ಗ್ಯಾಸ್ ಏಜೆನ್ಸಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ

ಬೇಲೂರು ಪಟ್ಟಣ ಸಮೀಪದ ಬಂಟೇನಹಳ್ಳಿಯಲ್ಲಿರುವ ಶ್ರೀಚನ್ನಕೇಶವಸ್ವಾಮಿ ಗ್ಯಾಸ್ ಏಜೆನ್ಸಿ ಮುಂದೆ ಸಿಲಿಂಡರ್‌ಗಾಗಿ ಸಾರ್ವಜನಿಕರು ಕಚೇರಿ ಬಾಗಿಲು ಎಳೆದು ಮುತ್ತಿಗೆ ಹಾಕಿರುವುದು. ಮತ್ತೆ ಕೆಲವರು ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್‌ಗಾಗಿ ಕಾಯುತ್ತಿರುವುದು.
ಬೇಲೂರು ಪಟ್ಟಣ ಸಮೀಪದ ಬಂಟೇನಹಳ್ಳಿಯಲ್ಲಿರುವ ಶ್ರೀಚನ್ನಕೇಶವಸ್ವಾಮಿ ಗ್ಯಾಸ್ ಏಜೆನ್ಸಿ ಮುಂದೆ ಸಿಲಿಂಡರ್‌ಗಾಗಿ ಸಾರ್ವಜನಿಕರು ಕಚೇರಿ ಬಾಗಿಲು ಎಳೆದು ಮುತ್ತಿಗೆ ಹಾಕಿರುವುದು. ಮತ್ತೆ ಕೆಲವರು ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್‌ಗಾಗಿ ಕಾಯುತ್ತಿರುವುದು.
Published on
ಬೇಲೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಸಮೀಪದ ಬಂಟೇನಹಳ್ಳಿಯ ಶ್ರೀಚನ್ನಕೇಶವ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಉಂಟಾದ ಅವ್ಯವಸ್ಥೆಯಿಂದ ಸಾರ್ವಜನಿಕರು ಗುರುವಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ಯಾಸ್ ಸಿಲಿಂಡರ್ ಪಡೆಯಲು ಕೆಲವರು ಮಧ್ಯರಾತ್ರಿಯಿಂದಲೇ ಏಜೆನ್ಸಿ ಕಚೇರಿ ಮುಂದೆ ಸಾರ್ವಜನಿಕರು ಜಮಾಯಿಸಿದರೆ, ಮತ್ತೆ ಕೆಲವರು ಬೆಳ್ಳಂ ಬೆಳಗ್ಗೆ ಆಗಮಿಸಿ ಕಾಯುತ್ತ ಕುಳಿತಿದ್ದರು. ಮತ್ತೆ ಕೆಲವರು ಐದು ದಿನಗಳಿಂದ ಟೋಕನ್ ಕೊಡ್ತೇವೆ ಅಂತ ಹೇಳ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ಎದ್ದು ಬಂದಿದ್ದೀವಿ, ಆದರೂ ನಮಗೆ ಟೋಕನ್ ಸಿಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲವೆಂದು ದೂರದ ಊರುಗಳಿಂದ ಬಂದಿದ್ದ ಮಹಿಳೆಯರು ಆರೋಪಿಸಿದ್ದಲ್ಲದೆ, ನಾವು ಕೂಲಿ ಮಾಡಿ ಜೀವನ ಮಾಡೋರು ಪ್ರತಿದಿನ ಇಲ್ಲಿಗೆ ಬಂದು ಕಾಯೋಕೆ ಆಗಲ್ಲ. ನಮಗೂ ಮಕ್ಕಳು, ಕುಟುಂಬ ಎಲ್ಲವೂ ಇದೆ. ಅಲ್ಲದೆ ಮೊದಲಿಗೆ ನಮಗೆ ಟೋಕನ್ ಕೊಟ್ಟಿದ್ದರು. ಆದರೆ 60ರ ವರೆಗೆ ಸಿಲಿಂಡರ್ ಕೊಟ್ಟವರು ಏಕಾಏಕಿ 101 ನಂಬರ್‌ನಿಂದ ಕೊಡುತಿದ್ದಾರೆ. ಹಾಗಾದರೆ ನಮ್ಮ ನಂಬರಿನ ಸಿಲಿಂಡರ್‌ಗಳು ಎಲ್ಲಿಗೆ ಹೋದವು ಎಂದು ಸಿಬ್ಬಂದಿ ವಿರುದ್ಧ ಅನುಮಾನ ವ್ಯಕ್ತಪಡಿಸಿದರು. ಮತ್ತೆ ಕೆಲವರು ನಾವು ಗ್ಯಾಸ್ ಬುಕ್ ಮಾಡಿ 15 ದಿನವಾದ್ದರಿಂದ ಓಟಿಪಿ ಬಂದಿದೆ. ಆದ್ರೂ ಸಿಲಿಂಡರ್ ಸಿಗ್ತಿಲ್ಲ ಎಂದರೆ, ಇನ್ನು ಕೆಲವರು ನಾವು ಬುಕ್ ಮಾಡಿ ನಾಲ್ಕೈದು ದಿನವಾಗಿದೆ, ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಮನೆಯಲ್ಲಿ ಅಡುಗೆ ಮಾಡಲು ಬೇರೆ ಯಾವುದೇ ಸೌಲಭ್ಯವಿಲ್ಲ ಎಂದು ಅಳಲು ತೋಡಿಕೊಂಡರು.
