ಜೂನ್ ನಂತರ ಹಾಸನ ಮೆಗಾ ಡೇರಿ ಉದ್ಘಾಟನೆ

ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿದರು, ಶಾಸಕ ಎಚ್.ಡಿ.ರೇವಣ್ಣ, ಸ್ವರೂಪ್ ಪ್ರಕಾಶ್, ಮಹೇಶ್ ಇತರರಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿದರು, ಶಾಸಕ ಎಚ್.ಡಿ.ರೇವಣ್ಣ, ಸ್ವರೂಪ್ ಪ್ರಕಾಶ್, ಮಹೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೂನ್ ನಂತರ ಹಾಸನ ಮೆಗಾ ಡೇರಿ ಉದ್ಘಾಟನೆ
  • ಕಾರ್ಯಕ್ರಮಕ್ಕೆ ಪ್ರಧಾನಿಗೆ ಆಹ್ವಾನ
  • ಎಚ್.ಡಿ.ದೇವೇಗೌಡ ಮಾಹಿತಿ
ಹಾಸನ: ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ದೇಶದ ಪ್ರಮುಖ ಮೆಗಾ ಡೇರಿಯನ್ನು ಜೂನ್ ಬಳಿಕ ಉದ್ಘಾಟಿಸಬೇಕಿದ್ದು, ಅಷ್ಟರೊಳಗೆ ಬಾಕಿ ಕೆಲಸ ಮುಗಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೂಚನೆ ನೀಡಿದರು.
ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಮೆಗಾ ಡೇರಿ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದರಿಂದ ಯಾವುದೇ ಲೋಪದೋಷಗಳಾಗಬಾರದು. ಕೆಲಸ ಬಾಕಿ ಇರುವಾಗಲೇ ಉದ್ಘಾಟನೆಗೆ ಅವರನ್ನು ಆಹ್ವಾನಿಸುವುದು ಸರಿಯಲ್ಲ. ಆದ್ದರಿಂದಲೇ ಖುದ್ದಾಗಿ ಸ್ಥಳ ಪರಿಶೀಲಿಸಿದ್ದೇನೆ. ಇನ್ನೊಂದು ಸಲ ಇಲ್ಲಿಗೆ ಭೇಟಿ ನೀಡಿ ಕೆಲಸ ಪೂರ್ಣಗೊಂಡಿದ್ದರೆ ಅವರನ್ನು ನೇರವಾಗಿ ಭೇಟಿಯಾಗಿ ಆಹ್ವಾನಿಸುತ್ತೇನೆ ಎಂದರು.
900 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಮೆಗಾ ಡೇರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ. ರಾಜ್ಯದ ದಾಕ್ಷಿಣ್ಯ ಇಲ್ಲದೆ ಕೇಂದ್ರ ಸರ್ಕಾರ ಹಾಗೂ ಮಾಜಿ ಸಚಿವ ರೇವಣ್ಣ ಅವರ ಪರಿಶ್ರಮದಿಂದ ಇಷ್ಟು ದೊಡ್ಡ ಕಟ್ಟಡ ನಿರ್ಮಾಣವಾಗಿದೆ. ಕೇಂದ್ರ ಸುಮಾರು 280 ಕೋಟಿ ರೂ. ಅನುದಾನ ಕೊಟ್ಟಿದೆ. ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಿಂದ ಪ್ರತಿದಿನ 15 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಹಿಂದುಸ್ತಾನದಲ್ಲೇ ಅತ್ಯಂತ ದೊಡ್ಡ ಮೆಗಾ ಡೇರಿ ಇದಾಗಲಿದೆ ಎಂದರು.
ಜರ್ಮನಿಯ ತಾಂತ್ರಿಕ ತಜ್ಞರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ರೇವಣ್ಣ ಅವರ ಕಲ್ಪನೆಯಂತೆ ಡೇರಿ ತಲೆ ಎತ್ತಿದೆ. ಪ್ರವಾಸಿ ತಾಣವಾಗಿಸುವ ಉದ್ದೇಶದಿಂದ ಬೋಟಿಂಗ್, ಟ್ರೈನ್ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದಾಗಲೇ ಡೇರಿಯನ್ನು ಉದ್ಘಾಟಿಸುವ ಯೋಚನೆ ಇತ್ತು. ಆದರೆ ಕಾಮಗಾರಿ ಯಾವ ಹಂತದಲ್ಲಿದೆ ಎಂದು ತಿಳಿಯುವ ಉದ್ದೇಶದಿಂದ ನಾನೇ ಮುಂದೂಡಲು ಹೇಳಿದ್ದೆ. ಮೇ 26ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಪಯಣದ ಕುರಿತು ಪುಸ್ತಕವೊಂದನ್ನು ನಾನು ಬಿಡುಗಡೆ ಮಾಡಲಿದ್ದೇನೆ. ಸಮಯ ಸಿಕ್ಕರೆ ಆಗಲೇ ಡೇರಿ ಉದ್ಘಾಟನೆಯ ವಿಷಯ ಪ್ರಸ್ತಾಪಿಸುತ್ತೇನೆ ಎಂದರು.
