ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಕೈಗಾರಿಕೆ ಪ್ರಾರಂಭಿಸಲು ಸಹಕಾರ

ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಡಿಐಸಿಸಿಐ ಹಾಗೂ ನ್ಯಾಷನಲ್ ಎಸ್ಸಿ, ಎಸ್ಟಿ ಹಬ್ ವತಿಯಿಂದ ಆಯೋಜಿಸಿದ್ದ ಉದ್ಯಮ ಅಭಿವೃದ್ಧಿ ಕುರಿತ ವಿಶೇಷ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನರಸಿಂಹಮೂರ್ತಿ, ರವೀಂದ್ರನಾಥ, ಗಂಗಾಧರ್, ರಘುನಂದನ್ ಇತರರಿದ್ದರು.
ಹಾಸನ ನಗರದ ಖಾಸಗಿ ಹೋಟೆಲ್‌ನಲ್ಲಿ ಡಿಐಸಿಸಿಐ ಹಾಗೂ ನ್ಯಾಷನಲ್ ಎಸ್ಸಿ, ಎಸ್ಟಿ ಹಬ್ ವತಿಯಿಂದ ಆಯೋಜಿಸಿದ್ದ ಉದ್ಯಮ ಅಭಿವೃದ್ಧಿ ಕುರಿತ ವಿಶೇಷ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನರಸಿಂಹಮೂರ್ತಿ, ರವೀಂದ್ರನಾಥ, ಗಂಗಾಧರ್, ರಘುನಂದನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಕೈಗಾರಿಕೆ ಪ್ರಾರಂಭಿಸಲು ಸಹಕಾರ
  • ನರಸಿಂಹಮೂರ್ತಿ ಭರವಸೆ ವಿಶೇಷ ಕಾರ್ಯಕ್ರಮ
ಹಾಸನ: ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಕೈಗಾರಿಕೆ ಪ್ರಾರಂಭಿಸಲು ಎಲ್ಲ ರೀತಿಯ ಸಹಕಾರ ನೀಡಲು ಯೋಜನೆಗಳಿದ್ದು, ದಲಿತ ಇಂಡಸ್ಟ್ರಿಯಲ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯೂ ಸಹಕಾರ ನೀಡಲು ಸಿದ್ಧವಿದೆ ಎಂದು ಡಿಐಸಿಸಿಐ ಕರ್ನಾಟಕ ಚಾಪ್ಟರ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಡಿಐಸಿಸಿಐ ಹಾಗೂ ನ್ಯಾಷನಲ್ ಎಸ್ಸಿ-ಎಸ್ಟಿ ಹಬ್ ವತಿಯಿಂದ ಶುಕ್ರವಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಸಹಯೋಗದಿಂದ ಆಯೋಜಿಸಿದ್ದ ಉದ್ಯಮ ಅಭಿವೃದ್ಧಿ ಕುರಿತ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನಗಳು ಸೇರಿದಂತೆ ಉದ್ಯಮಿಗಳಾಗಲು ಕೌಶಲ ತರಬೇತಿ ಮತ್ತು ಉದ್ಯಮಕ್ಕೆ ಮೂಲಸೌಕರ್ಯ ಕೊಡಲು ಸಿದ್ಧವಿದೆ. ಬಂಡವಾಳ ಇಲ್ಲದೆ ಉದ್ಯಮವೇ ಇಲ್ಲ. ಉದ್ಯಮಗಳಿಗೆ ಬಹುತೇಕ ತೊಂದರೆಯೆಂದರೆ ಹಣಕಾಸು ವ್ಯವಸ್ಥೆ ಮತ್ತು ಬಂಡವಾಳ. ಇದಕ್ಕೆ ಬ್ಯಾಂಕ್‌ಗಳು ಹಾಗೂ ಕೆಎಸ್‌ಎಫ್‌ಸಿಯಂತಹ ಹಣಕಾಸು ಸಂಸ್ಥೆಗಳು ಹಣ ನೀಡಲು ಸಿದ್ಧರಿದ್ದಾರೆ. ಬ್ಯಾಂಕಿನವರಿಂದ ಯಾವುದಾದರೂ ಸಮಸ್ಯೆ ಉಂಟಾದರೆ ಡಿಐಸಿಸಿಐಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ದಲಿತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ(ಡಿಐಸಿಸಿಐ), ದಲಿತರಲ್ಲಿ 2005ರಲ್ಲಿ ಉದ್ಯಮಶೀಲತೆಯೇ ಇರಲಿಲ್ಲ. ದಲಿತರೆಂದರೆ ಕೇವಲ ಉದ್ಯೋಗಗಳನ್ನು ಹುಡುಕುವವರು ಎಂದು ಕರೆಯುತ್ತಿದ್ದರು. ಆದರೆ, ನಾವು ಉದ್ಯೋಗ ನೀಡುವವರಾಗಬೇಕು ಎನ್ನುವುದು ಸಂಸ್ಥೆಯ ಆಶಯ ಎಂದರು.
ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಆನೇಕ ಉದ್ಯಮಶೀಲತಾ ಯೋಜನೆಗಳಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಎಸ್‌ಸಿ-ಎಸ್‌ಟಿ ಸಮುದಾಯ ಉದ್ಯಮಪತಿಗಳಾಗಿ ಮುಂದುವರೆದು ಯಶಸ್ವಿಯಾಗಿ ಗೆಲುವು ಸಾಧಿಸಬೇಕು ನಿಮ್ಮೊಂದಿಗೆ ನಮ್ಮ ಸಂಸ್ಥೆ ಸದಾ ಇರುತ್ತದೆ ಎಂದರು.
