ಪಟ್ಟಣದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣ ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿದರು. ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಜಿಲ್ಲಾ ಸಲಹೆಗಾರರಾದ ಮಮತಾ, ಲೆಕ್ಕಪರಿಶೋಧಕ ಸುರೇಶ್, ತಾಲೂಕು ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಕ ಶಿವಲಿಂಗಯ್ಯ, ಎಚ್.ಪಿ ಜಯರಾಮ್, ಸಿಬ್ಬಂದಿ ಬಿ.ಇ.ವಾಣಿ, ಗೃಹರಕ್ಷಕ ದಳದ ವಿನೋದಮ್ಮ ಇದ್ದರು.
ಚನ್ನರಾಯಪಟ್ಟಣ: ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದ ಹಲವೆಡೆ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಇಲಾಖೆ ಜತೆ ತಂಬಾಕು ನಿಯಂತ್ರಣ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, 42 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ಪಟ್ಟಣದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಪುರಸಭೆ ಆವರಣದ ವಾಣಿಜ್ಯ ಸಂಕೀರ್ಣ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದ ಕೆಲವು ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ಸುಮಾರು 42 ಪ್ರಕರಣಗಳ ಪತ್ತೆ ಹಚ್ಚಿ 4,200 ರೂ. ದಂಡ ವಿಧಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ 18 ವರ್ಷದೊಳಗಿನ ಮಕ್ಕಳು ತಂಬಾಕು ಸೇವನೆ ಮಾಡದಂತೆ ಸೂಚಿಸುವ ನಾಮಫಲಕ ಅಂಗಡಿಗಳಲ್ಲಿ ಪ್ರದರ್ಶನ ಮಾಡುವಂತೆ ಅಧಿಕಾರಿಗಳು ಸೂಚಿಸಿದರು. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಿಯಮಗಳನ್ನು ಕೈಬಿಟ್ಟು ಮಾರಾಟ ಮಾಡುವವರ ವಿರುದ್ಧ ಕಾನೂನು ಪ್ರಕಾರ ದಂಡ ವಿಧಿಸಲಾಗಿದೆ. ಈ ದಾಳಿ ನಿರಂತರವಾಗಿ ಮುಂದುವರೆಯುತ್ತದೆ. ತಂಬಾಕು ಮಾರಾಟ ಸಂಪೂರ್ಣ ಸ್ಥಗಿತಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಜಿಲ್ಲಾ ಸಲಹೆಗಾರರಾದ ಮಮತಾ, ಲೆಕ್ಕಪರಿಶೋಧಕ ಸುರೇಶ್, ತಾಲೂಕು ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಕ ಶಿವಲಿಂಗಯ್ಯ, ಎಚ್.ಪಿ ಜಯರಾಮ್, ಸಿಬ್ಬಂದಿ ಬಿ.ಇ.ವಾಣಿ ಗೃಹರಕ್ಷಕ ದಳದ ವಿನೋದಮ್ಮ ಇದ್ದರು.