20 ಸಾವಿರ ಹಸು ನೀಡಬೇಕು: ಜಿಲ್ಲೆಯ ಕಡುಬಡವ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 20 ಸಾವಿರ ರೈತರಿಗೆ ಎಚ್‌ಡಿಸಿಸಿ ಬ್ಯಾಂಕ್ ನೆರವಿನಿಂದ ಹಸುಗಳನ್ನು ನೀಡಲಾಗುತ್ತಿದೆ. ಆದಷ್ಟು ಬೇಗ ಆ ಕೆಲಸ ಮಾಡಬೇಕು. ಎಲ್ಲ ದಾಖಲಾತಿಗಳನ್ನು ಸರಿಯಾಗಿಟ್ಟುಕೊಳ್ಳಬೇಕು. ಪ್ರಧಾನಿ ಕಾರ್ಯಕ್ರಮದಲ್ಲಿ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಹಿಡಿದ ಕೆಲಸ ಮುಗಿಸುವುದು ರೇವಣ್ಣ ಸ್ವಭಾವ
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹಠಮಾರಿ. ಯಾವುದೇ ಕೆಲಸ ಆಗಬೇಕೆಂದರೆ ಅದು ಮುಗಿಯುವವರೆಗೆ ವಿಶ್ರಮಿಸುವುದಿಲ್ಲ. ಮೊಸಳೆಹೊಸಳ್ಳಿ ಇಂಜಿನಿಯರಿಂಗ್ ಕಾಲೇಜು, ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಅವರ ಶ್ರಮ ಸಾಕಷ್ಟಿದೆ ಎಂದು ದೇವೇಗೌಡ ಹೇಳಿದರು.
ಹಳ್ಳಿಗಾಡು ಪ್ರದೇಶದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ 2300 ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಸಣ್ಣ ಸಾಧನೆಯಲ್ಲ. ಹಾಸನ ಮಾತ್ರವಲ್ಲದೆ ಬೀದರ್, ಕಲಬುರಗಿ, ಮಡಿಕೇರಿ ಸೇರಿ ಎಲ್ಲ ಭಾಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಕಾಲೇಜಿನಿಂದ ರೈಲ್ವೆ ನಿಲ್ದಾಣಕ್ಕೆ ಪಾದಚಾರಿ ಮಾರ್ಗದ ಅವಶ್ಯಕತೆ ಇದ್ದು ನಾನು ಸಹ ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.
ದೇಶದಲ್ಲೇ ಪ್ರಥಮ ಸ್ಥಾನಕ್ಕೇರಲು ಸಿಬ್ಬಂದಿ ಶ್ರಮ
ಮಾಜಿ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲೆಯನ್ನು ಶಿಕ್ಷಣ, ಹೈನುಗಾರಿಕೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿಸುವುದು ನಮ್ಮ ಗುರಿ ಎಂದು ಹೇಳಿದರು.
ಮೊಸಳೆಹೊಸಳ್ಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ 2307 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜ್ಯದಲ್ಲೇ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿದೆ ಎಂದರು. ಅಲ್ಲೇ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು 5 ಕೋಟಿ ರೂ. ಅನುದಾನ ಬೇಕಾಗಿದೆ. ಅದನ್ನು ಕೊಡಿಸಲು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮೆಗಾ ಡೇರಿ ದೇಶದಲ್ಲೇ ಪ್ರಥಮ ಸ್ಥಾನಕ್ಕೇರಬೇಕು ಎಂಬ ಗುರಿಯಿಂದ ಎಲ್ಲ ಅಧಿಕಾರಿಗಳು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಕೇವಲ 15 ಕೋಟಿ ರೂ. ಮೊತ್ತದಿಂದ ಆರಂಭವಾದ ಹಾಮೂಲ್ ಸಂಸ್ಥೆ ಇಂದು 4 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದೆ ಎಂದು ಹೆಮ್ಮೆಯಿಂದ ಹೇಳಿದರು.
ಮೆಗಾ ಡೇರಿಗೆ 300 ಕೋಟಿ ರೂ. ಸಾಲ ಪಡೆದಿದ್ದು, ಅದರಲ್ಲಿ 100 ಕೋಟಿ ರೂ. ಈಗಾಗಲೇ ತೀರಿಸಲಾಗಿದೆ. ಐದು ಎಕರೆ ಪ್ರದೇಶದಲ್ಲಿ ಗೋದಾಮು ನಿರ್ಮಾಣ, 150 ರೂ. ಕೋಟಿ ವೆಚ್ಚದ ಪೆಟ್ ಬಾಟಲಿ ಘಟಕ ನಿರ್ಮಿಸಲಾಗಿದೆ ಎಂದರು.
ಜರ್ಮನಿ ತಂತ್ರಜ್ಞಾನ ಸಹಯೋಗದಲ್ಲಿ ನಡೆಯುತ್ತಿರುವ ಬೃಹತ್ ಹಾಲು ಸಂಸ್ಕರಣಾ ಘಟಕ ಮೆಗಾ ಡೇರಿ ಕಾಮಗಾರಿಯನ್ನು 40 ದಿನಗಳಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು. ಈ ವೇಳೆ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಹಾಮೂಲ್ ಎಂಡಿ ಮಹೇಶ್ ಇದ್ದರು.
ಹೆಣ್ಣು ಮಗಳಿಗೆ ಮೂಗುತಿ ಇಲ್ಲದಿದ್ದರೆ ಚೆನ್ನಾಗಿ ಕಾಣಿಸುವುದಿಲ್ಲ. ಅದೇ ರೀತಿ ಮೆಗಾ ಡೇರಿ ಕಾಮಗಾರಿ ಬಾಕಿ ಇರುವಾಗಲೇ ಉದ್ಘಾಟಿಸಿದರೆ ಸರಿಯಾಗುವುದಿಲ್ಲ. ಈ ಡೇರಿ ದೇಶಕ್ಕೆ ಒಂದು ಸಂದೇಶ ನೀಡುವಂತಾಗಬೇಕು.
ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net