ತಾಲೂಕಿನ ತೊಳಲು ಗ್ರಾಮದ ಆಸುಪಾಸಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಓಡಿಸುವಂತೆ ಆಗ್ರಹಿಸಿ ಸುತ್ತಮುತ್ತಲ ಗ್ರಾಮಸ್ಥರು ಬೇಲೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ವೆಂಕಟೇಶ್, ತಾಪಂ ಮಾಜಿ ಸದಸ್ಯ ಶಶಿಕುಮಾರ್, ಮುಖಂಡರಾದ ವಸಂತ್ ಕುಮಾರ್, ರಘು, ಕೋಮರಾಜ್, ಸುನೀಲ್, ದೇವರಾಜ್, ರೋಶನ್, ಅಶ್ವಥ್, ಮಹೇಶ್, ಸುಮನ್, ಅನೀಲ್, ಮಂಜು ಇತರರಿದ್ದರು.
ಬೇಲೂರು:ತಾಲೂಕಿನ ತೊಳಲು-ನವಿಲಹಳ್ಳಿ-ಸಿದ್ದರಹಳ್ಳಿ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳಿಂದ ಬೆಳೆ ಹಾನಿಯಾಗುತ್ತಿದ್ದರೂ, ಆನೆಗಳನ್ನು ಓಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತೊಳಲು ಗ್ರಾಮದಲ್ಲಿ ಬೇಲೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಸದಸ್ಯ ಕುಮಾರ್ ಮಾತನಾಡಿ, ತಾಲೂಕಿನ ತೊಳಲು ಗ್ರಾಪಂ ವ್ಯಾಪ್ತಿಯ ನವಿಲಹಳ್ಳಿ- ಸಿದ್ದರಹಳ್ಳಿ- ಕಂದಾವರ- ತೊಳಲು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕೆಲ ದಿನಗಳಿಂದ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಡುತ್ತಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗಿ ಬೆಳೆ ತಿಂದು ನಾಶ ಪಡಿಸುತ್ತಿದೆ. ಇದರಿಂದ ಲಕ್ಷಾಂತರ ರೂ. ಬೆಳೆ ನಾಶವಾಗುತ್ತಿರುವುದಲ್ಲದೆ, ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಒಂದು ತಿಂಗಳ ಹಿಂದಷ್ಟೇ ಜೋಳ, ಕಾಫಿ, ಅಡಕೆ ಸೇರಿದಂತೆ ಇತರ ಬೆಳೆಗಳನ್ನು ಕಾಡಾನೆಗಳು ನಾಶ ಮಾಡಿ ತೆರಳಿದ್ದವು. ಮತ್ತೆ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಟ್ಟು ಕಾಫಿ ಬೆಳೆಗಳನ್ನು ನಾಶ ಪಡಿಸಿವೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗೆ ಓಡಿಸಬೇಕು. ಜತೆಗೆ ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಜಗದೀಶ್, ವಲಯ ಅರಣ್ಯಾಧಿಕಾರಿ ಯತೀಶ್ ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಇನ್ನೆರಡು ದಿನಗಳಲ್ಲಿ ಕಾಡಾನೆಗಳನ್ನು ಓಡಿಸುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಸದಸ್ಯ ಶಶಿಕುಮಾರ್, ಮುಖಂಡರಾದ ವಸಂತ್ ಕುಮಾರ್, ರಘು, ಕೋಮರಾಜ್, ಸುನೀಲ್, ದೇವರಾಜ್, ರೋಶನ್, ಅಶ್ವಥ್, ಮಹೇಶ್, ಸುಮನ್, ಅನೀಲ್, ಮಂಜು ಇತರರಿದ್ದರು.