30ರಂದು ನಾಗರ ನವಿಲೆ ಶ್ರೀನಾಗೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಬಾಗೂರು ಹೋಬಳಿಯ ನವಿಲೆ ಗ್ರಾಮದ ಶ್ರೀ ನಾಗೇಶ್ವರಸ್ವಾಮಿ ಬ್ರಹ್ಮರಥೋತ್ಸವದ ಆಹ್ವಾನ ಪತ್ರಿಕೆಯನ್ನು ತಹಸಿಲ್ದಾರ್ ಜಿ.ಎಸ್.ಶಂಕರಪ್ಪ ಅನಾವರಣಗೊಳಿಸಿದರು. ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಪುಟ್ಟರಾಜ್, ಕುಮಾರಸ್ವಾಮಿ, ಮೋಹನ್, ಸಿದ್ದೇಶ್ ಶಾಸ್ತ್ರಿ, ನಾಗು ಮತ್ತಿತರರಿದ್ದರು.
ಬಾಗೂರು ಹೋಬಳಿಯ ನವಿಲೆ ಗ್ರಾಮದ ಶ್ರೀ ನಾಗೇಶ್ವರಸ್ವಾಮಿ ಬ್ರಹ್ಮರಥೋತ್ಸವದ ಆಹ್ವಾನ ಪತ್ರಿಕೆಯನ್ನು ತಹಸಿಲ್ದಾರ್ ಜಿ.ಎಸ್.ಶಂಕರಪ್ಪ ಅನಾವರಣಗೊಳಿಸಿದರು. ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಪುಟ್ಟರಾಜ್, ಕುಮಾರಸ್ವಾಮಿ, ಮೋಹನ್, ಸಿದ್ದೇಶ್ ಶಾಸ್ತ್ರಿ, ನಾಗು ಮತ್ತಿತರರಿದ್ದರು.
Published on
ಬಾಗೂರು: ಹೋಬಳಿಯ ಪುರಾಣ ಪ್ರಸಿದ್ಧ ನಾಗರ ನವಿಲೆ ಶ್ರೀನಾಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಮಾ.30ರಂದು ಮಧ್ಯಾಹ್ನ 1 ಗಂಟೆಗೆ ಜರುಗಲಿದೆ ಎಂದು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ತಿಳಿಸಿದರು.
ಹೋಬಳಿಯ ನವಿಲೆ ಗ್ರಾಮದ ಶ್ರೀನಾಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವದ ಆಹ್ವಾನ ಪತ್ರಿಕೆಯನ್ನು ಮಂಗಳವಾರ ಅನಾವರಣಗೊಳಿಸಿ ಮಾತನಾಡಿದರು.
ಮಾ.26ರಿಂದ ಏಪ್ರಿಲ್ 1ರ ವರೆಗೆ ವಿಶೇಷ ಪೂಜೆ, ಉತ್ಸವ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಪ್ರತಿದಿನ ನಡೆಯಲಿವೆ ಎಂದು ತಿಳಿಸಿದರು.
ಶ್ರೀನಾಗೇಶ್ವರಸ್ವಾಮಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಹಾಗೂ ತಿಪಟೂರು ಡಿಪೋ ಮೂಲಕ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜತೆಗೆ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು, ಪ್ರತಿದಿನ ದಾಸೋಹ ಭವನದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ನವಿಲೆ ಎನ್. ಪರಮೇಶ್ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ರವರು ಹಾಗೂ ತಾಲೂಕು ದಂಡಾಧಿಕಾರಿಗಳಾದ ಜಿ.ಎಸ್.ಶಂಕರಪ್ಪ ಅವರ ಹೆಚ್ಚಿನ ಸಹಕಾರದೊಂದಿಗೆ ಹಾಗೂ ಭಕ್ತರ ನೆರವಿನೊಂದಿಗೆ ರಥೋತ್ಸವವನ್ನು ನಡೆಸಲಾಗುತ್ತಿದೆ. ಈ ವರ್ಷ ನೂತನ ರಥದಲ್ಲಿ ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ತಾಲೂಕು ಆಡಳಿತದ ವತಿಯಿಂದ ಎಲ್ಲ ಸೌಲಭ್ಯ ಕಲ್ಪಿಸುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ. ನವಿಲೆ ನಾಗೇಶ್ವರ ಸಮಿತಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದಲೂ ರಥೋತ್ಸವಕ್ಕೆ ಹೆಚ್ಚಿನ ಸಹಕಾರ ನೀಡಲಿದ್ದಾರೆ. ರಥೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಾರ್ಚ್ 26ರಿಂದ ಏಪ್ರಿಲ್ 1ರವರೆಗೆ ವಿಶೇಷ ಪೂಜೆ ಉತ್ಸವ: ನವಿಲೆ ನಾಗೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಮಾ.26ರಿಂದ ಏಪ್ರಿಲ್ 1 ರವರೆಗೆ ಪ್ರತಿನಿತ್ಯ ದೇವಾಲಯದಲ್ಲಿ ಅಭಿಷೇಕ, ವಿವಿಧ ಪೂಜೆಗಳು, ಉತ್ಸವಗಳು ನೆರವೇರಲಿವೆ. ಮಾ.30 ರಂದು ನಡೆಯುವ ರಥೋತ್ಸವದ ಅಂಗವಾಗಿ ಶ್ರೀನಾಗೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 5 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ವಿಶೇಷವಾಗಿ ನೆರವೇರಲಿದೆ.
ರಥೋತ್ಸವದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಶರತ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಉಪ ವಿಭಾಗಾಧಿಕಾರಿ ಜಗದೀಶ್, ತಹಸಿಲ್ದಾರ್ ಜಿ. ಎಸ್.ಶಂಕರಪ್ಪ, ಉಪ ತಹಸೀಲ್ದಾರ್ ಮೋಹನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಅಧಿಕಾರಿಗಳು ಭಾಗವಹಿಸುವರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಮೋಹನ್, ಕಂದಾಯ ಅಧಿಕಾರಿ ರಾಜು ಪ್ರೇಮ್ ಕುಮಾರ್, ವೀರಶೈವ ಸಮಾಜದ ಹಿರಿಯರಾದ ಭಕ್ತರಹಳ್ಳಿ ಪುಟ್ಟರಾಜ್, ರಥ ನಿರ್ಮಾಣ ಸಮಿತಿ ಅಧ್ಯಕ್ಷ ಸದಾಶಿವಯ್ಯ, ಕಾರ್ಯದರ್ಶಿ ಜಯದೇವಪ್ಪ, ಖಜಾಂಚಿ ಕುಮಾರಸ್ವಾಮಿ, ಶಿವಾನುಗ್ರಹ ಸೇವಾ ಟ್ರಸ್ಟಿನ ಅಧ್ಯಕ್ಷ ಸಿದ್ದೇಶ್ ಶಾಸ್ತ್ರಿ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net