಸಭೆ ನೀರು ಸರಬರಾಜು ನೌಕರರ ಸಂಘದ ಮುಖಂಡ ಮಂಜುನಾಥ್ ಮಾತನಾಡಿ, ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಸರಿಯಾಗಿ ವೇತನ ದೊರೆಯುತ್ತಿಲ್ಲ. ಪಿಎಫ್ ಹಣ ಪಾವತಿಸದೆ ನೌಕರರಿಗೆ ಅನ್ಯಾಯ ಮಾಡಲಾಗಿದೆ. ಎರಡು ತಿಂಗಳ ಹಿಂದೆ ವೇತನ ಮತ್ತು ಪಿಎಫ್‌ಗೆ ಆಗ್ರಹಿಸಿ ಹೋರಾಟ ನಡೆಸಿದಾಗ ನಿಗದಿತ ದಿನಾಂಕದೊಳಗೆ ವೇತನ ಪಾವತಿಸುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ ಎಂದರು.
ನಮ್ಮ ಶ್ರಮಕ್ಕೆ ತಕ್ಕ ವೇತನ ಸಮಯಕ್ಕೆ ಸರಿಯಾಗಿ ನೀಡಿ, ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಬೇಕು. ನಮ್ಮ ಕುಟುಂಬಗಳನ್ನು ನೆಮ್ಮದಿಯಿಂದ ನಡೆಸಲು ಅವಕಾಶ ಮಾಡಿಕೊಡಬೇಕು, ಪುರಸಭೆ ವ್ಯಾಪ್ತಿಯಲ್ಲಿ ಗುತ್ತಿಗೆ ಹಾಗೂ ನೀರು ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಒಂದೇ ಗುತ್ತಿಗೆದಾರರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಬೇಕು. ಈ ಕುರಿತು ಕ್ಷೇತ್ರದ ಶಾಸಕರು ಗಮನ ಹರಿಸಿ, ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದರು.
ಪುರಸಭೆ ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಅಣ್ಣಯ್ಯ, ನಾಗರಾಜು, ಪ್ರೀತಮ್, ಲೋಕೇಶ್, ಸುನೀಲ್ ಉಮೇಶ್, ನಾಗ, ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net