ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ

ಅರಸೀಕೆರೆ ನಗರಸಭೆ ವತಿ ಯಿಂದ ಆಯೋಜಿಸಿದ್ದ ಸ್ವಚ್ಛತಾ ಜಾಥಾಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ನಗರ ಸಭೆಯ ಪರಿಸರ ಇಂಜಿನಿಯರ್ ರವಿಕುಮಾರ್, ಆರೋಗ್ಯ ನಿರೀಕ್ಷಕ ರೇವಣ್ಣ ಮತ್ತಿತರರಿದ್ದರು.
ಅರಸೀಕೆರೆ ನಗರಸಭೆ ವತಿ ಯಿಂದ ಆಯೋಜಿಸಿದ್ದ ಸ್ವಚ್ಛತಾ ಜಾಥಾಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ನಗರ ಸಭೆಯ ಪರಿಸರ ಇಂಜಿನಿಯರ್ ರವಿಕುಮಾರ್, ಆರೋಗ್ಯ ನಿರೀಕ್ಷಕ ರೇವಣ್ಣ ಮತ್ತಿತರರಿದ್ದರು.
Published on
ಅರಸೀಕೆರೆ: ನಗರದ ಸ್ವಚ್ಛತೆ ಕಾಪಾಡುವುದು ಪೌರಕಾರ್ಮಿಕರ ಕರ್ತವ್ಯ ಮಾತ್ರವಲ್ಲ, ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್-2.0 ಯೋಜನೆ ಅಡಿ ನಗರಸಭೆ ವತಿಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಹಸಿ ಮತ್ತು ಒಣಕಸ ವಿಂಗಡಣೆ ನಗರದ ಸ್ವಚ್ಛತೆ ಕಾಪಾಡುವಲ್ಲಿ ಜನತೆಯ ಸಹಕಾರ ಕುರಿತು ಆಯೋಜಿಸಿದ್ದ ಸ್ವಚ್ಛತಾ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ನಗರದ ಸ್ವಚ್ಛತೆಯನ್ನು ಕಾಪಾಡಲು ಪೌರಕಾರ್ಮಿಕರು ಹಗಲು ಇರುಳೆನ್ನದೆ ಶ್ರಮಿಸುತ್ತಿದ್ದು ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿಯದೆ ಸಾರ್ವಜನಿಕ ಸ್ಥಳಗಳಲ್ಲಿ ಅಶುಚಿತ್ವಕ್ಕೆ ಕಾರಣವಾಗುತ್ತಿರುವುದು ನಾಗರಿಕ ಸಮಾಜದ ನಡವಳಿಕೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ನಗರ ವ್ಯಾಪ್ತಿಯಲ್ಲಿ ಖಾಸಗಿಯವರು ಹೊಂದಿರುವ ನಿವೇಶನಗಳು ಹಾಗೂ ನೂತನವಾಗಿ ಅಭಿವೃದ್ಧಿಪಡಿಸಿರುವ ಲೇಔಟ್‌ಗಳಲ್ಲಿ ಗಿಡಗಂಟಿಗಳು ಬೆಳೆದು ಕಾಡುಪ್ರಾಣಿಗಳಿಗೆ ಆಶ್ರಯ ತಾಣವಾಗುತ್ತಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಸಂಬಂಧಪಟ್ಟ ನಿವೇಶನದ ಮಾಲೀಕರಿಗೆ ಸೂಚನೆ ನೀಡುವಂತೆ ಸೂಚಿಸಿದರು.
ನಗರದ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಟಿಎಚ್ ರಸ್ತೆಯ ಎರಡು ಬದಿ ಅನಧಿಕೃತವಾಗಿ ಇಟ್ಟಿರುವ ಫುಟ್‌ಪಾತ್ ಅಂಗಡಿಗಳಿಂದ ಫುಟ್‌ಪಾತ್ ಮೇಲೆ ಸಂಚರಿಸುವ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರು ನಿತ್ಯ ಕೇಳಿಬರುತ್ತಿದೆ. ಅಲ್ಲದೆ ನಗರದ ಸೌಂದರ್ಯ ದೃಷ್ಟಿಯಿಂದಲೂ ಈ ಬೆಳವಣಿಗೆ ಸರಿ ಕಾಣುತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದ ಶಾಸಕರು, ಫುಟ್‌ಪಾತ್ ವ್ಯಾಪಾರಿಗಳಿಗೆ ಜೀವನದ ಭದ್ರತೆ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ಶೀಘ್ರದಲ್ಲೇ ಫುಟ್‌ಪಾತ್ ವ್ಯಾಪಾರಿಗಳಿಗೆ ಸೂಕ್ತ ಮಳಿಗೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ನಗರ ದಿನದಿಂದ ದಿನಕ್ಕೆ ವಿಸ್ತಾರವಾಗಿ ಬೆಳೆಯುತ್ತಿರುವುದರ ಜತೆಗೆ ಜನಸಂಖ್ಯೆಯೂ ಏರುತ್ತಿದೆ. ಇದಕ್ಕೆ ಅನುಗುಣವಾಗಿ ನಗರಸಭೆ ವತಿಯಿಂದ ಕಾರ್ಯನಿರ್ವಹಿಸಲು ಪೌರಕಾರ್ಮಿಕರ ಕೊರತೆ ಇದ್ದರೂ ಇರುವ ಪೌರಕಾರ್ಮಿಕರನ್ನು ಬಳಸಿಕೊಂಡು ನಗರದ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ಶ್ರಮಿಸುತ್ತಿದೆ. ಆದರೆ ನಮ್ಮ ಜತೆ ಸಾರ್ವಜನಿಕರ ಸ್ಪಂದನೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆಯ ಪರಿಸರ ಇಂಜಿನಿಯರ್ ರವಿಕುಮಾರ್, ಆರೋಗ್ಯ ನಿರೀಕ್ಷಕ ರೇವಣ್ಣ ಮಂಜುನಾಥ್ ಮತ್ತಿತರರು ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪೌರಕಾರ್ಮಿಕರೊಡಗೂಡಿ ನಗರಸಭೆ ಸಿಬ್ಬಂದಿ ನಗರದಲ್ಲಿ ಜಾಥಾ ನಡೆಸುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಕುರಿತು ಅರಿವು ಮೂಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net