ಕಾಡಾನೆ ಹಾವಳಿ ತಡೆಗೆ ಎಐ ಕ್ಯಾಮರಾ ಕಣ್ಗಾವಲು

ಅರಕಲಗೂಡು ತಾಲೂಕಿನ ಬೈಸೂರು ಗ್ರಾಮದ ಬಳಿ ವನ್ಯಜೀವಿ ಚಲನವಲನ ಅರಿಯಲು ಎಐ ತಂತ್ರಜ್ಞಾನದ ಕ್ಯಾಮರಾ ಅಳವಡಿಸಿರುವುದು.
ಅರಕಲಗೂಡು ತಾಲೂಕಿನ ಬೈಸೂರು ಗ್ರಾಮದ ಬಳಿ ವನ್ಯಜೀವಿ ಚಲನವಲನ ಅರಿಯಲು ಎಐ ತಂತ್ರಜ್ಞಾನದ ಕ್ಯಾಮರಾ ಅಳವಡಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾಡಾನೆ ಹಾವಳಿ ತಡೆಗೆ ಎಐ ಕ್ಯಾಮರಾ ಕಣ್ಗಾವಲು
  • ಅಕಲಗೂಡಿನಲ್ಲಿ ಪ್ರಾಯೋಗಿಕ ಕಾರ್ಯ
  • ಯಶಸ್ವಿಯಾದರೆ ಜಿಲ್ಲೆಯಾದ್ಯಂತ ವಿಸ್ತರಿಸುವ ಉದ್ದೇಶ
ಕೆ.ಆರ್.ಪ್ರಸಿನ್ ಹಾಸನ
ಮಾನವ-ವನ್ಯಜೀವಿ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆಯು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೊರೆ ಹೋಗಿದ್ದು, ಜನ ವಸತಿ ಪ್ರದೇಶದಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ನೂತನ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯ ಅರಕಲಗೂಡು ತಾಲೂಕಿನ ಎರಡು ಕಡೆ ಪ್ರಾಯೋಗಿಕವಾಗಿ ಎಐ ಕ್ಯಾಮರಾ ಅಳವಡಿಸಿದ್ದು, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮಲೆನಾಡು ಭಾಗಕ್ಕೂ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ಕ್ಯಾಮರಾ, ಜಿಪಿಎಸ್ ತಂತ್ರಜ್ಞಾನದ ಮೂಲಕ ಆನೆಗಳ ಚಲನವಲನ ಅರಿಯಲಾಗುತ್ತಿದೆ. ಎಐ ಕ್ಯಾಮರಾ ಮತ್ತು ಏರಿಯಲ್ ಚಿತ್ರಗಳ ಆಧಾರದಲ್ಲಿ ವನ್ಯಜೀವಿಗಳ ಮೇಲೆ ನಿಗಾ ಇರಿಸಲಾಗುತ್ತದೆ. ಸಿಬ್ಬಂದಿಯ ಕಾರ್ಯಾಚರಣೆಯ ವೇಳೆಯೂ ಈ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಜಿಪಿಎಸ್ ಆಧಾರಿತ ಗಸ್ತು ಪಡೆಗಳ ಸಂಪರ್ಕದಲ್ಲಿದ್ದು, ಸಾರ್ವಜನಿಕರಿಂದ ದೂರು ಬಂದೊಡನೆ ಗಸ್ತು ಪಡೆಗಳಿಗೆ ನಿರ್ದೇಶನ ಹೋಗುತ್ತದೆ. ಸೌರ ಬೇಲಿ, ರೈಲು ಕಂಬಿ ಬೇಲಿ, ಆನೆ ತಡೆ ಕಂದಕಗಳ ಮೇಲೆ ಈ ಕ್ಯಾಮರಾಗಳು ನಿಗಾ ಇರಿಸಲಿವೆ. ಇವುಗಳ ಬಳಿ ವನ್ಯಜೀವಿಗಳು ಸುಳಿದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿ ಮತ್ತು ತಂಡಕ್ಕೆ ಮಾಹಿತಿ ರವಾನೆಯಾಗಲಿದೆ.
