ತಾಲೂಕಿನ ತುಂಬುದೇವನಗಳ್ಳಿ ಗ್ರಾಮ ಪಂಚಾಯಿತಿಯ ಪ್ರವೇಶದ್ವಾರ ಹಾಗೂ ಗ್ರಂಥಾಲಯವನ್ನು ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ಲೋಲಾಕ್ಷಿ, ಸದಸ್ಯೆ ಲಲಿತಾ, ಜೀವನ್ ಯೋಗೇಶ್, ಮಾಜಿ ಅಧ್ಯಕ್ಷ ಮಲ್ಲೇಶ್, ಅಭಿವೃದ್ಧಿ ಅಧಿಕಾರಿ ವಾಸು, ಆರೋಗ್ಯ ಕೇಂದ್ರದ ದಾದಿ ತಾಸೀನಾ, ಮುಖಂಡರಾದ ಚಂದನ್, ಗುಂಡ, ಸುಭಾಷ್, ಸಂತೋಷ್ ಇತರರು ಇತರರಿದ್ದರು.
ಬೇಲೂರು:ರಾಜ್ಯದಲ್ಲೇ ಪ್ರಥಮವಾಗಿ ಆಯುಷ್ ಆರೋಗ್ಯ ಮಂದಿರವನ್ನು ನಮ್ಮ ಕ್ಷೇತ್ರದ ನಂದಗೋಡನಹಳ್ಳಿ ಗ್ರಾಮದಲ್ಲಿ ಪ್ರಾರಂಭಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬುದೇವನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಗೋಡನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರಧಾನ ಮಂತ್ರಿ ಆಯುಷ್ ಭಾರತ್ 15 ನೇ ಹಣಕಾಸು ಯೋಜನೆಯಲ್ಲಿ ಆಯುಷ್ ಮಂದಿರಕ್ಕೆ ಭೂಮಿ ಪೂಜೆ ಹಾಗೂ ಗ್ರಾಪಂ ಪ್ರವೇಶ ದ್ವಾರ ಮತ್ತು ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಮಲೆನಾಡು ಭಾಗದ ಕೂಲಿ ಕಾರ್ಮಿಕರು, ಬಡವರು, ಶಾಲಾ ಮಕ್ಕಳು, ವೃದ್ಧರು ಕಾಡಾನೆಗಳ ಉಪಟಳದಿಂದ ಜನರು ದೂರದ ಆಸ್ಪತ್ರೆಗಳಿಗೆ ಹೋಗಲು ಆಗುತ್ತಿಲ್ಲ. ಹಾಗಾಗಿ ಈ ಭಾಗದ ಜನರಿಗೆ ಆಯುಷ್ ಕೇಂದ್ರ ತೆರೆದರೆ ಅನುಕೂಲವಾಗುತ್ತದೆ ಎಂದು ಪ್ರಥಮ ಬಾರಿಗೆ ನಂದಗೋಡನಹಳ್ಳಿ ಗ್ರಾಮದಲ್ಲಿ ಆಯುಷ್ ಕೇಂದ್ರ ತೆರೆಯಲು ಭೂಮಿ ಪೂಜೆ ನಡೆಸಿ ಶೀಘ್ರದಲ್ಲೇ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ವೈದ್ಯರು, ಸಿಬ್ಬಂದಿ ಇಲ್ಲಿಯೇ ತಂಗಲು ಕಟ್ಟಡದ ಮೇಲ್ಭಾಗದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಲಾಗುವುದು ಎಂದರು.
ತುಂಬುದೇವನಹಳ್ಳಿ ಗ್ರಾಪಂ ಆವರಣದಲ್ಲಿ 8 ಲಕ್ಷ ರೂ.ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಪ್ರವೇಶ ದ್ವಾರ ಉದ್ಘಾಟಿಸಿದ್ದು, ತಾಲೂಕಿನ 37 ಗ್ರಾಮ ಪಂಚಾಯಿತಿಯ ಪೈಕಿ ತುಂಬುದೇವನಹಳ್ಳಿ ಗ್ರಾಮ ಪಂಚಾಯಿತಿಯಿಂದ ಮೊದಲು ಪ್ರವೇಶದ್ವಾರ ನಿರ್ಮಿಸಿರುವುದು ಶ್ಲಾಘನೀಯವಾಗಿದೆ. ಜತೆಗೆ ಸಾರ್ವಜನಿಕರ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಿಸಿರುವುದು ಸಹ ಉತ್ತಮ ಬೆಳವಣಿಗೆಯಾಗಿದೆ. ಗ್ರಂಥಾಲಯ ಇದ್ದರೆ ಜ್ಞಾನ ಬಂಡಾರ ಇದ್ದಂಗೆ, ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಸುತ್ತದೆ. ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗುತ್ತದೆ. ಡಾ.ಅಂಬೇಡ್ಕರ್ ಅವರು ಗ್ರಂಥಾಲಯದಿಂದಲೇ ಹೆಚ್ಚಿನ ಜ್ಞಾನ ಪಡೆದು ಸಂವಿಧಾನ ಬರೆದಿದ್ದು ಇತಿಹಾಸ. ಅವರಂತೆ ಎಲ್ಲರೂ ಗ್ರಂಥಾಲಯ ಬಳಸಿಕೊಳ್ಳಬೇಕು ಎಂದರು.
ತುಂಬುದೇವನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಮಾತನಾಡಿ, ಈ ಭಾಗದಲ್ಲಿ ಕಡು ಬಡವರಿದ್ದು ಶಾಸಕರು ಹೆಚ್ಚಿನ ಗಮನ ಹರಿಸುತ್ತಿರುವುದು ಸಂತಸ. ಅಲ್ಲದೆ ಈ ಭಾಗದಲ್ಲಿ ಸಮುದಾಯ ಭವನ ಹಾಗೂ ಅಂಬೇಡ್ಕರ್ ಭವನ ಅವಶ್ಯಕತೆ ಇದ್ದು ಶಾಸಕರು ಆದಷ್ಟು ಬೇಗ ಎರಡು ಭವನಗಳನ್ನು ನಿರ್ಮಿಸಿ ಕೊಟ್ಟರೆ ಅನುಕೂಲವಾಗುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಲೋಲಾಕ್ಷಿ, ಸದಸ್ಯೆ ಲಲಿತಾ, ಜೀವನ್ ಯೋಗೇಶ್, ಮಾಜಿ ಅಧ್ಯಕ್ಷ ಮಲ್ಲೇಶ್, ಅಭಿವೃದ್ಧಿ ಅಧಿಕಾರಿ ವಾಸು, ಆರೋಗ್ಯ ಕೇಂದ್ರದ ದಾದಿ ತಾಸೀನಾ, ಮುಖಂಡರಾದ ಚಂದನ್, ಗುಂಡ, ಸುಭಾಷ್, ಸಂತೋಷ್ ಇತರರು ಇತರರಿದ್ದರು.