ಡೇಂಜರ್ ಜೋನ್ ತಲುಪುವ ಮುನ್ನ ಎಚ್ಚೆತ್ತುಕೊಳ್ಳಲಿ

 ಸಿ.ಟಿ.ರವಿ
ಸಿ.ಟಿ.ರವಿ
Published on

ಪ್ರಮುಖ ಮುಖ್ಯಾಂಶಗಳು

  • ಡೇಂಜರ್ ಜೋನ್ ತಲುಪುವ ಮುನ್ನ ಎಚ್ಚೆತ್ತುಕೊಳ್ಳಲಿ
  • ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು
ಹಾಸನ: ಅಕ್ರಮ ವಲಸಿಗರ ಬಗ್ಗೆ ಇಲ್ಲ-ಸಲ್ಲದ ಮಾತನಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ವಾಸ್ತವತೆ ಅರಿವಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲಸಿಗರು ಒಂದೇ ದಿನ ದೇಶದ ಗಡಿ ದಾಟಿ ಬರಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳ, ಅಸ್ಸಾಂ, ನೇಪಾಳ ಮೊದಲಾದ ಕಡೆಗಳಿಂದ ಹಿಂದೆಲ್ಲಾ ದೊಡ್ಡ ಪ್ರಮಾಣದಲ್ಲೇ ವಲಸಿಗರು ದೇಶದೊಳಕ್ಕೆ ಬಂದಿರಬಹುದು ಎಂದರು.
ಸ್ವಾತಂತ್ರ್ಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಸುರಕ್ಷತೆ ಇರಲಿಲ್ಲ, ಆಗ ದೇಶದೊಳಗೆ ಅಕ್ರಮ ಬಂದವರಿಗೆ ರಾಜಮಾರ್ಗ ತೋರಿಸುವ ರಾಜಕೀಯ ವ್ಯವಸ್ಥೆ ಜೀವಂತವಾಗಿತ್ತು. ಅದಕ್ಕೆ ದೊಡ್ಡಮಟ್ಟದ ಶಕ್ತಿ ತುಂಬಿದ್ದು ಕಾಂಗ್ರೆಸ್ ಮತ್ತದರ ಬೆಂಬಲಿತರ ಒಕ್ಕೂಟ ಎಂದು ತಿರುಗೇಟು ನೀಡಿದರು.
ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವ, ಅವರನ್ನು ಹೊರಗೆ ಕಳಿಸಲು ನೀವೇಕೆ ವಿರೋಧ ಮಾಡುತ್ತಿದ್ದೀರಿ? ನಿಮಗೆ ಅಕ್ರಮ ನಿವಾಸಿಗಳ ವೋಟು ಬೇಕಾ? ನಿಮಗೆ ದೇಶ ಹಾಳಾದ್ರೂ ಪರವಾಗಿಲ್ಲ, ನೀವು ಗೆದ್ದರೆ ಸಾಕು, ದೇಶ ಏನಾದರೂ ಆಗಲಿ. ಆದರೆ ನಾವು ನಮ್ಮ ದೇಶ ಸೋಲಲು ಬಿಡಲ್ಲ. ನಾವು ಜಾರಿ ಮಾಡುತ್ತಿರುವ ಸಿಎಎ, ಎಸ್‌ಐಆರ್ ಹಿಂದೆ ರಾಷ್ಟ್ರೀಯ ಹಿತಾಸಕ್ತಿ ಇದೆ. ಆದರೆ ನಿಮಗೆ ಅಕ್ರಮ ಮತ ಬ್ಯಾಂಕ್ ಬಗ್ಗೆ ನಿಮಗೆ ಹಿತಾಸಕ್ತಿ, ಅದನ್ನು ಬಿಟ್ಟು ಬಿಡಿ ಎಂದರು.
ಬೆಂಗಳೂರಿನ ಕೊಗಿಲು ಬಡಾವಣೆಯಲ್ಲಿ ನೀವು ಅಕ್ರಮ ವಲಸಿಗರಿಗೆ ಮನೆ ಕೊಡಲು ಮುಂದಾಗಿದ್ರಿ. ಆದರೆ ನಮ್ಮ ಎಂಟ್ರಿಯಿಂದ ಅದು 49 ಕುಟುಂಬಗಳಿಗೆ ಇಳಿದಿದೆ. ದೇಶ ಸುರಕ್ಷಿತವಾಗಿದ್ದರೆ ರಾಜಕೀಯ ಸುರಕ್ಷಿತವಾಗಿರಲಿದೆ. ಆಗ ಸಂವಿಧಾನವೂ ಸುರಕ್ಷಿತವಾಗಿರಲಿದೆ. ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಎಲ್ಲ ದಾಖಲೆ ಪರಿಶೀಲಿಸಬೇಕು. ಅಕ್ರಮ ನಿವಾಸಿಗಳಿಗೆ ಇಲ್ಲಿ ಆಶ್ರಯ ನೀಡುವ, ನೆಲಗೊಳಿಸುವ ದೊಡ್ಡ ಎಕೋ ಸಿಸ್ಟಂ ಇದೆ. ಬಲಾಢ್ಯ ತಂಡವೇ ಇದೆ ಎಂದು ಅನುಮಾನ ಇದೆ. ಹಾಗಾಗಿ ದಾಖಲೆ ಪರಿಶೀಲನೆ ಮಾಡೋಣ ಎಂದರು ಹೇಳಿದರು.