ಕೆಎಸ್‌ಎಫ್‌ಸಿ ವ್ಯವಸ್ಥಾಪಕ ರವೀಂದ್ರನಾಥ ಮಾತನಾಡಿ, ದಲಿತ ಸಮುದಾಯದ ಉದ್ಯಮಿಗಳಿಗೆ ಪ್ರತ್ಯೇಕವಾದ ಯೋಜನೆ ರೂಪಿಸಲಾಗಿದ್ದು 10 ಕೋಟಿ ರೂ.ವರೆಗೂ ಸಬ್ಸಿಡಿ ಅಡಿಯಲ್ಲಿ 10 ವರ್ಷಗಳ ಕಾಲಾವಾಡಿ ನೀಡಿ ಸಾಲ ನೀಡಲಾಗುತ್ತದೆ. ಬಡ್ಡಿಯಲ್ಲಿಯೂ ಈ ಯೋಜನೆಯಲ್ಲಿ ರಿಯಾಯಿತಿ ಪಡೆಯಬಹುದು. ಇದಲ್ಲದೆ ಎಸ್ಸಿ, ಎಸ್ಟಿ ಸಮುದಾಯದ ಉದ್ಯಮಿಗಳಿಗೆ ಯಾವ ಹೊಸ ಉದ್ಯಮವನ್ನಾದರೂ ಮಾಡಲು ಅವಕಾಶ ನೀಡಲಾಗಿದೆ. ಅದಲ್ಲದೆ ಕ್ವಾಲಟರಲ್ ಸೆಕ್ಯೂರಿಟಿ ನೀಡಲು ಸರ್ಕಾರವು ಶೇ.100ರಷ್ಟು ಸೆಕ್ಯೂರಿಟಿ ನೀಡಲು ಸಹ ಯೋಜನೆಗಳಿವೆ. ಈ ಎಲ್ಲ ಯೋಜನೆಗಳ ಸದುಪಯೋಗವನ್ನು ಎಸ್ಸಿ ಎಸ್ಟಿ ಸಮುದಾಯದ ಯುವಕರು ಉಪಯೋಗಿಸಿಕೊಳ್ಳಬೇಕು ಎಂದರು.
ವಕೀಲ ಗಂಗಾಧರ್ ಬಹುಜನ ಮಾತನಾಡಿ, ಭಾರತದಲ್ಲಿ ಶೇ.33 ರಷ್ಟು ಜನರು ಭೂಮಿ ರಹಿತರಿದ್ದು, ಅದರಲ್ಲಿ ಬಹುಪಾಲು ಜನರು ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರೇ ಆಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಮಂದಿ ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭ ಮಾಡುವ ಕೆಲಸ ಮಾಡುವ ಮೂಲಕ ಉದ್ದಿಮೆದಾರರಾಗುತ್ತಿದ್ದಾರೆ. ಡಿಐಸಿಸಿಐ ದಲಿತ ಉದ್ದಿಮೆದಾರರನ್ನು ಸೃಷ್ಟಿ ಮಾಡಿ ಸದೃಢ ಸಮಾಜ ಕಟ್ಟಲು ಉತ್ತಮ ಕಾರ್ಯಕ್ರಮ ರೂಪಿಸಿದೆ. ಈ ಸಂಸ್ಥೆಯ ಸದುಪಯೋಗ ಪಡೆದುಕೊಳ್ಳುವ ಕೆಲಸವನ್ನು ದಲಿತ ಸಮುದಾಯದ ಯುವ ಪೀಳಿಗೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅತಿಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಭಾರತ ಆಹಾರ ನಿಗಮದ ವ್ಯವಸ್ಥಾಪಕ ರಘುನಂದನ್ ನಿಗಮದ ವತಿಯಿಂದ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜೆಮ್ ಸಂಸ್ಥೆ ವತಿಯಿಂದ ಗೀತಾ, ಎನ್‌ಎಸ್‌ಎಸ್ ಎಚ್.ಒ. ಡಾ.ಸುರೇಶ್, ಎಸ್ಸಿ, ಎಸ್ಟಿ ಹಬ್‌ನ ಸುಜಾತಾ, ಡಿಐಸಿಸಿಐನ ಲೀಗಲ್ ಅಡ್ವೈಸರ್ ಮೂರ್ತಿ, ಡಿಐಸಿಸಿಐನ ಮಂಜುನಾಥ್ ಕಬ್ಬುರು, ಶ್ರೀಕಾಂತ್, ಕೆಎಸ್‌ಎಫ್‌ಸಿ ಸಹಾಯಕ ವ್ಯವಸ್ಥಾಪಕ ಯೋಗಾನಂದ, ಮುಖಂಡರಾದ ಕೃಷ್ಣಕುಮಾರ್, ಗುತ್ತಿಗೆದಾರರ ಸಂಘದ ಐ.ಕೆ.ರಾಮಚಂದ್ರ, ಮಧು ನಾಯಕ, ರವೀಶ್ ಬಸವಾಪುರ, ಬಿಎಸ್ಪಿ ಅತ್ನಿ ಹರೀಶ್, ಶಿವಪ್ಪ ನಾಯಕ ಗೋವಿಂದರಾಜ್, ಧನಂಜಯ, ಶ್ರೀರಕ್ಷಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net