ಮಾಡಾಳಿನಲ್ಲಿ ಶ್ರೀಸ್ವರ್ಣ ಗೌರಮ್ಮನ ಜಾತ್ರೆ

ನೂತನ ದೇವಾಲಯದ ಮುಂದೆ ಕರ್ಪೂರದ ಗುಗ್ಗಳ ಸೇವೆ.
ನೂತನ ದೇವಾಲಯದ ಮುಂದೆ ಕರ್ಪೂರದ ಗುಗ್ಗಳ ಸೇವೆ.
Published on
ಅರಸೀಕೆರೆ ಗ್ರಾಮಾಂತರ: ಕಣಕಟ್ಟೆ ಹೋಬಳಿ ಶ್ರೀಕ್ಷೇತ್ರ ಮಾಡಾಳು ಗ್ರಾಮದಲ್ಲಿ ಗೌರಿ-ಗಣೇಶ ಹಬ್ಬವಾದ ಸೋಮವಾರ ವಿಶೇಷ ಸಂಭ್ರಮ-ಸಡಗರ ಮನೆಮಾಡಲಿದೆ.
ವರ್ಷಕ್ಕೊಮ್ಮೆ 12 ದಿನಗಳವರಗೆ ಜರುಗುವ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರಕಲಿದೆ. ಶ್ರೀಗೌರಿ ಮೂರ್ತಿ ತಯಾರಕರಾದ ನಾಗರಾಜ್ ಆಚಾರ್ ಅವರ ಮನೆಯಿಂದ ಗೌರಮ್ಮನನ್ನು ಮೆರವಣಿಗೆ ಮೂಲಕ ದೇಗುಲಕ್ಕೆ ಕರೆತಂದು ಪ್ರತಿಷ್ಠಾಪಿಸಿ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಕೋಡಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸಂಪ್ರದಾಯದಂತೆ ದೇವಿಗೆ ಚಿನ್ನದ ಮೂಗುತಿ ಧರಿಸಲಿದ್ದಾರೆ.
ಸಂಪಿಗೆಯಿಂದ ಬಂದು ನೆಲೆಸಿದ ದೇವಿ:
ಶ್ರೀಕ್ಷೇತ್ರ ಕೋಡಿಮಠದ ದೈವಾಂಶ ಸಂಭೂತ ಶಿವಲಿಂಗಜ್ಜಯ್ಯ ಅವರು ಕ್ರಿ.ಶ.1859ರಲ್ಲಿ ತುಮಕೂರು ಜಿಲ್ಲೆಯ ಸಂಪಿಗೆ ಗ್ರಾಮಕ್ಕೆ ಭೇಟಿ ನೀಡಿ ರಾತ್ರಿ ಹಿಂದಿರುಗುವಾಗ ‘ನಾನು ನಿಮ್ಮೊಡನೆ ಬರುವೆ’ಎಂದು ಅಶರೀರವಾಣಿ ಕೇಳಿಸಿತು. ಆಗ ಶ್ರೀ ಶಿವಲಿಂಗಜ್ಜಯ್ಯ ಸ್ವಾಮೀಜಿ ಅವರು ದಿವ್ಯ ದೃಷ್ಟಿಯಿಂದ ನೋಡಿದಾಗ ಲೋಕ ಕಲ್ಯಾಣಾರ್ಥವಾಗಿ ಈ ಭಾಗಕ್ಕೆ ಬಂದು ನೆಲೆಸುವ ಬಯಕೆಯಂತೆ ಶ್ರೀದೇವಿ ಸಾಕ್ಷಾತ್ ಪಾರ್ವತಿಯಂತೆ ಕಂಗೊಳಿಸುತ್ತಿದ್ದುದು ಗೋಚರಿಸಿತು.ಆ ದೇವತೆ ನೆರಳಿನಂತೆ ಹಿಂಬಾಲಿಸಿ ಸುಕ್ಷೇತ್ರ ಮಾಡಾಳಿಗೆ ಬಂದಾಗ ದೇವಿಯನ್ನು ಯಾರ ಮನೆಯಲ್ಲೂ ಇರಿಸಲು ಇಷ್ಟಪಡದ ಶಿವಲಿಂಗಜ್ಜಯ್ಯ, ಮುದ್ದೇಗೌಡ ವಂಶಸ್ಥರ ಈಗ ಗಂಗಮ್ಮನವರ ಬಾವಿ ಎಂದೇ ಖ್ಯಾತಿಯಾಗಿರುವ ಬಾವಿಯಲ್ಲಿ ಇರು. ಮುಂದೆ ಎಲ್ಲಿ ನೆಲೆಯೂರಬೇಕು ಎಂಬುದನ್ನು ಸಮಯ ಬಂದಾಗ ಆಲೋಚಿಸೋಣ ಎಂದರು. ನಂತರ ಆಕೆಯನ್ನು ಮೃತ್ತಿಕೆಯಲ್ಲಿ ಪ್ರತಿಷ್ಠಾಪಿಸಿ, ಚಿನ್ನದ ಮೂಗುತಿ ಧರಿಸಿ ಪೂಜಿಸಿದರು.
