ವರ್ಷ ಕಳೆದರೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿ

ಬೇಲೂರು ಪಟ್ಟಣದ ಬೇಲೂರು-ಸಕಲೇಶಪುರ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆಯಲ್ಲೆ ನೀರು ನಿಂತಿರುವುದನ್ನು ವೀಕ್ಷಿಸುತ್ತಿರುವ ಪುರಸಭೆ ಸದಸ್ಯ ಜಗದೀಶ್ ಹಾಗೂ ಸ್ಥಳೀಯ ನಿವಾಸಿಗಳು.
ಬೇಲೂರು ಪಟ್ಟಣದ ಬೇಲೂರು-ಸಕಲೇಶಪುರ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆಯಲ್ಲೆ ನೀರು ನಿಂತಿರುವುದನ್ನು ವೀಕ್ಷಿಸುತ್ತಿರುವ ಪುರಸಭೆ ಸದಸ್ಯ ಜಗದೀಶ್ ಹಾಗೂ ಸ್ಥಳೀಯ ನಿವಾಸಿಗಳು.
Published on
ಬೇಲೂರು: ಪಟ್ಟಣದ ಬೇಲೂರು-ಸಕಲೇಶಪುರ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಪುರಸಭೆ ಸದಸ್ಯ ಜಗದೀಶ್ ಒತ್ತಾಯಿಸಿದರು.
ಬೇಲೂರು ಪಟ್ಟಣದ ಬೇಲೂರು-ಸಕಲೇಶಪುರ ರಸ್ತೆ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ವೃತ್ತದಿಂದ ವಿಷ್ಣುಸಮುದ್ರ ಕಲ್ಯಾಣಿವರೆಗಿನ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಲು ಲೋಕೋಪಯೋಗಿ ಇಲಾಖೆಯಿಂದ ವರ್ಷದ ಹಿಂದೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ರಸ್ತೆ ಕಾಮಗಾರಿ ಸಂದರ್ಭ ಪಕ್ಕದಲ್ಲೇ ಹಾದು ಹೋಗಿರುವ ಯುಜಿಡಿ ಪೈಪ್‌ಲೈನ್, ಚೇಂಬರ್ ಹಾಕಲಾಗಿದ್ದು, ದುರಸ್ತಿಪಡಿಸಿಲ್ಲ. ಇದರ ಪರಿಣಾಮ ರಸ್ತೆಯಲ್ಲಿ ಚರಂಡಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ ಎಂದರು.
ಕಾಮಗಾರಿ ಕೈಗೊಳ್ಳುವ ಮೊದಲು ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಯುಜಿಡಿ ಪೈಪ್‌ಲೈನ್ ಹಾಗೂ ಚೇಂಬರ್ ಪರಿಶೀಲಿಸಿ ಕಾಮಗಾರಿಗೆ ಮುಂದಾಗುವುದು ಗುತ್ತಿಗೆದಾರ ಮತ್ತು ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಆದರೆ, ಈ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಈ ಸಮಸ್ಯೆ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಯುಜಿಡಿ ಪೈಪ್‌ಲೈನ್, ಚೇಂಬರ್‌ಗಳನ್ನು ದುರಸ್ತಿಗೊಳಿಸಿ ರಸ್ತೆ ಕಾಮಗಾರಿಯನ್ನು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ರಸ್ತೆಯನ್ನು ಅಗೆದು ಚರಂಡಿ ನೀರಿನ ಹರಿವನ್ನು ತಡೆದು ಸಾರ್ವಜನಿಕರೊಂದಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳೀಯ ನಿವಾಸಿ ಬೇಕರಿ ಮಂಜುನಾಥ್ ಮಾತನಾಡಿ, ಕೆಂಪೇಗೌಡ ರಸ್ತೆಯ ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ರಸ್ತೆ ಕಾಮಗಾರಿ ಪೂರ್ತಿಯಾಗಿಲ್ಲದ್ದರಿಂದ ಚರಂಡಿ ನೀರು ರಸ್ತೆಯಲ್ಲೇ ನಿಂತು ದುರ್ವಾಸನೆ ಹರಡುತ್ತಿದೆ. ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಪ್ರತಿದಿನ ಶಾಲಾ ಮಕ್ಕಳು, ವೃದ್ಧರು, ವಾಹನ ಸವಾರರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ನೀರು ನಿಂತಿರುವುದರಿಂದ ಅಪಘಾತ ಸಂಭವಿಸುವ ಆತಂಕ ಕಾಡುತ್ತಿದೆ. ಆದ್ದರಿಂದ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ತಕ್ಷಣ ಯುಜಿಡಿ ವ್ಯವಸ್ಥೆ ದುರಸ್ತಿಪಡಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.
ಸ್ಥಳೀಯರಾದ ರಾಮು, ಶಾಮಣ್ಣ, ಪುಟ್ಟಸ್ವಾಮಿ, ನಾಗಣ್ಣ, ಶೇಖರ್, ಜಹೀರ್, ವತ್ಸ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net