ಈ ಬಗ್ಗೆ ಕಾಫಿ ಮಂಡಳಿ, ಕೇಂದ್ರ ಸಚಿವರಿಗೂ ಹೇಳಿದ್ದೇವೆ. ರಾಜ್ಯದ ಸಹಯೋಗದೊಂದಿಗೆ ಎಲ್ಲರನ್ನೂ ಪರಿಶೀಲಿಸುವ ಕೆಲಸ ಆಗಬೇಕು. ಎಲ್ಲರ ಮೂಲ ದಾಖಲೆ ಪರಿಶೀಲನೆ ಮಾಡಿ, ಅಕ್ರಮ ಇದ್ದರೆ ಹೊರ ಹಾಕಿ, ಕಾರ್ಮಿಕರ ಅಗತ್ಯ ಇದ್ದರೆ ವಲಸೆ ನಿಯಮ ರೂಪಿಸಿ, ವರ್ಕಿಂಗ್ ವಿಸಾ ಕೊಡೋಣ, ಅದನ್ನು ಬಿಟ್ಟು ಅವರಿಗೆ ಬಿಪಿಎಲ್, ಆಧಾರ್, ವೋಟರ್ ಲಿಸ್ಟ್ ಕೊಟ್ಟು ಸಂವಿಧಾನ ಬುಡಮೇಲು ಅವಕಾಶ ಏಕೆ ಮಾಡಿಕೊಡಬೇಕು ಎಂದು ಪ್ರಶ್ನಿಸಿದರು. ಹಾಗಾಗಿ ಆಧಾರ್ ನಿಜಾಂಶ ಪರಿಶೀಲನೆ ಆಗಲಿ. ಇಲ್ಲದಿದ್ದರೆ ಮುಂದೆ ಕಠಿಣ ಸಂದರ್ಭ ಎದುರಾಗಲಿದೆ. ನಮಗೆ ಕಂಟಕ ಬರಲಿದೆ, ನಾವೇ ಓಡಬೇಕಾದ ಪರಿಸ್ಥಿತಿ ಬರಲಿದೆ, ಪರಿಸ್ಥಿತಿ ಡೇಂಜರ್ ಝೋನ್ ತಲುಪುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಹೆಸರು ಬದಲು ಹಿಂದೆ ಸದುದ್ದೇಶ ಇದ್ದು, ಇದನ್ನು ಅರಿತು ಕಾಂಗ್ರೆಸ್‌ನವರು ವಿರೋಧ ಮಾಡಲಿ, ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.
ಭ್ರಷ್ಟಾಚಾರದಲ್ಲೂ ಹೊಸ ದಾಖಲೆ: ಸಿಎಂ ಸಿದ್ದರಾಮಯ್ಯ ಅವರು ದೇವರಾಜ ಅರಸರ ದಾಖಲೆ ಮುರಿದಿರುವುದೊಂದೇ ಅಲ್ಲ. ಬದಲಾಗಿ ಭ್ರಷ್ಟಾಚಾರ, ಹೆಚ್ಚು ಸಾಲ ಮಾಡುವುದರಲ್ಲಿಯೂ ಹೊಸ ದಾಖಲೆ ಬರೆದಿದ್ದಾರೆ. ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು, ಅತ್ಯಾಚಾರ, ದರೋಡೆ ಇವರ ಅವಧಿಯಲ್ಲೇ ನಡೆದಿದೆ. ಅಡುಗೆ ಎಣ್ಣೆಯಿಂದ ಹಿಡಿದು ಕುಡಿಯುವ ಎಣ್ಣೆವರೆಗೂ ಬೆಲೆ ಏರಿಕೆ ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು. ಎತ್ತಿನಹೊಳೆ ಯೋಜನೆ ವಿಫಲವಾಗಿ ಸಾವಿರಾರು ಕೋಟಿ ನಷ್ಟವಾಗಿ ಲೂಟಿಯಾಗಿದೆ. ಯಾವ ಪ್ರದೇಶಕ್ಕೆ ನೀರು ಹರಿಯಲಿದೆ ಎಂದು ಹೇಳಿದ್ದರೋ ಅದು ಆಗಿಲ್ಲ. ಬದಲಾಗಿ ದುಡ್ಡು ಎತ್ತುವ ಕೆಲಸ ಆಗುತ್ತಿದೆ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net