ಅಪಘಾತ ಸೇರಿದಂತೆ ಯಾವುದೇ ತುರ್ತು ಸಂದರ್ಭ ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಮನೋಭಾವ ಬಿಟ್ಟು ಗಾಯಾಳುಗಳ ನೆರವಿಗೆ ಧಾವಿಸಿ ಮಾನವೀಯತೆಯಿಂದ ವ್ಯಕ್ತಿಯ ಜೀವ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಟ್ಟಣದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅಪಘಾತ ಸಂಭವಿಸಿದ ಸಂದರ್ಭ ಗಾಯಾಳುಗಳು ರಕ್ತಸ್ರಾವದಿಂದ ನರಳುತ್ತಿದ್ದರೂ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡದೆ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಲ್ಲುವುದು ಎಷ್ಟು ಸರಿ. ಅಕಸ್ಮಾತ್ ಕುಟುಂಬ ಸದಸ್ಯರಿಗೆ ಅಪಾಯವಾದಾಗ ನೋವು, ಕಾಳಜಿ ಉಂಟಾಗುತ್ತದೆ. ಅಂತೆಯೇ, ಬೇರೆಯವರ ಕುಟುಂಬದವರಿಗೂ ಜೀವ ಮತ್ತು ಕುಟುಂಬವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಪಘಾತ ಸಂಭವಿಸಿದ ತಕ್ಷಣ 108 ಆಂಬ್ಯುಲೆನ್ಸ್ ಹಾಗೂ 112 ತುರ್ತು ಸೇವೆಗೆ ಕರೆ ಮಾಡಬೇಕು. ಗಾಯಾಳುವನ್ನು ಸಾಧ್ಯವಾದಷ್ಟು ಬೇಗ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ವಾಹನ ಹೊಂದಿರುವವರು ಬೇರೆಯವರು ಸಹಾಯ ಮಾಡಲಿ ಎಂದು ಕಾಯದೆ, ತಾವೇ ಮೊದಲ ಸ್ಪಂದಕರಾಗಿ ನೆರವಿಗೆ ಧಾವಿಸಬೇಕು. ಅಲ್ಲದೆ ಇಂತಹ ಸಂದರ್ಭದಲ್ಲಿ ಸೇವೆ ಸಲ್ಲಿಸಲು ಧರ್ಮಸ್ಥಳ ಸಂಸ್ಥೆಯಿಂದ ಸ್ವಯಂ ಸೇವಕರಿಗೆ ನೀಡುತ್ತಿರುವ ಈ ತರಬೇತಿ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ತರಬೇತಿಯಲ್ಲಿ ಕಲಿತದನ್ನು ತಮ್ಮ ಗ್ರಾಮಗಳಲ್ಲಿ ಜನರಿಗೆ ತಿಳಿಸಬೇಕು. ಒಬ್ಬರು ನಾಲ್ವರಿಗೆ, ಆ ನಾಲ್ವರು ಮತ್ತಷ್ಟು ಜನರಿಗೆ ತಿಳಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ತುರ್ತು ಪರಿಸ್ಥಿತಿಗಳ ಬಗ್ಗೆ ವ್ಯಾಪಕ ಜನಜಾಗೃತಿ ಮೂಡಿಸಬೇಕು. ಸ್ವಯಂ ಸೇವಕರು ತಮಗೆ ದೊರೆತ ಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು. ಚಿಕ್ಕ ಮಕ್ಕಳಿಗೆ ಮಾರ್ಗದರ್ಶನ ನೀಡಿ, ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸುವ ಕಾರ್ಯದಲ್ಲೂ ಸ್ವಯಂ ಸೇವಕರು ಕೈಜೋಡಿಸಬೇಕು. ಶತ್ರುವೇ ಆಗಿದ್ದರೂ ಅಪಘಾತದ ಸಂದರ್ಭ ಮೊದಲು ಜೀವ ಉಳಿಸುವುದೇ ಕರ್ತವ್ಯ. ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲಾಗದು. ಆದ್ದರಿಂದ ಸಂಕಷ್ಟದಲ್ಲಿರುವವರು ಕಂಡಾಗ ಮಾನವೀಯತೆಯಿಂದ ಸ್ಪಂದಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ದಯಾನಂದ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತುರ್ತು ಪರಿಸ್ಥಿತಿ ಎದುರಿಸುವ ಕುರಿತು ಸ್ವಯಂ ಸೇವಕರಿಗೆ ವಿವಿಧ ತರಬೇತಿ ಪಡೆದವರು ಸಮಾಜದ ಒಳಿತಿಗಾಗಿ ಮುಂದಾಗಬೇಕು. ಪ್ರಕೃತಿ ವಿಕೋಪ, ಮಾನವ ನಿರ್ಮಿತ ವಿಕೋಪ, ಅಪಘಾತ, ವಿವಿಧ ಸಂಕಷ್ಟದ ಸಂದರ್ಭಗಳಲ್ಲಿ ಸಿಲುಕುವ ವ್ಯಕ್ತಿಗಳಿಗೆ ತಕ್ಷಣ ನೆರವು ನೀಡಬೇಕು. ಈ ತರಬೇತಿಯ ಪ್ರಮುಖ ಉದ್ದೇಶವಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ತಲುಪಬೇಕು ಎಂಬ ಆಶಯದೊಂದಿಗೆ ಜನಪರ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.
ಎನ್‌ಡಿಆರ್‌ಎಫ್ ಕಮಾಂಡರ್ ಶಾಂತಿಲಾಲ್ ಜಟಿಯಾ, ಅಧಿಕಾರಿಗಳಾದ ಪಾಟೀಲ್ ನಿವೇಶ್, ಅಲ್ವಿನ್ ಜಗದೀಶ್, ಮಾಲತೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಮಂಜುಳಾ, ಜಿಲ್ಲಾ ನಿರ್ದೇಶಕರಾದ ಎಸ್.ಕೆ.ನಾಗೇಶ್, ರಂಗಸ್ವಾಮಿ, ಧರಣೇಶ್, ತರಬೇತಿದಾರರು, ಸ್ವಯಂ ಸೇವಕರಿದ್ದರು.