ಮೆಕ್ಕೆಜೋಳ ಖರೀದಿಸದಿದ್ದರೆ ಎಪಿಎಂಸಿಗೆ ಬೀಗ

ರೈತ ಸಂಘಟನೆ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ
ರೈತ ಸಂಘಟನೆ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಮೆಕ್ಕೆಜೋಳ ಖರೀದಿಸದಿದ್ದರೆ ಎಪಿಎಂಸಿಗೆ ಬೀಗ
  • ರೈತ ಸಂಘಟನೆ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಎಚ್ಚರಿಕೆ
ಹಾಸನ: ಸರ್ಕಾರದ ನಿಯಮಾನುಸಾರ ಪ್ರತಿ ರೈತರಿಂದ ತಲಾ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಮಾಡದಿದ್ದರೆ ಎಪಿಎಂಸಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘಟನೆ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಎಚ್ಚರಿಸಿದರು.
ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು ಈಗಾಗಲೇ ಬಿಳಿಸುಳಿ ರೋಗದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಪರಿಹಾರ ನೀಡಬೇಕೆಂದು ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದರೂ, ಸರ್ಕಾರ ಈವರೆಗೂ ಪರಿಹಾರ ನೀಡಲು ಮುಂದಾಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನವ್ಯಕ್ತಪಡಿಸಿದರು.
ತಲಾ 50 ಕ್ವಿಂಟಾಲ್ ಜೋಳ ಖರೀದಿ ಮಾಡಬೇಕೆಂಬ ನಮ್ಮ ಒತ್ತಾಯಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಒಪ್ಪಿಗೆ ಸೂಚಿಸಿದರೂ, ಎಪಿಎಂಸಿ ಅಧಿಕಾರಿಗಳು ಇದಕ್ಕೆ ಒಪ್ಪುತ್ತಿಲ್ಲ ಎಂದು ದೂರಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಂ ಶಿವಲಿಂಗೇಗೌಡ ಅವರು ಕೆಎಂಎಫ್ ಹಾಗೂ ಎಪಿಎಂಸಿ ಅಧಿಕಾರಿಗಳನ್ನು ಕರೆದು ಮಾತನಾಡಿ, ನಾಳೆಯಿಂದಲೇ ರೈತರಿಂದ ಜೋಳ ಖರೀದಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ಈವರೆಗೂ ಈ ಕೆಲಸವಾಗಿಲ್ಲ. ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇದರ ವಿರುದ್ಧ ರೈತ ಸಂಘ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರದ ನಿಯಮ ಪಾಲಿಸಿದ ಅಧಿಕಾರಿಗಳು ಪ್ರತಿ ರೈತರಿಂದ ತಲಾ 50 ಕ್ವಿಂಟಾಲ್ ಜೋಳ ಖರೀದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಒಬ್ಬರ ಮೇಲೊಬ್ಬರು ಹೇಳಿಕೊಂಡು ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ನಿಯಮದಂತೆ ಪ್ರತಿ ರೈತರಿಂದ ತಲಾ 50 ಕ್ವಿಂಟಾಲ್ ಜೋಳ ಖರೀದಿ ಮಾಡದಿದ್ದರೆ ಎಪಿಎಂಸಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿಪರ‌್ಯಾಸ ಎಂದರೆ ಜಿಲ್ಲೆಯ ವಿಪಕ್ಷದ ಶಾಸಕರೂ ಇದುವರೆಗೆ ರೈತರ ಪರವಾಗಿ ಧ್ವನಿ ಎತ್ತಿಲ್ಲ. ನಾವು ರೈತರ ಪರ ಎನ್ನುವ ಎಲ್ಲ ಪಕ್ಷದ ಶಾಸಕರು, ರೈತರ ಸಮಸ್ಯೆಗಳಿಗೆ ಕಿವಿಗೊಡುವ ಕೆಲಸ ಮರೆತಿದ್ದಾರೆ ಎಂದು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡ ರಾದ ಶೇಷಣ್ಣ, ಲಕ್ಷ್ಮಣ, ಕಾಂತರಾಜ್, ಮಂಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net