ಮೂಗುತಿ ಸುಂದರಿ ಶ್ರೀಸ್ವರ್ಣ ಗೌರಿ: ಸುಮಾರು 167 ವರ್ಷಗಳ ಇತಿಹಾಸ ಇರುವ ಶ್ರೀಸ್ವರ್ಣ ಗೌರಮ್ಮ ಅವರನ್ನು ಗ್ರಾಮದ ಹೃದಯ ಭಾಗದಲ್ಲಿರುವ ಶ್ರೀಬಸವೇಶ್ವರ ದೇವಾಲಯದಲ್ಲಿ ಪ್ರತಿವರ್ಷ ಭಾದ್ರಪದ ಮಾಸದ ಗೌರಿ ಹಬ್ಬದ ದಿನದಂದು ಪ್ರತಿಷ್ಠಾಪಿಸಿ 12 ದಿನಗಳ ಕಾಲ ಪ್ರತಿಷ್ಠಾಪಿಸಲಾಗುವುದು. ಶ್ರೀಸ್ವರ್ಣ ಗೌರಮ್ಮನವರನ್ನು ವಿಸರ್ಜನೆ ಮಾಡುವ ಕೊನೆಯ ದಿನ ಮೂಗುತಿಯನ್ನು ತೆರವುಗೊಳಿಸಿದ ನಂತರ ದೊಡ್ಡ ಕಲ್ಯಾಣಿಯಲ್ಲಿ ವಿಸರ್ಜಿಸಲಾಗುವುದು.
ಕರ್ಪೂರ ಪ್ರಿಯೆ ಶ್ರೀಸ್ವರ್ಣ ಗೌರಮ್ಮ: ಶ್ರೀಕ್ಷೇತ್ರದ ಶ್ರೀಸ್ವರ್ಣ ಗೌರಮ್ಮ ನವರಿಗೆ ಭಕ್ತರು ಕರ್ಪೂರ ಸೇವೆ, ಗುಗ್ಗಳ ಸೇವೆ, ಮುತ್ತೈದೆ ಬಾಗಿನ ಸಮರ್ಪಿಸಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಸುಮಾರು ಒಂದು ಕೋಟಿ ರೂ.ಗೂ ಹೆಚ್ಚು ಕರ್ಪೂರದ ವ್ಯಾಪಾರ ವಹಿವಾಟು ನಡೆಯುತ್ತದೆ.
ಮೃತ್ತಿಕೆಯಲ್ಲಿ ದೇವಿ ತಯಾರಿಕೆ: ಮಾಡಾಳು ಗ್ರಾಮದ ಬಲಭಾಗದಲ್ಲಿರುವ ಕೆರೆಯ ಪಕ್ಕದಲ್ಲಿ ಶ್ರೀಸ್ವರ್ಣ ಗೌರಮ್ಮ ತಯಾರಿಸಲು ಮೃತ್ತಿಕೆ(ಮಣ್ಣು)ಯನ್ನು ಶಾಸ್ತ್ರೋಕ್ತವಾಗಿ ತಂದು ದೇವಿಯನ್ನು ಶ್ರದ್ಧಾಭಕ್ತಿಯಿಂದ ತಯಾರಿಸಲಾಗುತ್ತದೆ.
ಶ್ರಾವಣ ಮಾಸದ ಮೊದಲ ವಾರದಿಂದಲೇ ದೇವಿ ತಯಾರಿಸುವ ಕಾರ್ಯ ಆರಂಭವಾಗುತ್ತದೆ. ನಾಗರಾಜ್ ಆಚಾರ್ ಅವರ ಕುಟುಂಬದವರು ದೇವಿ ತಯಾರಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ.
ಮಣ್ಣು ತರುವ 15 ದಿನದ ಹಿಂದೆ ವಿಗ್ರಹ ತಯಾರಕರಾದ ಮಧು ಆಚಾರ್ ಅವರು ಪಾರ್ಶ್ವವಾಯುಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಾರಿ ವಿಗ್ರಹ ತಯಾರಿಸಲು ಸಾಧ್ಯವಾಗದು ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಪವಾಡವೆಂಬಂತೆ ಗುಣಮುಖರಾಗಿ ವಾರಾಂತ್ಯದಲ್ಲಿಯೇ ಗೌರಮ್ಮನ ವಿಗ್ರಹದ ತಯಾರು ಮಾಡಿರುವುದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ.
ಮಹಾತಪಸ್ವಿ ಶ್ರೀಶಿವಲಿಂಗಜ್ಜಯ್ಯ ಅವರ ಕೋಟಿ ಜಪದಿಂದ ಹಾಗೂ ಸ್ವರ್ಣ ಮೂಗುತಿ ಮಹಿಮೆಯಂತೆ ಈ ಕ್ಷೇತ್ರಕ್ಕೆ ಸಹಸ್ರಾರು ಭಕ್ತರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಬರುತ್ತಾರೆ. ಹಾಗೆಯೇ ಸಮಯ ಶ್ರೀಶಿವಲಿಂಗಜ್ಜಯ್ಯ ಅವರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ಈಗಲೂ ನಾವು ಪ್ರತಿಷ್ಠಾಪಿಸುವ ದಿನ ಮೂಲ ಶ್ರೀಸ್ವರ್ಣ ಗೌರಮ್ಮನವರಿಗೆ ಮೂಗುತಿ ಧಾರಣೆ ಮಾಡುವುದು ಹಾಗೂ ವಿಸರ್ಜನಾ ಸಮಯದಲ್ಲಿ ಮೂಗುತಿಯನ್ನು ತೆಗೆಯುತ್ತೇವೆ.
ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ,
ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net