ಟೆಲಿಗ್ರಾಂ ಗ್ರೂಪ್ ರಚನೆ
ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಸುಧಾರಿತ ತಂತ್ರಜ್ಞಾನವನ್ನು ಈ ಭಾಗದಲ್ಲೇ ಅಳವಡಿಸಬೇಕಿತ್ತಾದರೂ ಅದರ ಕಾರ್ಯವಿಧಾನ ತಿಳಿಯುವುದು ಅರಣ್ಯ ಇಲಾಖೆಗೆ ಪರೀಕ್ಷಾ ಸಂದರ್ಭವಾಗಿದೆ. ಅರಕಲಗೂಡು ತಾಲೂಕಿನಲ್ಲಿ ಬಯಲು ಪ್ರದೇಶ ಇರುವುದರಿಂದ ಕ್ಯಾಮರಾ ಅಳವಡಿಕೆ ಸುಲಭವಾಗುತ್ತದೆ. ಮಲೆನಾಡು ಪ್ರದೇಶದಲ್ಲಿ ಕಾಫಿ ತೋಟಗಳೇ ಹೆಚ್ಚಿರುವುದರಿಂದ ಕ್ಯಾಮರಾ ಅಳವಡಿಕೆ ಸೂಕ್ತವಲ್ಲ. ಅರಕಲಗೂಡಿನಲ್ಲಿ ಯೋಜನೆ ಸಾಫಲ್ಯತೆ ಕಂಡರೆ ಅದನ್ನು ಸಕಲೇಶಪುರ, ಬೇಲೂರು ವ್ಯಾಪ್ತಿಗೆ ವಿಸ್ತರಿಸಲಾಗುತ್ತದೆ. ಜಿಲ್ಲಾ ಅರಣ್ಯ ಅಧಿಕಾರಿ ಸೌರಭ್‌ಕುಮಾರ್ ಅವರ ನೇತೃತ್ವದಲ್ಲಿ ಟೆಲಿಗ್ರಾಂ ಗ್ರೂಪ್ ರಚಿಸಿದ್ದು ಅದರಲ್ಲಿ ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯಾಧಿಕಾರಿಗಳಿದ್ದಾರೆ. ಕಾಡಾನೆ ಓಡಾಟದ ಪ್ರದೇಶದಲ್ಲೇ ಎಐ ಕ್ಯಾಮರಾ ಅಳವಡಿಸಿದ್ದು, ಅವುಗಳು ಕ್ಯಾಮರಾ ಕಣ್ಣಿಗೆ ಬಿದ್ದಾಕ್ಷಣ ಟೆಲಿಗ್ರಾಂಗೆ ಸಂದೇಶ ಬರುತ್ತದೆ. ಆಗ ನಿಯಂತ್ರಣ ಕೊಠಡಿಯಲ್ಲಿರುವ ಸಿಬ್ಬಂದಿ ಪರಿಶೀಲಿಸಿ ತಕ್ಷಣವೇ ಆನೆಯನ್ನು ಯಾವ ದಿಕ್ಕಿಗೆ ಓಡಿಸಬೇಕೆಂದು ನಿರ್ಧರಿಸಿ ಜೋರು ಶಬ್ದವಾಗುವಂತೆ ವಿವಿಧ ಬಗೆಯ ಧ್ವನಿಗಳನ್ನು ಪ್ರಸಾರ ಮಾಡುತ್ತದೆ. ಆ ಸಂದರ್ಭದಲ್ಲಿ ಜನರು ಓಡಾಡುತ್ತಿದ್ದರೆ ಅವರನ್ನು ಅಲ್ಲಿಂದ ದೂರ ಹೋಗುವಂತೆ ಸುಧಾರಿತ ತಂತ್ರಜ್ಞಾನ ಮಾಹಿತಿ ನೀಡಲಿದೆ.
ಕರೆ ಮಾಡಿದರೆ ತುರ್ತು ಸ್ಪಂದನೆ
ಅರಣ್ಯ ಪ್ರದೇಶದ ಹೊರಗೆ ಕಾಡು ಪ್ರಾಣಿಗಳು ಓಡಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ, ಅವರು ಅರಣ್ಯ ಇಲಾಖೆ ಸಹಾಯವಾಣಿ 1926ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಆ ಕರೆಯ ಮಾಹಿತಿ ರಾಜ್ಯ ಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರಕ್ಕೆ ಹೋಗಲಿದೆ. ಅಲ್ಲಿಂದ ಸಂಬಂಧಿತ ವಿಭಾಗೀಯ ಅಥವಾ ವಲಯ ಮಟ್ಟದ ನಿಯಂತ್ರಣ ಕೊಠಡಿಗೆ ನಿರ್ದೇಶನ ರವಾನೆಯಾಗುತ್ತದೆ.
ಮೂಡಿಗೆರೆ ಭಾಗದಿಂದ ವಾಪಾಸ್ಸಾದ ಆನೆಗಳು
ಕಳೆದ ಮೂರು ತಿಂಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಇರಲಿಲ್ಲ. ಆಹಾರ ಅರಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯತ್ತ ತೆರಳಿದ್ದ ಆನೆಗಳು ವಾಪಾಸ್ಸಾಗಿದ್ದು, ಬೇಲೂರು ತಾಲೂಕಿನ ಕೊಗೋಡು, ಸಕಲೇಶಪುರದ ಮತ್ತೂರು ಭಾಗದಲ್ಲಿ ಪ್ರತ್ಯಕ್ಷವಾಗಿವೆ. ಪ್ರಸ್ತುತ 83 ಆನೆಗಳು ಅರಣ್ಯ ಇಲಾಖೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಮೂರು ಗುಂಪುಗಳಾಗಿ ಪ್ರತ್ಯೇಕ ಸಂಚಾರ ನಡೆಸುತ್ತಿವೆ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವುದರಿಂದ ಫಸಲು ನಾಶವಾಗುವ ಆತಂಕವು ಬೆಳೆಗಾರರನ್ನು ಕಾಡುತ್ತಿದೆ.
ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡಲು ಸುಧಾರಿತ ಎಐ ಕ್ಯಾಮರಾಗಳನ್ನು ಅರಕಲಗೂಡಿನ ಎರಡು ಪ್ರದೇಶಗಳಲ್ಲಿ ಅಳವಡಿಕೆ ಮಾಡಿದ್ದು, ಈ ವರೆಗೆ ಆನೆಗಳು ಕ್ಯಾಮರಾ ಕಣ್ಣಿಗೆ ಬಿದ್ದಿಲ್ಲ. ನಾವು ಅಂದುಕೊಂಡಂತೆ ಆನೆಗಳು ಕ್ಯಾಮರಾಗೆ ಸೆರೆ ಸಿಕ್ಕರೆ ಹಿಮೆಟ್ಟಿಸುವ ಪ್ರಯತ್ನ ಸಫಲವಾದರೆ ಬೇಲೂರು, ಸಕಲೇಶಪುರ ಭಾಗದಲ್ಲೂ ಅಳವಡಿಸಲಾಗುವುದು.
ಸೌರಭ್‌ಕುಮಾರ್
ಡಿಎಫ್‌ಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net