ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಗ್ಯಾರಂಟಿ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು. ಡಾ.ಪಿಚ್ಚಳ್ಳಿ ಶ್ರೀನಿವಾಸ, ನಾಗರಾಜ್ ಹೆತ್ತೂರು, ಕೊಟ್ರೇಶ್ ಎಸ್. ಉಪ್ಪಾರ್, ಪ್ರಸಾದ್ ರಕ್ಷಿದಿ, ರವಿ ನಾಕಲಗೂಡು, ಸಾಹಿತಿ ಎನ್.ಶೈಲಜಾ ಹಾಸನ ಇತರರಿದ್ದರು.
ಹಾಸನ:ಜಾನಪದ ಹಾಡುಗಳನ್ನೇ ಉಸಿರಾಗಿಸಿಕೊಂಡಿರುವ ನನ್ನಂತಹ ಕಲಾವಿದರಿಗೆ ವೇದಿಕೆ, ಸತ್ಕಾರ ಸಿಗುವುದು ಸಂತಸದ ಕ್ಷಣ ಎಂದು ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗು ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಸಂತಸ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1979ರಲ್ಲಿ ರೈತ ಸಂಘದಿಂದ ನಡೆದ ಸರಳ ಮದುವೆ ಕಾರ್ಯಕ್ರಮದಲ್ಲಿ ನನಗೆ ಅನಿಸಿದ ಸಾಲುಗಳನ್ನು ಕವಿತೆ ರೂಪದಲ್ಲಿ ಹಾಡಿದ್ದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಗೌರವಪೂರ್ವಕವಾಗಿ ಹಣವನ್ನೂ ಕೊಟ್ಟಿದ್ದರು. ಆ ಬಳಿಕ ಹಾಡಿನ ಗೀಳು ಹೆಚ್ಚಿತು. ರೈತ ಸಂಘದ ಹೋರಾಟಗಳಲ್ಲಿ ಹಾಡು ಹಾಡುತ್ತಾ ಅದನ್ನೇ ಜೀವನವನ್ನಾಗಿ ಮಾಡಿಕೊಂಡೆ ಎಂದು ಜೀವನಾನುಭವ ಹಂಚಿಕೊಂಡರು.
55 ವರ್ಷಗಳಿಂದ ಜಾನಪದ ಕಲೆಯೇ ನನ್ನನ್ನು ಬೆಳೆಸಿಕೊಂಡು ಬಂದಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲೂ ಗುರುತಿಸುವಂತೆ ಮಾಡಿದೆ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎನ್.ಸುಬ್ಬೇಗೌಡ, ಚಿಂತಕ ಜ.ಹೊ.ನಾರಾಯಣಸ್ವಾಮಿ ಹಾಗೂ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಮೊದಲಾದವರ ಆಶೀರ್ವಾದದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಸ್ಮರಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜಾನಪದ ಕಲಾವಿದ ಡಾ.ಪಿಚ್ಚಳ್ಳಿ ಶ್ರೀನಿವಾಸ, ಜಾನಪದ ಹಾಡುಗಳು ಕೇವಲ ಸಂಗೀತ, ರಾಗ ಮಾತ್ರವಲ್ಲದೆ ಜೀವನದ ಅನುಭವಗಳನ್ನು ತೆರೆದಿರುವ ವಿಶಿಷ್ಟ ಕಲೆ. ಜೀವನದ ಅನುಭವಗಳನ್ನು ಕಾವ್ಯ ರೂಪಕ್ಕೆ ತರುವುದು ತಪಸ್ಸಿನ ಕೆಲಸ. ಗ್ಯಾರಂಟಿ ರಾಮಣ್ಣ ಕವಿತೆಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತ ನಾಗರಾಜ್ ಹೆತ್ತೂರು ಮಾತನಾಡಿ, ಹಾಸನದ ಕಂಚಮಾರನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಗ್ಯಾರಂಟಿ ರಾಮಣ್ಣ ಆಫ್ರಿಕಾದಲ್ಲಿ ನಡೆದ ಕಾರ್ಯಕ್ರಮದ ಅತಿಥಿಯಾಗಿ ಆಯ್ಕೆಯಾಗಿರುವುದು ಸಾಧನೆಯೇ ಸರಿ. ಅವರು ನಮ್ಮ ಜಿಲ್ಲೆಯ ಹೆಮ್ಮೆ. ಅವರ ಕಲಾ ಸೇವೆಯನ್ನು ಗೌರವಿಸಬೇಕು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿರುವ ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೆಶ್ ಎಸ್. ಉಪ್ಪಾರ್, ರಂಗಕರ್ಮಿ ಪ್ರಸಾದ್ ರಕ್ಷಿದಿ, ರವಿ ನಾಕಲಗೂಡು, ಸಾಹಿತಿ ಎನ್.ಶೈಲಜಾ ಹಾಸನ, ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ್ ಮತ್ತಿತರರಿದ್ದರು.