ಶೋಷಿತ ಸಮುದಾಯಗಳು ಶಿಕ್ಷಣಕ್ಕೆ ಒತ್ತು ನೀಡಲಿ

ಅರಸೀಕೆರೆ ನಗರದ ಸಿಂಧೂ ಭವನದಲ್ಲಿ ಮಾದಿಗ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಚಿವರ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಶ್ರೀಷಡಕ್ಷರಿ ಸ್ವಾಮೀಜಿ, ಕೆ.ಎಂ.ಶಿವಲಿಂಗೇಗೌಡ, ಬಸವಂತಪ್ಪ, ನಾರಾಯಣ ಸ್ವಾಮಿ, ವತ್ಸಲಾ ಶೇಖರಪ್ಪ ಇತರರಿದ್ದರು.
ಅರಸೀಕೆರೆ ನಗರದ ಸಿಂಧೂ ಭವನದಲ್ಲಿ ಮಾದಿಗ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಚಿವರ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಶ್ರೀಷಡಕ್ಷರಿ ಸ್ವಾಮೀಜಿ, ಕೆ.ಎಂ.ಶಿವಲಿಂಗೇಗೌಡ, ಬಸವಂತಪ್ಪ, ನಾರಾಯಣ ಸ್ವಾಮಿ, ವತ್ಸಲಾ ಶೇಖರಪ್ಪ ಇತರರಿದ್ದರು.
Published on
ಅರಸೀಕೆರೆ: ಶೋಷಿತರ ಕಲ್ಯಾಣ ಶಿಕ್ಷಣದಿಂದಲೇ ಮಾತ್ರ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ನಗರದ ಸಿಂಧೂ ಭವನದಲ್ಲಿ ಮಾದಿಗ ಸಮುದಾಯದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶಕ್ಕೆ ಸ್ವಾತಂತ್ರೃ ಲಭಿಸಿ ಏಳೆಂಟು ದಶಕ ಕಳೆದರೂ ಸಮುದಾಯ ಮುನ್ನೆಲೆಗೆ ಬರಲು ಸಾಧ್ಯವಾಗಿಲ್ಲ. ರಾಜಕೀಯ, ಶಿಕ್ಷಣ, ಆರ್ಥಿಕ , ಸಾಮಾಜಿಕ ಕ್ಷೇತ್ರದಲ್ಲಿ ನ್ಯಾಯ ಪಡೆಯಲು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಎಲ್ಲ ಬೆಳವಣಿಗೆಗೆ ಶಿಕ್ಷಣ ಪಡೆಯದಿರುವುದು ಪ್ರಮುಖ ಕಾರಣವಾಗಿದೆ ಎಂಬುದನ್ನು ಮರೆಯಬಾರದು. ಸಂಘಟಿತ ಪ್ರಯತ್ನ ಯಶಸ್ಸಿನ ದಾರಿಯಾಗಿದ್ದು, ಒಗ್ಗಟ್ಟಿನ ಹೋರಾಟ ನಡೆಸಬೇಕು. ಹಿಂದುಳಿದಿದ್ದೇವೆ ಎನ್ನುವ ಪದವನ್ನು ತೊಲಗಿಸಬೇಕಾದ ಹೊಣೆ ನಮ್ಮದಾಗಿದ್ದು, ಶೋಷಿತರ ಕಲ್ಯಾಣ ಶಿಕ್ಷಣದಿಂದಲೇ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.
ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಬಸವಂತಪ್ಪ ಮಾತನಾಡಿ, ಒಳ ಮೀಸಲಾತಿ ವರ್ಗೀಕರಣ ಪರಿಪೂರ್ಣವಾಗಿ ಅನುಷ್ಠಾನವಾದಲ್ಲಿ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಪಡೆಯಲು ಅನುಕೂಲವಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಬಸವಣ್ಣನವರ ಎಲ್ಲ ಜನಾಂಗದ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಮೂಲಸೌಕರ್ಯ ಕಲ್ಪಿಸಲಾಗಿದೆ. ಜತೆಗೆ ಬಹುತೇಕ ಸಮುದಾಯಗಳಿಗೆ ಸುಸಜ್ಜಿತ ಭವನ ಕಟ್ಟಿಸಿದ್ದು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವ ಪಾಲಿಸುತ್ತಿದ್ದೇನೆ ಎಂದು ಹೇಳಿದರು.
ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗ ಜಿಲ್ಲೆಯ ಶ್ರೀಷಡಕ್ಷರಿ ಸ್ವಾಮೀಜಿ ಆಶಿರ್ವಚನ ನೀಡಿದರು.
ಮಾಜಿ ಸಂಸದರಾದ ಆನೇಕಲ್ ನಾರಾಯಣಸ್ವಾಮಿ, ಚಂದ್ರಪ್ಪ ಅವರು ಸಮಾಜದ ಪ್ರಗತಿ ಕುರಿತು ಪ್ರಸ್ತಾಪಿಸಿದರು.
ಜಿಪಂ ಮಾಜಿ ಸದಸ್ಯೆ ವತ್ಸಲಾ ಶೇಖರಪ್ಪ, ಮುಖಂಡರಾದ ಎಚ್.ಟಿ.ಶಿವಮೂರ್ತಿ, ಜಯಕುಮಾರ್, ಮಂಜುನಾಥ್, ಕರಿಯಪ್ಪ, ರಾಮಸ್ವಾಮಿ, ಎ.ಪಿ.ಚಂದ್ರಯ್ಯ, ಬಾಣಾವರ ವೆಂಕಟೇಶ್, ಮಾಡಾಳು ಚಂದ್ರಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಸಚಿವರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net