ಇದಕ್ಕೆಲ್ಲ ಪ್ರಮುಖವಾಗಿ ಗ್ಯಾಸ್ ವಿತರಣಾ ವ್ಯವಸ್ಥೆಯಲ್ಲಿ ವ್ಯವಸ್ಥಾಪಕರು ಸರಿಯಾದ ಕ್ರಮ ಕೈಗೊಳ್ಳದಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ. ಆದ್ದರಿಂದ ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ಜನರ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನ ವಡ್ಡರಹಳ್ಳಿ ಗ್ರಾಮದ ರತ್ನಮ್ಮ ಮಾತನಾಡಿ, ನಾವು ಬೆಳಗ್ಗೆ 5 ಗಂಟೆಯಿಂದ ಕಚೇರಿ ಮುಂದೆಯೇ ಇಲ್ಲೇ ಕಾಯುತ್ತ ಇದ್ದೀವಿ. ಸವಾಸಿಸಳ್ಳಿ, ವಡ್ಡರಹಳ್ಳಿ ಸೇರಿದಂತೆ ದೂರದ ಊರುಗಳಿಂದ ಬಂದು ಹೋಗ್ತಿದ್ದೀವಿ. ದಿನ ಬಂದು ನಿಲ್ಲೋದು ನಮ್ಮಿಂದ ಆಗ್ತಾ ಇಲ್ಲ. ಕನಿಷ್ಟ ಟೋಕನ್ ಆದ್ರೂ ಕೊಟ್ಟು ಇಂತ ದಿನ ಬನ್ನಿ ಎಂದರೆ ಅಂದು ಬರುತ್ತೇವೆ. ಅದನ್ನು ಬಿಟ್ಟು ಯಾವುದೇ ಮಾಹಿತಿ ನೀಡದೆ ಜನರನ್ನು ಕಾಯಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೋಂಪುರ ಗ್ರಾಮದ ಮಹೇಶ್ ಮಾತನಾಡಿ, ಇಂದು ಬೆಳಗ್ಗೆ 2 ಗಂಟೆಗೆ ಬಂದು ಇಲ್ಲೇ ಕಚೇರಿ ಮುಂದೆಯೇ ಮಲಗಿದ್ದೆ. ಗ್ಯಾಸ್ ಬುಕ್ ಮಾಡಿದ್ದರಿಂದ ನನಗೆ ಓಟಿಪಿ ಬಂದಿತ್ತು, ಕೆಳಿದರೂ ಸಿಲಿಂಡರ್ ಕೊಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಗ್ಯಾಸ್ ಇಲ್ಲ ಅಂದ್ರೆ ಮನೇಲಿ ಅಡುಗೆ ಮಾಡೋಕೆ ಆಗಲ್ಲ. ಮ್ಯಾನೇಜರ್ ಇನ್ನೂ ಬಂದಿಲ್ಲ. ಬಡವರಿಗೆ ಸಹಾಯ ಮಾಡ್ಬೇಕಾದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಸಿಲಿಂಡರ್ ಅಗತ್ಯವಿದ್ದರೂ ಪೂರೈಕೆ ಕಡಿಮೆ ಆಗುತ್ತಿದೆ. ವಿತರಣೆಗೆ ಪ್ರತಿದಿನ 1000 ಸಿಲಿಂಡರ್ ಅಗತ್ಯವಿದೆ. ಆದರೆ ಕೇವಲ 300 ಸಿಲಿಂಡರ್ ಮಾತ್ರ ಲಭ್ಯವಾಗುತ್ತಿವೆ. ಮೊದಲು ಗ್ರಾಮೀಣ ಪ್ರದೇಶಗಳಿಗೆ ಸಿಲಿಂಡರ್‌ಗಳನ್ನು ಕಳುಹಿಸಿ, ಉಳಿದ ಸಿಲಿಂಡರ್‌ಗಳನ್ನು ಪಟ್ಟಣದಲ್ಲಿ ವಿತರಿಸಲಾಗುತ್ತಿದೆ. ಇದಲ್ಲದೆ, ಗ್ರಾಹಕರಿಗೆ ಒಟಿಪಿ ಬಂದ ಬಳಿಕವೂ ಸುಮಾರು 15 ದಿನಗಳ ನಂತರವೇ ಸಿಲಿಂಡರ್ ವಿತರಿಸಲು ಸಾಧ್ಯವಾಗುತ್ತಿದೆ. ಹಿಂದೆ ಎರಡು ಲೋಡ್ ಬರುತ್ತಿತ್ತು. ಈಗ ಒಂದು ಲೋಡ್ ಬರುತ್ತಿರುವುದು ಸಮಸ್ಯೆಯಾಗಿದೆ. ಬುಕ್ಕಿಂಗ್ ಮಾಡಿದವರಿಗೆ ಸೀನಿಯಾರಿಟಿ ಮೇಲೆ ಸಿಲಿಂಡರ್ ನೀಡಲಾಗುತ್ತಿದೆ. ಪೂರೈಕೆ ಪ್ರಮಾಣ ಹೆಚ್ಚಾದರೆ ವಿತರಣೆ ವ್ಯವಸ್ಥೆ ಸುಧಾರಣೆಯಾಗಲಿದೆ. ಯಾರು ಕೂಡ ಹೆಚ್ಚುವರಿ ಸಿಲೆಂಡರ್ ಇಟ್ಟುಕೊಳ್ಳದೆ ಅಗತ್ಯವಿದ್ದಾಗ ಮಾತ್ರ ಬಳಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಲತಾ ಮಂಜೇಶ್ವರಿ. ಮಾಲೀಕರು, ಶ್ರೀಚನ್ನಕೇಶವಸ್ವಾಮಿ ಗ್ಯಾಸ್ ಏಜೆನ್ಸಿ, ಬೇಲೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net