ಆದಿಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನ
ಅರಸೀಕೆರೆ ಗ್ರಾಮಂತರ:ಸುತ್ತ ಹತ್ತಾರು ಹಳ್ಳಿಗಳಿಗೆ ಆರಾಧ್ಯ ದೇವತೆಯಾಗಿ ತಾಲೂಕಿನ ಸುಕ್ಷೇತ್ರ ಆದಿಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ನೆಲೆಸಿರುವ ಆದಿಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವ ವೈಭವದಿಂದ ನೆರವೇರಿತು.
ಗೋಧೂಳಿ ಸಮಯದಲ್ಲಿ ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಶುಕ್ರವಾರ ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸುವ ಮೂಲಕ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಸಂಜೆ ಆದಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಶ್ರದ್ಧಾಭಕ್ತಿಯೊಂದಿಗೆ ತಲೆ ಮೇಲೆ ತಂಬಿಟ್ಟಿನ ಆರತಿ ಹೊತ್ತು ತಂದು ದೇವಿಗೆ ಬೆಳಗುವ ಮೂಲಕ ಮನದ ಇಷ್ಟಾರ್ಥಗಳನ್ನು ಪ್ರಾರ್ಥಿಸಿದರು. ಬಳಿಕ ಮಹಾಮಂಗಳಾರತಿಯೊಂದಿಗೆ ಮೊದಲ ದಿನದ ಜಾತ್ರಾ ಮಹೋತ್ಸವ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಶನಿವಾರ ಮುಂಜಾನೆ ಕೆಂಡ ಹಾಯುವ ಸೇವೆ ನಡೆಯಿತು. ಹರಕೆ ಹೊತ್ತಿದ್ದ ನೂರಾರು ಭಕ್ತರು ಕೆಂಡ ಹಾಯುವ ಮೂಲಕ ತಮ್ಮ ಹರಕೆ ತೀರಿಸಿದರು. ಇದಕ್ಕೂ ಮೊದಲು ಶ್ರೀ ಶಂಭುನಾಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಆದಿಲಕ್ಷ್ಮೀ ದೇವಿ ಸೇರಿದಂತೆ ಕ್ಷೇತ್ರ ದೇವತೆಗಳ ಉತ್ಸವವು ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಹಬ್ಬ ಹರಿದಿನಗಳ ಆಚರಣೆಯಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಇದನ್ನು ಅರಿತ ನಮ್ಮ ಪೂರ್ವಿಕರು ಸಾಮೂಹಿಕವಾಗಿ ಎಲ್ಲರೂ ಸೇರಿ ಜಾತ್ರಾ ಮಹೋತ್ಸವ ಆಚರಿಸಬೇಕು ಎಂದರು.
ಆದಿಹಳ್ಳಿ ಗ್ರಾಮದ ಅಧಿದೇವತೆಯಾಗಿ ನೆಲೆಸಿರುವ ಲಕ್ಷ್ಮೀದೇವಿಯು ತನ್ನ ಭಕ್ತರನ್ನ ಉದ್ದರಿಸುತ್ತಾ ಬಂದಿರುವುದರಿಂದ ದೇವಿಯ ಆರಾಧಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ದೇವಿಯ ಮಹಿಮೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.