ಜನರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ವಿಫಲ

 ಪ್ರಿತಂ ಗೌಡ
ಪ್ರಿತಂ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಜನರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ವಿಫಲ
  • ಮಾಜಿ ಶಾಸಕ ಪ್ರೀತಂ ಜೆ.ಗೌಡ ಆರೋಪ
ಹಾಸನ: ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಸ್ಥಳೀಯ ಸಂಸ್ಥೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದು, ನಿಗದಿತ ಸಮಯದಲ್ಲಿ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿ, ಪರಿಹರಿಸಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಒತ್ತಾಯಿಸಿದರು.
ಮೂರ್ನಾಲ್ಕು ತಿಂಗಳಿಂದ ಕ್ಷೇತ್ರದ ಜನರು ವಿವಿಧ ಸಮಸ್ಯೆ ಹೇಳಿಕೊಂಡು ನನ್ನ ಬಳಿಗೆ ಬರುತ್ತಿದ್ದಾರೆ. ಇದರಿಂದ ಹಿಂದಿನ ರೀತಿಯಲ್ಲಿ ಈಗ ಯಾವುದೇ ಕೆಲಸ-ಕಾರ್ಯ ಆಗುತ್ತಿಲ್ಲ ಎಂಬ ನೋವು ಅವರಲ್ಲಿದೆ. ವಿಪರ್ಯಾಸ ಎಂದರೆ ಜನನ-ಮರಣ ಪ್ರಮಾಣ ಪತ್ರ ಪಡೆಯಲು ವಾರಗಟ್ಟೆಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರಿಸಿದರು.
ಸಂಬಂಧಪಟ್ಟ ಆಸ್ಪತ್ರೆ ಹಾಗೂ ಪಾಲಿಕೆಯಲ್ಲಿ ಆರಂಭಿಕ ಡೇಟಾ ಸಂಗ್ರಹಿಸಿಡುವ ಕೆಲಸ ಆಗುತ್ತಿಲ್ಲ. ಇದರಿಂದ ಜನರು ಅಲೆದು, ಕಡೆಗೆ ಸಾವಿರಾರು ಖರ್ಚು ಮಾಡಿ ಕೋರ್ಟ್‌ನಿಂದ ಪಡೆಯುವಂತಾಗಿದೆ. ಮೊದಲೇ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರಿಲ್ಲ. ಹೀಗಾಗಿ ಆಡಳಿತದಲ್ಲಿ ಜಡ್ಡುಗಟ್ಟಿದ್ದು, ಚುರುಕು ನೀಡುವ ಕೆಲಸ ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಆಗಬೇಕು ಎಂದರು.
ಮಹಾನಗರ ಪಾಲಿಕೆಗೆ ಸೇರಿಸಿದ ಹಳ್ಳಿಗಳಿಗೆ ಈವರೆಗೂ ಐಡಿ ನಂಬರ್ ಸಿಗದೆ ರೈತರು, ಜನರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಖಾತೆ, ಇ-ಸ್ವತ್ತು ಮಾಡಿಸಲು ಕಾಯುವಂತಾಗಿದೆ. ಯಾವುದೇ ವಹಿವಾಟು ನಡೆಯುತ್ತಿಲ್ಲ. ಇನ್ನು ವಿವಿಧ ಬಡಾವಣೆಗಳಲ್ಲಿ ರಸ್ತೆ ಹದಗೆಟ್ಟರೆ, ಯುಜಿಡಿ ಬ್ಲಾಕ್ ಆದರೆ, ಕುಡಿಯುವ ನೀರಿನ ಸಮಸ್ಯೆ ಆದರೆ ಶೀಘ್ರ ಪರಿಹಾರ ಲಕ್ಷಣ ಕಾಣುತ್ತಿಲ್ಲ ಎಂದು ದೂರಿದರು.
ಹಾಸನ ಮಹಾನಗರ ಪಾಲಿಕೆ ಆದಾಗಿನಿಂದ ಒಂದೇ ಒಂದು ಹುದ್ದೆ ನೇಮಕ ಆಗಿಲ್ಲ. ಆಡಳಿತಾಧಿಕಾರಿಯಾಗಿರುವ ಮೈಸೂರು ಪ್ರಾದೇಶಿಕ ಆಯುಕ್ತರು ವಾರಕ್ಕೆ ಒಮ್ಮೆಯೂ ಬಂದು ಹೋಗುತ್ತಿಲ್ಲ. ಮಾಜಿ ಚುನಾಯಿತ ಪ್ರತಿನಿಧಿಗಳು ಏನಾದರೂ ಪ್ರಶ್ನೆ ಮಾಡಿದರೆ ನಿಮಗೆ ಸಂಬಂಧ ಇಲ್ಲ ಎನ್ನುತ್ತಾರೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ಜನರ ಸಮಸ್ಯೆ ಇಷ್ಟೊಂದು ಬಿಗಡಾಯಿಸುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೇ.90 ರಷ್ಟು ಜನರ ಹಲವು ರೀತಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮರೀಚಿಕೆಯಾಗಿದೆ. ಹೀಗಾಗಿ ಆಡಳಿತ ವ್ಯವಸ್ಥೆಯ ಜಡತ್ವ ಸರಿಯಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲಲಾಟ ಮೂರ್ತಿ, ಪ್ರಸನ್ನಕುಮಾರ್, ಚಂದ್ರು, ಮಂಜು(ಯೋಗೇಶ್‌ಗೌಡ), ರಾಜೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net