ಜನರ ಹಣದಲ್ಲೇ ರಸ್ತೆ ಸರಿಪಡಿಸಿಕೊಂಡ ಚಿಕ್ಕಹಸಡೆ ನಿವಾಸಿಗಳು
ಗ್ರಾಮಸ್ಥರೇ ಹಣ ಹಾಕಿಕೊಂಡು ತಾಲೂಕಿನ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹಸಡೆ ಗ್ರಾಮದ ರಸ್ತೆ ಅಭಿವೃದ್ಧಿಪಡಿಸುತ್ತಿರುವುದು.
Published on:
Copied
Follow Us
ಬೇಲೂರು: ತಾಲೂಕಿನ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹಸಡೆ ಗ್ರಾಮದ ರಸ್ತೆ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು ಸ್ವಂತ ಹಣ ಹಾಕಿ ರಸ್ತೆ ನಿರ್ಮಿಸಿದ್ದಾರೆ.
ಚಿಕ್ಕಹಸಡೆ ಗ್ರಾಮದ ಸಂಪರ್ಕ ರಸ್ತೆ ಕಳೆದ ಐದು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದಾಗ ಕೆಸರುಮಯವಾಗಿ ಸಂಚಾರ ಅಸಾಧ್ಯವಾಗುತ್ತಿತ್ತು. ರಸ್ತೆ ತುಂಬ ಗುಂಡಿಗಳಿಂದ ಕೂಡಿದ್ದು ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಈ ಕುರಿತು ಸಾಕಷ್ಟು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚಿಕ್ಕಹಸಡೆ ಗ್ರಾಮಸ್ಥರೆ ಒಗ್ಗಟ್ಟಿನಿಂದ ಒಂದು ಲಕ್ಷ ರೂ.ವೆಚ್ಚದಲ್ಲಿ ರಸ್ತೆಗೆ ಜಲ್ಲಿ ಹಾಕಿಸಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮಸ್ಥರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಜನರೇ ಹಣ ಸಂಗ್ರಹಿಸಿ ರಸ್ತೆ ನಿರ್ಮಿಸಬೇಕಾದ ಪರಿಸ್ಥಿತಿ ಎದುರಾಗಿರುವುದು ಸ್ಥಳೀಯ ಆಡಳಿತದ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿ ಎನ್ನುತ್ತಾರೆ ಸ್ಥಳೀಯರು. ಅಲ್ಲದೆ ಇದರೊಂದಿಗೆ ಗ್ರಾಮದ ಉಳಿದ ರಸ್ತೆಗಳನ್ನಾದರೂ ಶಾಶ್ವತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿಕ್ಕಹಸಡೆ ಗ್ರಾಮಸ್ಥ ಸತೀಶ್ ಮಾತನಾಡಿ, ಗ್ರಾಮಕ್ಕೆ ಮೂಲಸೌಕರ್ಯ ಕೊರತೆ ಇದ್ದರೂ ಮೊದಲ ಆದ್ಯತೆಯಲ್ಲಿ ರಸ್ತೆ ನಮ್ಮ ನಿರ್ಮಾಣ ಮಾಡಿಕೊಡುವಂತೆ ಶಾಸಕರಲ್ಲಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾರೂ ಇದರ ಬಗ್ಗೆ ಅವರು ಗಮನ ಹರಿಸಲಿಲ್ಲ. ಅಲ್ಲದೆ ಕಂದಾಯ ಸಂಗ್ರಹವಾಗದ ಹಿನ್ನೆಲೆಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮತ್ತು ಅಕ್ಕಪಕ್ಕದ ತೋಟದ ಮಾಲೀಕರ ಸಹಕಾರದಿಂದ ನಾವೇ ನಮ್ಮ ಗ್ರಾಮಸ್ಥರೆಲ್ಲ ಸೇರಿಕೊಂಡು ರಸ್ತೆ ನಿರ್ಮಾಣ ಮಾಡಿದ್ದೇವೆ. ಈ ಹಿಂದೆ ಶಾಸಕ ಎಸ್.ಕೆ.ಸುರೇಶ್ ಅವರು 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದರು. ಆದರೆ ಒಂದೂವರೆ ಕಿಲೋಮೀಟರ್ ರಸ್ತೆ ಇರುವುದರಿಂದ ತೊಂದರೆಯಾಗುತ್ತಿತ್ತು. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಗ್ರಾಮಸ್ಥರೆಲ್ಲ ಸೇರಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಉಳಿದಿರುವ ರಸ್ತೆಯನ್ನು ಶಾಸಕರು ಮಾಡಿಕೊಡಲಿ ಎಂದು ಆಗಹಿಸುತ್ತೇವೆ. ಇಲ್ಲದಿದ್ದಲ್ಲಿ ಮುಂದಿನ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನದಿಂದ ಹೊರಗೆ ಉಳಿಯುತ್ತೇವೆ ಎಂದು ಎಚ್ಚರಿಸಿದರು.