ಶಾಸಕರು, ಸಂಸದರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಗಳನ್ನು ತೆರೆಯು ವಂತೆ ಆಗ್ರಹಿಸಿ 5 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ರೈತ ಸಂಘ ಹಿಂಪಡೆಯಿತು.ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ತಾಲೂಕು ಅಧ್ಯಕ್ಷ ಮಂಜು, ಮನು, ರವಿ, ವೆಂಕಟ ರಾಮು, ಹಳೇಬೀಡು ರಾಜಣ್ಣ, ಹಾಲಪ್ಪ, ನಂಜಪ್ಪ, ತೀರ್ಥಪ್ರಸಾದ್ ಇತರರು ಇದ್ದರು.
ಹಾಸನ: ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯುವಂತೆ ಒತ್ತಾಯಿಸಿ 5 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಸಂಸದರು, ಶಾಸಕರು, ಜಿಲ್ಲಾಧಿಕಾರಿ ತೆರಳಿ ರೈತರ ಮನವಿ ಸ್ವೀಕರಿಸಿದರು. ಶನಿವಾರದಿಂದಲೇ ಜೋಳ ಖರೀದಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಸಂಘ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದೆ.
ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸತತ ಐದು ದಿನಗಳ ಕಾಲ ಹಗಲು-ರಾತ್ರಿ ಪ್ರತಿಭಟನೆ ನಡೆಸಿದ ರೈತರು, ಬೇಡಿಕೆ ಈಡೇರಿಸುವವರೆಗೂ ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದರು.
ಶುಕ್ರವಾರ ಮಧ್ಯಾಹ್ನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹಾಸನಕ್ಕೆ ಆಗಮಿಸಿದ ವೇಳೆ ತಮ್ಮ ಅಹವಾಲುಗಳನ್ನು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ರೈತ ಮುಖಂಡರು ರಸ್ತೆ ತಡೆ ನಡೆಸಿದ್ದರು. ಪೊಲೀಸರು ಮನವೊಲಿಸುವ ಪ್ರಯತ್ನ ಯಶಸ್ವಿಯಾಗಿ, ರಸ್ತೆ ತಡೆ ಹಿಂತೆಗೆದುಕೊಳ್ಳಲಾಯಿತು. ಆದರೆ, ಜಿಲ್ಲಾಧಿಕಾರಿ ಕಚೇರಿ ಎದುರಿನ ಧರಣಿಯನ್ನು ಮುಂದುವರಿಸಿದ ರೈತ ಮುಖಂಡರನ್ನು ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೇಟಿ ಮಾಡಿ, ಕೆಎಂಎಫ್ ಮೂಲಕ ರೈತರಿಂದ ನೇರವಾಗಿ ಜೋಳ ಖರೀದಿ ಮಾಡುವ ಭರವಸೆ ನೀಡಿದರು.
ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶನಿವಾರದಿಂದಲೇ ಪ್ರತಿ ಕ್ವಿಂಟಲ್‌ಗೆ 2400 ದರದಲ್ಲಿ, ಪ್ರತಿ ರೈತನಿಂದ ಗರಿಷ್ಠ 20 ಕ್ವಿಂಟಲ್ ಜೋಳ ಖರೀದಿಸಲು ಸೂಚನೆ ನೀಡಲಾಯಿತು. ದಾಖಲೆಗಳ ಪರಿಶೀಲನೆ ನಡೆಸಿ ಯಾವುದೇ ವಿಳಂಬವಿಲ್ಲದೆ ಜೋಳ ಖರೀದಿ ಆರಂಭಗೊಳ್ಳಲಿದೆ ಎಂದು ರೈತರಿಗೆ ಭರವಸೆ ನೀಡಲಾಯಿತು. ರೈತರಿಂದ ದಾಖಲೆಗಳ ಪೂರ್ಣತೆ ಇರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದರು.
ಬಳಿಕ ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ಕಳೆದ ಐದು ದಿನಗಳಿಂದ ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದೇವೆ. ಈಗ ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಖರೀದಿಗೆ ಭರವಸೆ ನೀಡಿರುವುದರಿಂದ ಪ್ರತಿಭಟನೆ ಹಿಂಪಡೆಯಲಿದ್ದೇವೆ. ಜಿಲ್ಲೆಯ ರೈತರು ಶನಿವಾರದಿಂದಲೇ ಆರಂಭಗೊಳ್ಳುವ ಜೋಳ ಖರೀದಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಖರೀದಿ ವೇಳೆ ಯಾವುದೇ ಅಕ್ರಮ ಅಥವಾ ಲೋಪ ಕಂಡುಬಂದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ತಾಲೂಕು ಅಧ್ಯಕ್ಷ ಮಂಜು, ಮನು, ರವಿ, ವೆಂಕಟರಾಮು, ಹಳೆಬೀಡು ರಾಜಣ್ಣ, ಹಾಲಪ್ಪ, ನಂಜಪ್ಪ, ತೀರ್ಥ ಪ್ರಸಾದ್ ಸೇರಿದಂತೆ ಅನೇಕ ರೈತ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.